Wednesday, November 3, 2010ಯಾರೋ ಸಣ್ಣಿದ್ದಾಗ!  


ಯಾಣದ ಮನೆಯಲ್ಲಿ ಮೂಲೆಯ ಕೋಣೆಯಲ್ಲಿ ಒಂದು ದೊಣ್ಣೆ. ಇದು ಯಾಕೋ ಅಜ್ಜಾ.. ಎಂದರೆ ನಿನ್ನಂಥವರು ಬಂದರೆ ಎತ್ತಿ ಬಾರಿಸಲಿಕ್ಕೆ.... ಎಂದು ಬೊಜ್ಜು ಬಾಯಲ್ಲಿ ದೊಡ್ಡ ನಗು. ಮತ್ತೆ ಅಮ್ಮ ಯಾಕೆ ನನ್ನ ಇಲ್ಲಿ ಕರಕೊಂಡು ಬಂದದ್ದು! ಮನಸಲ್ಲಿ ಬಗೆಹರಿಯದ ಗೊಂದಲ. ಮನೆಯಲ್ಲಿ ತಾನು ಕೊಟ್ಟದ್ದು ಸಾಲದು, ಇಲ್ಲಿ ಬಂದೂ ತಿನ್ನಲಿ ನಾಕು ಎಂದಿರಬಹುದು, ಸಣ್ಣ ತಲೆಬಿಸಿ. ಎದ್ದು ಓಡಿ ಹೋಗಿಬಿಡಲೇ? ಪ್ರಶ್ನೆ. ಮಕ್ಕಳ ಕಳ್ಳರು ಹಿಡಕೊಂಡು ಹೋದರೆ? ಭಯ. ತೋಟಕ್ಕೆ ಹೋಗಿ ಕೂತುಬಿಡಲೇ? ಹಾವು ಹರಣೆ ಹರಿದರೆ! ಅಡಗಿ ಕೂತುಬಿಡಲೇ? ಹಸಿವಾದರೆ! ಸತ್ತುಬಿಡಲೇ? ಬಾವಿ ಹಾರಲೇ? ಬಾವಿ ಬಳಿ ಹೋಗಲು ಬಿಟ್ಟೀತೇ ಅಮ್ಮನ ಕೆಂಪು ಕಣ್ಣು? ಮರ ಹತ್ತಿ ಬೀಳಲೇ? ತೆರಕಿನ ಮೇಲೆ ಕಾಲಿಟ್ಟು ಶಬ್ದವಾದರೆ ಬರುವುದು ಅಜ್ಜಿಯ ನಾದಸ್ವರ, ಯಾರಾ.. ಅದು....? ಕೆರೆಯಲ್ಲಿ ಬಳಿದು ಹೋಗಲೇ? ಅವತ್ತು ಎಲ್ಲೋ ಹಾಗೇ ಆಯಿತಂತಲ್ಲ, ಮುಖ ತೊಳೆಯಲು ಹೋದ ಅಷ್ಟು ದೊಡ್ಡವನೇ ಬಳಕೊಂಡು ಹೋದನಂತೆ, ನಾನು ಹೋಗೆನೇ? ಬರುವುದು ಹೊರಗೆ ಮೂಲೆ ಕೋಣೆಯ ದೊಣ್ಣೆ

ಇಷ್ಟೆಲ್ಲ ಯೋಚನೆ ಮಾಡಿ ಮಲಗಿದಲ್ಲೇ ನಿದ್ರೆ ಬಂದುಹೋಗಿ, ಕನಸಿನಲ್ಲಿ ನಾಯಕ ಮಾಸ್ತರರು, ಭಟ್ಟ ಇವತ್ತು ನನಗೆ ಹೇಳದೇ ಶಾಲೆಗೆ ರಜೆ ಹಾಕ್ದೆಯಲ್ಲ? ತಡೆ ನಿಂಗೆ ಮಾಡ್ತೇನೆ, ಎಂದು ದರದರನೆ ಕಾಲು ಹಿಡಿದು ಮಲಗಿದ ಕೋಣೆಯಿಂದ ಹೊರಗೆ ಎಳೆದುಕೊಂಡು ಬಂದು `ಯೇಳಾ' ಎಂದು ಬಾರ್ಕೋಲಿನಲ್ಲಿ ಒಂದು ರಪ್ಪನೆ ಬಾರಿಸಿ ಎಬ್ಬಿಸಿ ಕೂರಿಸಿದರೂ ತುಟಿಗಚ್ಚಿ ಅಳುವನ್ನು ತಡೆದುಕೊಂಡು ಹಿಂದೆ-ಮುಂದೆ, ಅಕ್ಕ-ಪಕ್ಕ ನೋಡದೇ ಮಾಸ್ತರರನ್ನೇ ದುರುಗುಟ್ಟಿ ನೋಡಲು, ಮಾಸ್ತರರಿಗೇ ಇನ್ನೊಂದು ಬಾರಿಸಲು ಕೈಬರದೇ ದಪದಪನೆ ತಮ್ಮಷ್ಟಕ್ಕೆ ನಡೆದು ಹೋದದ್ದನ್ನು ಕಂಡು, ಕಟ್ಟಿಕೊಂಡಿದ್ದರೂ ಅಳಲು ಮನಸೇ ಬಾರದೇ ದೊಡ್ಡಕೆ ಹಾ..ಹ್ಹಾ ಹ್ಹಾ ಎಂದು ನಗಲು........
ಸಾಯಂಕಾಲ ಸಂಧ್ಯಾವಂದನೆಯ ಸಮಯದಲ್ಲಿ ಅಪ್ಪ ಭಸ್ಮ ಮಂತ್ರಿಸಿ ಕೊಟ್ಟ

Tuesday, August 31, 2010

!?

     ?


ರಾಜ್ಯ, ಸ್ವರಾಜ್ಯ, ರಾಮ ರಾಜ್ಯವೆಲ್ಲ ಅಪ್ಪ ಓದಿ ಅಟ್ಟದಲ್ಲಿ ಕಟ್ಟಿಟ್ಟ ಕಥೆ ಪುಸ್ತಕಗಳು! 


ಈಗಿನ ಕಾಲದಲ್ಲಿ ಯಾವುದೋ ಟೀವಿಯವರು, ಪೇಪರಿನವರು ರಾಮಾಯಣದ ಕಾಲಕ್ಕೆ ತಿರುಗುತ್ತಾರೆ. ರಾಮ-ರಾವಣರ ಯುದ್ಧ ನಡೆದ ಜಾಗ ಇದು, ಹನುಮಂತ ಸುಟ್ಟ ಲಂಕೆಯಿದು ಎಂದು ಶ್ರೀಲಂಕಾದ ಯಾವುದೋ ಜಾಗವನ್ನು ತೋರಿಸುತ್ತಾರೆ. ನಾವು ಅದನ್ನು ಕಂಡು ಮನಸಲ್ಲೇ ರಾಮಾಯಣದ ಕಾಲವನ್ನು ಸ್ಮರಿಸುತ್ತೇವೆ. ಆದರೆ ವಾಸ್ತವ ಅದಲ್ಲ. ವಾಸ್ತವದಲ್ಲಿ ರಾಮನ ಸಜ್ಜನಿಕೆ, ಹರಿಶ್ಚಂದ್ರನ ಸತ್ಯವಂತಿಕೆ ಕೆಲಸಕ್ಕೆ ಬರುವಂತಹುದಲ್ಲ. ನಾವು ದಿನಕ್ಕೆ ನೂರಾರು ಜನರೊಂದಿಗೆ ಮಾತನಾಡುತ್ತೇವೆ. ನೂರಾರು ಜನರೊಂದಿಗೆ ಪ್ರಯಾಣ ಮಾಡುತ್ತೇವೆ. ಎಲ್ಲೋ ಮೂಲೆಯಲ್ಲಿ ನಿಂತು ಬ್ರೆಡ್ಡೋ ಬನ್ನಿನೊಂದಿಗೆ ಚಾ ಕುಡಿದು ಹೊಟ್ಟೆಯನ್ನು ಇದೇ ಊಟ ಎಂದು ಸಮಾಧಾನ ಪಡಿಸುತ್ತೇವೆ. ಇಂತಹ ಮಾತು-ಕತೆಯಲ್ಲಿ, ಅವಸರದಲ್ಲಿ, ಅಹಂಕಾರದಲ್ಲಿ ಸಜ್ಜನಿಕೆ, ಸತ್ಯವಂತಿಕೆ, ಮಡಿವಂತಿಕೆಗಳೆಲ್ಲ `ಒಂದಾನೊಂದು ಕಾಲದಲ್ಲಿ ಒಬ್ಬ ರಾಜ......'  ಎಂಬತಹ ಕತೆಗಳೇ ಆಗಿಬಿಡುತ್ತವೆ.
 ನಾನೊಬ್ಬ ಸಜ್ಜನನಾದರೆ, ಸತ್ಯವಂತನಾದರೆ ಜಗತ್ತು ಬದಲಾಗುವುದಿಲ್ಲ. ನಾನು ಬೇರೆಯವರನ್ನು ಬದಲಾಯಿಸಲೂ ಆಗುವುದಿಲ್ಲ. ನೋಡಿ ಕಲಿಯುವ ಜಮಾನಾ ಇದಲ್ಲ. ಬೇರೆಯವರು ಹೇಗೂ ಇರಲಿ ನಾನು ಮಾತ್ರ ಬದಲಾಗುತ್ತೇನೆ ಎಂದು ಹೊರಟರೆ, ಬದಲಾಗುವುದು ದೊಡ್ಡ ಮಾತಲ್ಲ, ಆದರೆ ಬದುಕಲಿಕ್ಕಾಗುವುದಿಲ್ಲ. ಬೆಂಗಳೂರಲ್ಲಿ ಪಾಪ! ಭಿಕ್ಷುಕ ಎಂದು ರುಪಾಯಿ ನಾಣ್ಯ ಹಾಕಿದರೆ `ಹಯ್ಯ್... ಒಂದ್ ರುಪಾಯ್ಗೆ ಈ ಬಿಸ್ಲಲ್ಲಿ ನಿಲ್ಬೇಕಾ ನಾನು?' ಅಂತಾನೆ. ಸೂರತ್ತಿನಲ್ಲಿ ಹಾಕಿದರೆ, `ತುಮ್ಹೀ ರಖೋ ಭಾಯ್, ಚಾಯ್ ಪೀಯೋ ದೇಖೇಂಗೇ' ಅನ್ನುತ್ತಾನೆ. ರಸ್ತೆಯ ಮೇಲೆ ಗಾಡಿಯಡಿಗಾಗಿ ಸತ್ತ ನಾಯಿಯ ಮೇಲೆ ಇನ್ನೊಂದು ನಾಯಿ ಬಂದು ಕಾಲೆತ್ತಿ ನಿರಾತಂಕ ಉಚ್ಚೆ ಹೊಯ್ದು ಹೋಗುತ್ತದೆ. ತಿಂದು ಬಿಸಾಡಿದ ದೋಸೆಯ ಚೂರು ಕಂಡರೆ ಕೂಗಿ ತನ್ನ ಬಳಗವನ್ನು ಕರೆಯುವುದಿಲ್ಲ ಕಾಗೆ. ಸುಮ್ಮನೆ ತಿಂದು ಮೂತಿಯೊರೆಸಿಕೊಂಡು ಹೋಗುತ್ತದೆ ತನ್ನಷ್ಟಕ್ಕೆ. ಹಳೆಯ ಕಾಲದ ಕಥೆಯ ಕೇಳುತ್ತ ಕುಳಿತಾಗ ಅನಿಸುತ್ತದೆ, ಈಗಲೂ ಹಾಗೆಯೇ ಇರಬೇಕಿತ್ತು ಎಂದು. ಆದರೆ ಈಗಿನ ಕಾಲದಲ್ಲಿ ನಾವಿದ್ದೇವೆ ಎಂಬುದು ನಿಜ. ಈಗಿನ ಕಾಲದಲ್ಲಿ ನಾವಿದ್ದೇವೆ ಎಂಬುದು ನಿಜಕ್ಕೂ ಸಾಹಸ, ಹಿಂದಿನ ಕಾಲಕ್ಕೆ ಹೋಲಿಸಿದರೆ!!!!
ಇಲ್ಲಿ ನಾನು, ನನ್ನದು, ನಾವು ನನ್ನವು ಅಷ್ಟೇ ಉಳಿಯುವಂಥದ್ದು. ಬಾಕಿಯೆಲ್ಲ ರಸ್ತೆಯ ಮೇಲೆ ತಿರುಗಾಡುವ ಯಾರದೋ ಚಪ್ಪಲಿಯ ಅಡಿಗಾಗಿ ಹೋಗುವ ಬಾಳೇ ಹಣ್ಣು ಸಿಪ್ಪೆ. 


ಕೊನೆಯಲ್ಲಿ :::
ಗಾಂಧಿ ಕೂಡಾ ರಾಮರಾಜ್ಯದ ಕನಸು ಕಂಡದ್ದೇ ವಿನಃ ಆವಾಗಲೂ ರಾಮರಾಜ್ಯವಾಗಿರಲಿಲ್ಲ. ಅದು ರಾಮನ ಕಾಲದಲ್ಲೇ ಮುಗಿದದ್ದು. ನಮ್ಮ ರಾಜ್ಯದಲ್ಲಿ ರಾಮ ಎಂಬ ವ್ಯಕ್ತಿ ಮುಖ್ಯಮಂತ್ರಿಯಾದರೆ ರಾಮರಾಜ್ಯ ಎಂದು ಕರೆಯಬಹುದೇನೋ 

Sunday, August 29, 2010

ಒಂದು, ಇನ್ನೊಂದು, ಮತ್ತೊಂದು

ಒಂದು ಕಥೆಯ ಹೇಳ್ತೇನೆ:
ಅದು ಒಂದು ಹುಡುಗಿಯ ಫೋಟೊ, ಒಬ್ಬ ಹುಡುಗನ ಕೈಲಿತ್ತು.
ಅದನ್ನು ಕಂಡ ಇನ್ನೊಬ್ಬ ಹುಡುಗನಿಗೆ ಅದರ ಮೇಲೆ ಆಸೆಯಾಯ್ತು. 

ಒಂದು ನಿಮಿಷ, ಇನ್ನೊಂದು ಘಟನೆ ನೆನಪಾಯ್ತು;
ಅದೊಂದು ತರಗತಿ. ಎಂಟನೇ ಕ್ಲಾಸು ಹುಡುಗರಿಗೆ ಮುಂದಿನ ಪೀರಿಯಡ್ಡು ಕಂಪ್ಯೂಟರು. ಎರಡನೇ ಡೆಸ್ಕಿನ ಇಬ್ಬರು ಮಾತಾಡಿಕೊಂಡರು, ಇವತ್ತು ನಾವು ಮಿಸ್ಸಿಗೆ ಕಾಣದ ಹಾಗೇ ಗೇಮ್ಸ್ ಆಡೋಣ ಎಂದು. ಹೌದಾ? ನಾನೂ ಬರ್ತೇನೆ, ಎಂದ ಮೂರನೇ ಡೆಸ್ಕಿನ ಹಟಮಾರಿ. ಅವನು ಹಾಗೆಯೇ ಅಲ್ಲಿಗೆ ಹೋಗಿ ಕುಳಿತ. ಯಾವತ್ತೂ ಕೂರುವ ಮೊದಲನೇ ಡೆಸ್ಕಿನವನಿಗೆ ಅಲ್ಲಿ ಜಾಗವೇ ಇರಲಿಲ್ಲ. ಅವನಿಗೆ ಸಿಟ್ಟು ಬಂತು. ಕಂಡಕಂಡವರಲ್ಲೆಲ್ಲ ಹೇಳಿದ, ಅವ ನೋಡು, ಮೂರನೇ ಡೆಸ್ಕಿನವ, ಕಂಡಕಂಡಲ್ಲೆಲ್ಲ ಕೂರ್ತಾನೆ, ಬಿಡುವುದಿಲ್ಲ ಅವನನ್ನು, ಹೆಡ್ಮಾಸ್ತರರಿಗೆ ಹೇಳ್ತೇನೆ, ಎಂದೆಲ್ಲ ಹಲುಬುತ್ತ ಹಲುಬುತ್ತ ಕ್ಲಾಸೇ ಮುಗಿದುಹೋಯ್ತು. ಹಲುಬಿದವ ಹಲುಬುತ್ತಲೇ ಉಳಿದ. ಮೂರನೇ ಡೆಸ್ಕಿನವ ತನ್ನಷ್ಟಕ್ಕೆ ಆಡಿಕೊಂಡು ಎದ್ದು ಬಂದ.

ಬಿಟ್ಟ ಕಥೆ:
ಆ ಫೋಟೊವ ನನಗೆ ಕೊಡು ಎಂದು ಒಬ್ಬನ ಬಳಿ ಇನ್ನೊಬ್ಬ ಗೋಗರೆದ. `ಅದೆಂಥ ಕಿರಿಕಿರಿ ಮಾರಾಯ ನಿಂದು? ನಂಗೆ ಸಿಕ್ಕ ಹುಡುಗಿಯ ಫೋಟೊ ಹೆಂಡತಿ ಇದ್ದ ಹಾಗೇ. ನಿಂಗೆ ಹೇಗೆ ಕೊಡುವುದು?' ಎಂದು ಒಬ್ಬ ವಾದ ಮಾಡಿದ. ಛೇ, ನನಗೆ ಸಿಗದೇ ಹೋಯ್ತಲ್ಲಾ ಎಂದು  ಬೇಸರವಾಗಿ, ಸಿಟ್ಟುಗೊಂಡು ಎಲ್ಲರ ಬಳಿಯೂ ಹೇಳುತ್ತ ಬಂದ, `ಅವನ ಬಳಿ ಚಂದದ ಹುಡುಗಿಯ ಫೋಟೊ ಉಂಟು'. 'ಹೌದಾ? ನೋಡುವ ತೋರಿಸು' ಎಂದು ಮತ್ತೊಬ್ಬ ದುಂಬಾಲು ಬಿದ್ದ. ಇದೆಂಥ ಅವಸ್ಥೆ ಮಾರಾಯ ನಿಮ್ಮದು? ಒಂದು ಫೋಟೊಕ್ಕಾಗಿ ಹೀಗೆ ಕಚ್ಚಾಡುವುದು, ಎಂದು ಮೇಲಿನ ಕಿಸೆಯಲ್ಲಿದ್ದ ಫೋಟೊವನ್ನು ಪೇಂಟಿನ ಕಿಸೆಯಲ್ಲಿಟ್ಟುಕೊಂಡು ತನ್ನ ಪಾಡಿಗೆ ಹೋಗೇ ಹೋದ. ಈ ವಿಷಯ ಮಗದೊಬ್ಬನ ಕಿವಿಗೂ ಬಿತ್ತು ಒಂದು ದಿನ. ಅವ ಒಬ್ಬನ ಬಳಿಯಿರುವ ಆ ಫೋಟೊವ ಕಂಡು ಎದ್ದಾಡಿ ಬಿದ್ದಾಡಿ ನಗಲಾರಂಭಿಸಿದ, 'ಅಲ್ಲವೋ ಮಾರಾಯ, ಎರಡು ವರ್ಷ ಹಳೇ ಫೊಟೊ ಇಟ್ಟುಕೊಂಡು ತಿರುಗಾಡ್ತೀಯಲ್ಲ, ಅದೂ ಪಾಸ್ಪೋರ್ಟ ಸೈಜಿಂದು ಪೇಂಟಿನ ಕಿಸೆಯಲ್ಲಿಟ್ಕೊಂಡು. ನನ್ನಪ್ಪನ ಸೊಸೆಯಾಗಿರುವ ಅವಳ ಹೊಸ ರೂಪವನ್ನೇ ತೋರಿಸ್ತೇನೆ ನಿಂಗೆ, ನಡೆ ನಮ್ಮನೆಗೆ.'
ಒಬ್ಬ ಆ ಫೋಟೊವ ತೆಗೆದು ಮೋರಿಗೆ ಎಸೆದ.

ಕೊನೆಯಲ್ಲಿ ಹೊಳೆದದ್ದು::
ನಮ್ಮೂರಿನಲ್ಲೊಬ್ಬ ಶ್ರೀಪತಿ. ನನ್ನೆದುರಿಗೆ ನಿಂತು 'ನಮ್ಮೂರಿನಲ್ಲಿ ಯಾವನಾ ಅವ ನಾಟಕ ಬರೆಯುವುದು? ಎಂದು ಮುಸಿ ಮುಸಿ ನಕ್ಕ............... ನಕ್ಕ.................... ನಕ್ಕ................... ಹೆ ಹ್ಹೆ ಹ್ಹೇ....... ನಗುತ್ತಲೇ ಉಳಿದ!

ಏಸಿ ಧ್ಯಾನ

ಇದೇ ಆರಾಮು
ಕಾಡಿನಲ್ಲಿ  ಗದ್ದಲ ಎಂದು ಮನೆಗೆ ಬಂದು ಕದ ಹಾಕಿಕೊಂಡು ಏಸಿ ಹಾಕಿ ಧ್ಯಾನಕ್ಕೆ ಕುಳಿತ. ಸ್ವಲ್ಪ  ಚಳಿ ಚಳಿಯಾಯಿತು ಅರ್ಧ ಗಂಟೆಗೇ! ಎದ್ದು ಏಸಿ ಬಂದ್ ಮಾಡಿ ಮತ್ತೆ ಕಣ್ಣು ಮುಚ್ಚಿ ಕುಳಿತ. ಹಚ್ಚಿದ್ದ ಒಂದು ಊದಿನ ಕಡ್ಡಿ ಏಸಿ ರೂಮಿನ ತುಂಬ ಹೊಗೆಯಾಯಿತು. ಒಮ್ಮೆ ಬಾಗಿಲು ತೆಗೆದು ಹೊಗೆ ಹೊರಗೆ ಹೋಗುವ ತನಕ ಕಾದು ಮತ್ತೆ ಬಾಗಿಲು ಹಾಕಿ ಬಂದು ಕೂರಲೇ ಎನಿಸಿತು. ಹಾಗೇ ಮಾಡಿದ. ಮತ್ತೆ ಧ್ಯಾನ!!
ಎರಡು ನಿಮಿಷವೂ ಕಳೆಯಲಿಲ್ಲ ಕಣ್ಣು ಮುಚ್ಚಿ ಕುಳಿತು, ಮೊಬೈಲು ಕುಂಯ್ಯೆಂದಿತು.. ಕಣ್ಬಿಟ್ಟು ನೋಡಿದರೆ ಮಗಳು; ಹೊರಗಿನಿಂದ ಒಳಗೆ ಕಾಲ್ ಮಾಡಿದ್ದಾಳಿರಬಹುದು, ಓ, ಇಲ್ಲ, ಜಯನಗರಕ್ಕೆ ಹೋಗಿದ್ದಾಳೆ. ಏನಾಗಿರಬಹುದು? ಫೋನೆತ್ತಿದರೆ, 'ಅಪ್ಪಾ, ಇವನನ್ನು ಕರಕೊಂಡು ಬರಲೇ? ಅದೇ, ನಿನ್ನೆ ರಾತ್ರೆ ಹೇಳಿದ್ದೆನಲ್ಲ' ಮಗಳ ದನಿ. ಹಾಳಾಗಿ ಹೋಯಿತು ಧ್ಯಾನ. ಮಗಳು ತನ್ನಿನಿಯನನ್ನು ಮನೆಗೆ ಕರೆತರಲೇ ಎಂದಾಗ ಸುಗಮವಾಗಿ ಹೇಗೆ ಸಾಗಬಹುದು ಧ್ಯಾನ!?
ಹಾಗಾಗಿ ಈ ಜಂಜಡವೇ ಬೇಡ ಎಂದು ಕಾಡಿಗೆ ಹೋದ. ಅಲ್ಲಿಗೆ ಹೋದರೆ ಎಲ್ಲೋ ದೂರದಲ್ಲಿ ಮರ ಕಡಿಯುವ ಸದ್ದು. ಹಿಂಬದಿಯ ಪೊದೆಯಿಂದ ಕೇಳಿಬರುವ ಪ್ರೇಮಿಗಳಿಬ್ಬರ ಕಿಸಿಕಿಸಿ ನಗು. ಓ....ಅಲ್ಲಿಯಂತೂ ಕಂಡರೂ ಕಾಣದಂತೇ ಕೇಳಿಯೂ ಕೇಳದಂತೇ ಹೋಗುವ ಪರಿಸ್ಥಿತಿ. ಇವುಗಳ ಮಧ್ಯೆ ಧ್ಯಾನ ಮಾಡಿ ಗೆದ್ದೆ ನಾನು ಎಂದುಕೊಂಡು ವಾಪಸು ಮನೆಗೆ ಓಡೋಡಿ ಬಂದು ಏಸಿ ರೂಮಿನಲ್ಲಿ ಕುಳಿತರೆ ಮಗಳ ಕಾಟ. ಇನ್ನು ಹೆಂಡತಿಯೂ ಕರೆಯುವಳು, ಅಳಿಯ ಬರುವನಂತೆ ಸ್ವಲ್ಪ ತುಪ್ಪ ಮತ್ತು ರವೆ ತನ್ನಿ ಶಿರಾ ಮಾಡುವ ಎಂದು. ಅರಿಷಡ್ವರ್ಗವನ್ನು ಮೀರಿ, ಭವಸಾಗರವನ್ನು ದಾಟಿ ಇನ್ನಾದರೂ ಮುಕ್ತಿಯ ಮಾರ್ಗವನ್ನು ಹಿಡಿಯೋಣ ಎಂದರೆ ಅದಕ್ಕೂ ಅಡ್ಡಿಯೇ. ಸ್ವಾಮೀಜಿಯ ಮಾತುಗಳು ಇರಲಿ ಅವರೊಂದಿಗೇ ಖಾಯಂ. ಉಪ್ಪು ಖಾರ ಉಣ್ಣಿಸಿ ಬೆಳೆಸಿಕೊಂಡು ಕಾಪಾಡಿಕೊಂಡು ಬಂದ  ದೇಹವಿದು. ಇಂದು ಏಕ್ದಮ್ ಉಪ್ಪೂ ಹಾಕದ ಗಂಜಿಯೂಟ ಮಾಡು ಎಂದರೆ ಸಹಿಸುವುದೇ ನಾಲಗೆ? 'ಸಾಯ್ಲಿ ಧ್ಯಾನ' ಎಂದು ಮತ್ತೆ ಏಸಿ ಹಾಕಿ, ಹೊದ್ದು ಮಲಗಿಬಿಟ್ಟ.

Sunday, August 22, 2010

ಹೆಂಗುಸ್ರ ಸಿನೇಮ


          `ನಾವು ಹೆಂಗಸರೆಲ್ಲ ಸೇರಿ ಒಂದು ಸಿನೇಮ ಮಾಡ್ತಿದ್ದೇವೆ, ನೀನು ಹಾಡು ಬರೆ ಆಯ್ತಾ?' ಎಂದಳಾ ಹೆಂಗಸು. ಈ ಹೆಂಗಸರಿಗೆ ಸಿನೇಮವನ್ನೇ ಮಾಡ್ಲಿಕ್ಕೆ ಬರ್ತದೆ, ಒಂದಾರು ಹಾಡು ಬರೆಯಲಿಕ್ಕೆ ಬರದಾ? ಏನಿರಬಹುದು ಈ ಸಿನೇಮದಲ್ಲಿ!? ಅದೇ ಮಣ್ಣೆಟ್ಟೆ ಪ್ರೀತಿ!!!
         ನೀನು ಹುಡುಗಿ ನಾನು ಹುಡುಗ.. ನಾನು ಚಂದ್ರ ನೀನು ಭೂಮಿ. ನಮ್ಮಿಬ್ಬರ ನಡುವೆ ಪ್ರೀತಿಯ ತಂಗಾಳಿ. ನಾನು ಚಂದ್ರ ನೀನು ಭೂಮಿ. ಭೂಮಿಯ ಸುತ್ತುತ್ತಿರುವ ಚಂದ್ರ, ಭೂಮಿ ಚಂದ್ರರ ಸುತ್ತುತ್ತಿರುವ ತಂಗಾಳಿ. ಜಾಸ್ತಿ ನಲಿಯಬೇಡ ಚೆಲುವೇ, ತಂಗಾಳಿಯೆಂದು ಬಿರುಗಾಳಿಯಾಗುವುದೋ ಕಾಣೆ. ಮುಂದಿದೆ ನಾಳೆ. ನಿನ್ನೆಯ ನಾಳೆಯಲ್ಲಿ ತಂಗಾಳಿಯಿದೆ. ದಿನವೂ ತಂಗಾಳಿಯೇ ಬೀಸುತ್ತಿದ್ದರೆ ಸ್ವರ್ಗಕ್ಕೂ ಈ ಲೋಕಕ್ಕೂ ವ್ಯತ್ಯಾಸವೇನುಳಿಯಿತು? ಬಾ ಬಾ ಕನಸಿಂದ ಹೊರಗೆ. ಸಾಕು ಸಾಕು ನಿದ್ರೆ. ಏಳು. ಒಂದು ಕಾಗದದ ಚೂರು ಬಂದು ಬಿದ್ದಿದೆ ನೋಡು ನಿನ್ನ ಮನೆಯ ಮುಂದೆ ಗಾಳಿಗೆ ಹಾರಿ. ನಾಳೆಯ ಹಾಡಿರಬಹುದು, ತೆಗೆದು ನೋಡು. ನಿನ್ನೆ ತಂಗಾಳಿಯಂಥ ಕನಸೊಂದು ಬಿತ್ತು. ಅದು ಎಲ್ಲಿ ಅಂತ ಈಗ ಹುಡುಕುತ್ತಿದ್ದೇನೆ. ನೀನೇನೂ ಭಯಪಡಬೇಡ. ಬರಿಯ ನಿನ್ನ ಆಸೆ ಮತ್ತು ನನ್ನ ಕನಸಿನಲ್ಲಿಯೇ ಜೀವನವನ್ನು ಕಳೆದುಬಿಡುವ. ಹೊಸ ವಿಷಯವಲ್ಲ ಇಲ್ಲಿ ಯಾವುದೂ. ಹಳೆಯದು ಹಳೆಯದಾಗಿಯೂ ಇರುವುದಿಲ್ಲ. ಹಳೆಗಾಲದ ಕೋಟೆಗೆ ಸುಣ್ಣ ಬಣ್ಣದ ಪಾಲಿಶು ಹಾಕಿ ಹೊಸಗಾಲದ ಬಾರು ಮಾಡಿ ದುಡ್ಡು ಮಾಡುವರು. ರಾಜ ರಾಣಿಯರು ಸಖ-ಸಖಿಯರೊಂದಿಗೆ ಲೀಲೆ ತೋರಿದ ಜಾಗದಲ್ಲಿ ಬಿಳಿಬಿಳಿಯ ಮೈತೋರುತ್ತ ಮದ್ಯದ ನಶೆಯಲ್ಲಿ ಜನ ತಮ್ಮ ಮಧ್ಯವನ್ನೇ ಮರೆಯುವಂತೇ ಮಾಡುವರು. ಎಲ್ಲವೂ ಕಾಲ ತೋರುವ ಬದಲಾವಣೆ. ಕಾಲ ಚಿಕ್ಕ ಸುಳಿವಿನ ಮಿಂಚಿನ ಹುಳುವೊಂದನ್ನು ಮನುಷ್ಯನ ತಲೆಯಲ್ಲಿ ಬಿಡುವುದಂತೆ. ಕೊನೆಗೆ ಹಿರಿಯರ ಅಭಿಪ್ರಾಯವೆಂದು ಈಗಿನ ಜನರೇ ಬದಲಾಗಿದ್ದಾರೆ ಎಂಬ ಮಾತು ಸತ್ಯಯವಾಗಿಯೇ ಉಳಿಯುವುದು. ಅದರಂತೇ ಹಿರಿಯರ ಮಾತೂ ಸತ್ಯ, ಕಿರಿಯರ ಬದಲಾವಣೆಯೂ ಸತ್ಯ ಎಂದಾಯಿತು.. ಅಲ್ಲವೇನೇ ಹುಡುಗೀ? ಕೊಡು ಒಂದು ಮುತ್ತನೀಗ.......

ಇಲ್ಲಿಗೀ ಸಿನೇಮ ಮುಗಿಯಿತು!!!!!!

Sunday, August 15, 2010

ಸ್ವಾತಂತ್ರ್ಯೋತ್ಸವಕ್ಕೇ...... ಜಯವಾಗಲಿ


ಒಂದು ಚಾನಲ್ಲಿನಲ್ಲಿ 63ನೇ ಸ್ವತಂತ್ರ ದಿನ, ಇನ್ನೊಂದರಲ್ಲಿ 64ನೇದು. ಎಷ್ಟನೇದಾದರೇನು! ಧ್ವಜ ಹಾರಿಸಿ ಹಣೆಯ ಮೇಲೆ ಮುಂಗೈಯ ಮುಂದೆ ಮಾಡಿಟ್ಟುಕೊಂಡು ಜನಗಣಮನ ಹಾಡಿ, `ನಾಳೇ ನಾವೇ ನಾಡ ಹಿರಿಯರು, ನಮ್ಮ ಕನಸಿದು ಸುಂದರ...' ಎಂದುದುರಿಸದೇ ಸ್ವೀಟು ಕೊಡುವುದಿಲ್ಲ ಮಾಸ್ತರರು ಎಂದು ಅದನ್ನೂ ಉದುರಿಸಿ, ಸಿಹಿ ತಿಂದು ಮನೆಗೆ ಬಂದರು ಶಾಲೆ ಮಕ್ಕಳು. ಯಾರೋ ಬರೆದುಕೊಟ್ಟ ಹತ್ತತ್ತು ಪುಟ ಭಾಷಣವ ಒಂದೇ ಗುಟುಕಿನಲ್ಲಿ ಓದಿ ಮುಗಿಸಿ ಮನೆಗೆ ಹೊರಟ ಯಡಿಯೂರಪ್ಪ. ಕೇಸರಿ ಮುಂದಾಗಿ ಸುತ್ತಿಕೊಂಡು ಮುರುಟಿ ಬಿದ್ದ ಧ್ವಜದ ಪಾಡು ಗೋವಿಂದ. ಇನ್ನು ಬರುವರು ಆರು ಗಂಟೆಯ ನಂತರ ಬಿಸಿಲಿಳಿದ ಮೇಲೆ ಇಳಿಸಿಕೊಂಡು ಹೋಗುವರು, ಬೆಳಗ್ಗೆ ಸ್ನಾನವಾದ ಮೇಲೆ ಮೈಯೊರೆಸಿಕೊಂಡು ಹರಗಿದ್ದ ಟುವಾಲಿನಂತೇ. 
ಮತ್ತೇನು ವಿಶೇಷ?! 
ಸೂರತ್ತಿನಲ್ಲಿ ಯಾರೋ ಬಿಳಿಯ ಬಟ್ಟೆ ತೊಟ್ಟವರು ಹೆಗಲಿಗೆ ಕೇಸರಿ ಶಾಲು ಹೊದ್ದವರು ಬಂದು `ಜೈ ಭಾರತ್ ಮಾತಾಜೀ' ಎಂದು ಎರಡೆರಡು ಜಿಲೇಬಿ ಕೊಟ್ಟು `ಆಪಕಾ ಯೇ ದಿನ್ ಮೀಠಾ ರಹೇ' ಎಂದು ಹೋಗಿಯೇ ಹೋದರು. ಟೀವಿಯಲ್ಲಿ ಒಂದರ ಹಿಂದೊಂದೊಂದು ಕಾರ್ಯಕ್ರಮ. ನಡುನಡುವೆ `ವೀಕ್ಷಕರಿಗೆಲ್ಲ ಸ್ವಾತಂತ್ರ್ಯೋತ್ಸವದ ಶುಭಾಶಯಗಳು'. ಚಾನಲ್ಲಿನ ಲೋಗೊದ ಮೇಲೆ ಕೇಸರಿ ಬಿಳಿ ಹಸುರು ಬಣ್ಣ. ಒಂದು ದಿನದ ರಂಗು. ಹಿಂಗಡೆಯ ಪರದೆಯ ಮೇಲೆಲ್ಲ ಚಿಕ್ಕ ಚಿಕ್ಕ ಪ್ಲೇಸ್ಟಿಕ್ ಬಾವುಟಗಳು. 
ಈ ಅರವತ್ಮೂರನೇ ಸ್ವಾತಂತ್ರ್ಯೋತ್ಸವದ ದಿನದಂದು ನಿಮಗೆ ಏನನ್ನಿಸುತ್ತಿದೆ ಎಂದು ನಿರೂಪಕಿಯೊಬ್ಬಳು ಹಿರಿಯರನ್ನು ಸಂದರ್ಶನ ಮಾಡುತ್ತಿದ್ದರೆ ಇನ್ನೊಂದು ಚಾನಲ್ಲಿನಲ್ಲಿ `ಅರವತ್ನಾಲ್ಕನೇ  ಸ್ವಾತಂತ್ರ್ಯ ದಿನದ ವಿಶೇಷ ಕಾರ್ಯಕ್ರಮಗಳು' ಎಂದು ಜಾಹೀರಾತೋ ಜಾಹೀರಾತು. ಯಾರೋ ಹೇಳುವುದನ್ನು ಕೇಳುವುದು ಬಿಟ್ಟು ಸ್ವತಃ ಒಮ್ಮೆ ಲೆಕ್ಕ ಹಾಕಬಾರದೇ? ಕೈ ಬೆರಳಿಲ್ಲವೇ? ಅಷ್ಟಾಗದಿದ್ದರೆ ಬರೀ ಸ್ವಾತಂತ್ರ್ಯೋತ್ಸವ ಎಂದರೆ ಸಾಲದೇ?
ಒಂದು ಕಡೆ ಸಮಾವೇಶ, ಇನ್ನೊಂದು ಕಡೆ ಪಾದಯಾತ್ರೆ. ಮತ್ತೊಂದು ಕಡೆ ಇಂತಹ ಅಪದ್ಧ. ಇವುಗಳಿಂದ ನಮ್ಮ ದೇಶಕ್ಕೆ ಎಂದಿಗೋ ಸ್ವಾತಂತ್ರ್ಯ!

:ಜೈ ಹಿಂದ್:

Monday, August 9, 2010

ಕಣ್ತಪ್ಪು

ಬರೆಯುವವನ ಪೆನ್ನಿಗೆ 
ಹಲವು ಮುಖ.
ಓದುವವನಿಗೆ ಅವನ 
ವಯಸ್ಸೇ ಮುಖ.


ಪ್ರೀತಿ ಪ್ರೇಮವ ಬರೆದರೆ 
ಹುಳಿ ಹಿಂಡಿದ ನಿಂಬೆ 
ಸಿಪ್ಪೆಯಂತಾಡಿದ ಮುದುಕ,
ನೀತಿಶತಕವ ಭಟ್ಟಿಯಿಳಿಸಿದರೆ   
ಕುಂತಲ್ಲೇ ಕೊಸರಾಡಿದ ಯುವಕ.
ಆದರೇನು?
ಸ್ಕೂಟಿಯ ನೋಡುತ್ತಾ ಸಾಗಿ
ಕಾರಿಗೆ ಬಡಿದು ಬಿದ್ದೆದ್ದುಕೊಂಡ 
ನಾನೊಬ್ಬ ದಾರಿಹೋಕ. 

ಸೂರತ್: ಬೀದಿ ಒಂದು

ಸೂರತ್ತಿನ ಬೀದಿಯಲ್ಲಿ ಮುನ್ಸಿಪಾಲಿಟಿಯವರು ಎಷ್ಟು ಹಿಡಿ ಹಿಡಿದುಕೊಂಡು ಗುಡಿಸಿದರೂ ಐದೇ ನಿಮಿಷದಲ್ಲಿ ಧೂಳು ತುಂಬುತ್ತದೆ. ಹೊಸ ಧೂಳಿಗೆ ಅವಕಾಶವಾಗಲೆಂದೇ ಹಳೆಯ ಧೂಳು ತೆಗೆಯುವುದೂ ಅವರ ಉದ್ದೇಶವಿರಬಹುದು, ಕೇಳಿದವರಾರು?  ಹೊಸ ಧೂಳಿಗೆ ಅವಕಾಶ ಕೊಡುತ್ತಲೇ ಹಳೆಯ ಧೂಳನ್ನು ಎಲ್ಲಿ ಕೊಂಡು ಹೋಗಿ ಹಾಕಿದರೆಂದು ತಿಳಿದವರಿಲ್ಲ. ಇಲ್ಲಿ ಕುಕ್ಕರಗಾಲಲ್ಲಿ ಕೂತು ಮೇಸ್ತ್ರಿಗೆ ಕಾಯುವ ಮಂದಿಗೆ ಬಹಳ ಸಲ ಸೂರ್ಯ ಕಂತಿದರೂ ಕಾಯುವ ಕೆಲಸವೇ ಮುಗಿಯುವುದಿಲ್ಲ. ಇನ್ನೆಲ್ಲಿ ಮನೆಗೆ ಹೋಗುವುದು? ಬೆಳಗಾದರೆ ವಾಪಸು ಇಲ್ಲಿಗೇ ಬರಬೇಕಲ್ಲ ಎಂದು ಅಲ್ಲಿಯೇ ತಲೆಗೆ ಕಟ್ಟಿದ್ದ ಟುವಾಲು ಹಾಸಿಕೊಂಡು ಮಲಗುವವರೂ ಉಂಟು. ಹಾಗೆ ಮಲಗಿದವರನ್ನು ರಾತೋರಾತ್ರಿ ಕಸ ತುಂಬುವ ಟೆಂಪೋದ ಮೇಲೆ ಬಂದು ಎತ್ತಾಕಿಕೊಂಡು ಹೋಗುವ ಮುನ್ಸಿಪಾಲಿಟಿಯವರು ಬೆಳಿಗ್ಗೆ ಬಿಡಲಿಕ್ಕೆ ತಲೆಗೆ ನೂರು ಕೇಳುವುದೂ ಉಂಟು. ಮನೆಯಲ್ಲಿ ಮಲಗಿದರೆ ಹೆಂಡ್ತಿ ಕಾಟ, ಬೀದಿಯಲ್ಲಿ ಮಲಗಿದರೆ ಮುನ್ಸಿ ಕಾಟ! ಕೊನೆಯದಾಗಿ ಎಲ್ಲಿದ್ದರೂ ಹೇಗಿದ್ದರೂ ಗಂಡಸರು ಹೈರಾಣು. ಹಾಗೆಯೇ ರಸ್ತೆಯ ಮೇಲೆ ಮಲಗಿ ತಾಸಾಗಿರುವುದಿಲ್ಲ, ಎಲ್ಲಿಂದಲೋ ಟಪ್ಪ.. ಟಪ್ಪ.. ಎಂದು ಟಪ್ಪಾಳೆ ತಟ್ಟುತ್ತ ಬಂದೇ ಬಿಟುವ ಚಕ್ಕಾಗಳು. ಡಾರ್ಲಿಂಗ್ ದೇದೋನ.. ಎಂದು ಒಂದು ಸಲ ಟಪ್ಪ ಎಂದು ಕೈತಟ್ಟಿ ತೊಡೆಯ ಚಿವುಟಿದರೆ ಮುಗಿದೇ ಹೋಯಿತು ಅವರ ನಿದ್ರೆ. ದೇದೋನ ಎಂದಾಗ ಕೊಡಲಿಕ್ಕೆ ಸಾವಿರ ದುಡಿದಿಟ್ಟುಕೊಂಡಿದ್ದಾನೆಯೇ?ಬೆಳಿಗ್ಗೆ ಚಾಯ್ಗೆಂದು ಇಟ್ಟುಕೊಂಡಿದ್ದ ಮೂರು ರುಪಾಯಿ ಚಕ್ಕಾ ಪಾಲು. ತಥ್ ಎಂದು ಶಾಪ ಹಾಕಿ ಮಲಗುವುದರಲ್ಲಿ ಪೆಕೆಕೇ..... ಎಂದು ಹಾರನ್ನು ಮಾಡುತ್ತ ಬರುತ್ತದೆ ಒಂದು ಕರಿ ಮಾತ್ತೊಂದು ಬಿಳಿ ಕಾರು. ಅದರೊಳಗೆ ಯಾರೋ ಹೆಂಗಸು ಕೂಗಿದ ಸದ್ದು . ಆ ಸರ್ಕಲ್ಲು, ಈ ತಿರುವನ್ನೆಲ್ಲ ನಾಕು ಬಾರಿ ತಿರುಗಿ ಬರುವುದರಲ್ಲಿ ಕಾರಿನೊಳಗೆ ನಿಶ್ಶಬ್ದ. ಇನ್ನು ಮುಂದಿನ ದೃಶ್ಯ ನೋಡಬಾರದು ಎಂದು ಮುಸುಕೆಳೆದು ಮಲಗುವ ಎಂದರೆ ಚಾದರವಿಲ್ಲ. ಗಟ್ಟಿ ಕಣ್ಣು ಮುಚ್ಚಿ ಮಲಗಿದರೆ ಕೇಳುವುದು ಕಾರಿನ ಬಾಗಿಲು ತೆಗೆದ ಸದ್ದು. ದಪ್ಪ್ ಎಂದು ಅಕ್ಕಿಯ ಮೂಟೆ ಹತ್ತಡಿ ಮೇಲಿಂದ ಬಿದ್ದ ಸದ್ದು. ಮತ್ತೆ ಬಾಗಿಲು ಹಾಕಿದ ಸದ್ದು. ತೆಲಯೆತ್ತಿ ನೋಡಿದರೆ ಅಕ್ಕಿಯ ಮೂಟೆಯಂತೆಯೇ ಮುದ್ದೆಯಾಗಿ ಬಿದ್ದೊಂದು ಹರಿದ ಬಟ್ಟೆಯ ಹೆಂಗಸು. ನೋಡಬಾರದು ಎಂದರೂ ನೋಡಿ ಹೋಗುವಲ್ಲಿ ಪೋಲಿಸರ ಆಗಮನ. ಅವರ ಪಾಲಿಗೆ ಬೇಕಲ್ಲ ಆಹಾರ.ರಸ್ತೆ ಬದಿಗೆ ಮಲಗಿದ್ದೇ ತಪ್ಪು. ಕಾಲರು ಹಿಡಿದು ಕರಕೊಂಡು ಹೋದರು, ನಾಕು ಮಾತು ಬೈದರು, ಜಾವ್.. ಸಾಲೇ... ಎಂದು ಕಳಿಸಿದರು. ಬರುವಾಗ ಎದುರಿಗೆ ಕಂಡ ಎಪರುತೆಪರಿನ ಮನುಷ್ಯನ ಮುಖ 'ನನ್ನ ಹೆಂಡತಿ ಕಳೆದು ಹೋಗಿದ್ದಾಳೆ ಹುಡುಕಿ ಕೊಡಿ ಎನ್ನುತ್ತಿದ್ದಂತಿತ್ತು. ತಿಂಗಳಿಗೊಮ್ಮೆ ಹೀಗೆ ನಡೆಯದಿದ್ದರೆ ಸೂರತ್ತಿನಲ್ಲಿನ ಕಮೀಶನರುಗಳ ಮಕ್ಕಳು ದೂರದೂರಿಗೆ ರಜೆ ಕಳೆಯಲು ಹೋಗಿದ್ದಾರೆನ್ನಬಹುದು ಅಷ್ಟೇ.
'ಹಮಾರೇ ವಹಾ.. ಲಡ್ಕೀ ಭೇಜ್ನೇವಾಲೇ ಐಸಾ ನಹೀ ಕರ್ತೇ' ಎಂದು ಬೆಳಕು ಹರಿಯುವುದರೊಳಗೇ ಕ್ಯಾತೆ ಶುರುಮಾಡಿದ್ದ ಅವನ ಕೈಗೆ ನೂರು ರುಪಾಯಿ ನೋಟನಿಟ್ಟು ಅಳುತ್ತ ಹೋಗೇ ಹೋದಳು. 'ತಥ್ ಭೋ........' ಎಂದು ನಿಸ್ಸಹಾಯಕನಾಗಿ ರಾಗ ಎಳೆದು ಮುಗಿಸಿದ... ಅಂತೂ ಬೆಳಗಾಗ, ಕಾಯುವಿಕೆ ಶುರು ಮತ್ತೆ, 'ಮೇಸ್ತ್ರಿ ಬಂದಾನು, ಕೆಲಸ ತಂದಾನು....' 
ಇದೇನೂ ಅರಿಯದ ನಾವುಗಳು ಸೂರ್ಯ ಮೂಡಿದ ಮೇಲೆ ರಂಗುರಂಗಿನ ಮಾಯೆಯ ನೆನೆಯುತ್ತ, ಚಿಟ್ಟೆಗಳು ಚೆಲ್ಲಿ ಹೋದ ಸಿಹಿಗಾಳಿ ಮೆಲ್ಲುತ್ತ, ಬೇಂಕಿನ ಕಡೆಗೆ............

Wednesday, July 28, 2010

!!!!?


ದಿನಗಳು ಒಂದರ ಹಿಂದೆ ಒಂದೊಂದೇ  
ಸಾಲು ಸಾಲಿನಲ್ಲಿ ನಾಪತ್ತೆಯಾಗುತ್ತಿವೆ
ಕನಸುಗಳ ಬೆನ್ನಟ್ಟಿ ಎಂದಿಗೂ 
ಹೋಗಬಾರದು ಎನಿಸುತ್ತದೆ ಹಲವು ಬಾರಿ
ಆದರೆ ದಿನಗಳು ಹೇಗೆ ನಡೆಯಿಸಿಕೊಂಡವೋ
ಹಾಗೆ ನಡೆದರೆ   
ಇದ್ದಾದರೂ ಏನು ಪ್ರಯೋಜನ ನಾವು!
ನಮ್ಮಂತೇ ನಡೆಯಿಸಿಕೊಳ್ಳಬೇಕು 
ದಿನವನ್ನು
ಎಲ್ಲ ಕಣ್ಮರೆಯಾಗುವ ತನಕ 
ನೋಡುತ್ತ ನಿಂತೆ
ಮರೆಯಾದ ಮೇಲೆ 
ಶುರುವಾಯಿತು ಚಿಂತೆ
ಬೇಕಾದದ್ದೆಲ್ಲ ಸಿಕ್ಕುವಾಗ
ಎಲ್ಲರೂ ಸುಖಿಗಳೇ....
ನಂತರ.... ಕವಿಗಳು..!

Monday, July 26, 2010

ಬಿಜೀ ಬೆಂಗ್ಳೂರು

"ಹಲೋ.....ಹಲೋ....."
"ನೀನು ಸತ್ತೆಯೇನು?"
"ಇಲ್ಲ ಇಲ್ಲ, ರೇಲ್ವೆ ಸ್ಟೇಶನ್ನಿನ ಕಡೆ ಹೋಗುತ್ತಿದ್ದೇನೆ, ಹೆಂಡ್ತಿ ಬರ್ತಾಳಂತೆ"
"ಅಯ್ಯೋ ಸತ್ತೆ ನೀನು"
"ಇಲ್ಲವೋ ಮಹರಾಯ"
"ಸರಿ ಹಾಗಾದರೆ, ಮಾತನಾಡು"
"ನಾನೀಗ ಬೆಂಗಳೊರಿನ ಸೌತೆಂಡ್ ಸರ್ಕಲ್ಲಿನ ನಿಡುಗಾಳಿಯಲ್ಲಿ ಮೊಬೈಲ್ ಹಿಡಿದು ಡಬಲ್ ರೋಡಿನಲ್ಲಿ ಬನಶಂಕರಿಯ ಕಡೆಗೆ ನನಗೆ ಇದಿರಾಗಿ ಬರುವ ಗಾಡಿಗಳ ವೇಗವನ್ನು ಮನಸಲ್ಲೆ ಲೆಕ್ಕ ಹಾಕುತ್ತ ಮುಂದೆ ಮುಂದೆ ಸಾಗುತ್ತಿರುವ ಸಮಯದಲ್ಲಿ ವಯಸ್ಸಾದ, ಮದುವೆಯಾದ ಮುದುಕಿಯೊಬ್ಬಳು ಢಿಕ್ಕಿ ಹೊಡೆದು ಕಿವಿಗೆ ಕಚ್ಚಿದ್ದ ಮೊಬೈಲು ಮಾತ್ರ ಕೈಯಲ್ಲೇ ಇದ್ದು, ಬಲಗೈಲಿ ಗಟ್ಟಿಯಾಗಿ ಹಿಡಿದಿದ್ದ ಅದರ ಕರಿಯ ಕವರು ಕೆಳಗೆ ಬಿದ್ದು, ಅದರ ಮೇಲೆ ಆ ಹೆಂಗಸು ತನ್ನ ಆನೆ ಗಾತ್ರದ ಕಾಲನೂರಿ ಕೊಳೆತ ಮಾವಿನ ಹಣ್ಣಿನ ಮೆಲೆ ಗಂಡಸೊಬ್ಬ ಪೇಟೆಯಲ್ಲಿ ಕಾಲನಿಟ್ಟಂತೇ ಹೀ..... ಎಂದು ಅಲವತ್ತುಕೊಂಡು 'ಸೋರಿ' ಎಂದು ತನ್ನ ಬಣ್ಣ ಹಚ್ಚಿದ ತುಟಿಯ ಕಿಸಿದು ನುಡಿದು ತಿರುಗಿ ಅವಳ ಪಾಡಿಗೆ  ಹೊರಟಾಗ, ನಾನೇ ಬಿದ್ದ ಮೊಬೈಲ್ ಕವರನ್ನು ಹೆಕ್ಕಿಕೊಂಡು ನನ್ನ ದಾರಿಯ  ಹಿಡಿದರೆ ತಾನು ಬರಲೊಲ್ಲೆ ಎಂದು ಹೇಳಿ ಹಿಡಿದ ಕೈ ಸಡಿಲಾಗಿ ಗಾಳಿಗೆ ಹಾರಿ ಮತ್ತೆ ಸೌತೆಂಡ್ ಸರ್ಕಲ್ಲಿನ ಕಡೆ ಹೊರಟಾಗ, ನನಗದನ್ನು ಹಿಡಿಯಲಾಗದೇ ರಸ್ತೆಯಲಿ ಬಿದ್ದು ಸ್ಕೂಟರಿನ ಚಕ್ರದಡಿಗಾಗಿ ಮೊದಲು, ಆಮೇಲೆ ಬೀಎಮ್ಟೀಸಿ ಬಸ್ಸಿನ ಟಾಯರಿನಡಿಯಲ್ಲಿ ಸಿಕ್ಕು ನಮ್ಮೂರಿನ ಜಟ್ಟಿ ಗೌಡ ಮುಸ್ಸಂಜೆಯಲಿ ಕುಡಿದು ತೃಪ್ತಿಯಾಗದೇ ಕೊನೆಗೆ ಚೀಪಿ ಬಿಸಾಕಿದ ಸಾರಾಯಿ ಕೊಟ್ಟೆಯಂತಾಗಿ ಹೋದದ್ದನ್ನು ನೋಡುತ್ತಿರಲು, ನಿನ್ನೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿ, ಇದೇ ಪಾರ್ಕಿನ  ಮೂಲೆಯಲ್ಲಿರುವ ಬೆಂಚಿನ ಮೇಲೆ ಕುಳಿತು ಗಳಗಳನೆ ಅತ್ತು ಸುಧಾರಿಸಿಕೊಂಡು ಕೊನೆಗೆ ಬನಶಂಕರಿಯ 2ನೇ ಸ್ಟೇಜಿನಲ್ಲಿರುವ 'ಸ್ವರ್ಗ' ಬಾರಿಗೆ ಹೋಗುವ ಅನ್ನಿಸ್ತಿದೆ........."
"ಸಾಯಿ ನೀನು........."
ಫೋನ್ ಕಟ್ಟಾಯಿತು.

Sunday, July 25, 2010

ಒಂದು ಕಥೆ

ಒಂದೂರಿನಲ್ಲಿ ಕುಪ್ಪಯ್ಯ ಮತ್ತು ತಿಪ್ಪಯ್ಯ ಎಂಬ ಸ್ನೇಹಿತರಿದ್ದರು. ಅವರಿಬ್ಬರೂ ಐದನೇ ತರಗತಿಯಿಂದಲೇ ಒಟ್ಟಿಗೆ ಬೆಳೆದವರು, ಆಟ ಪಾಠ ಎಲ್ಲ ನಡೆಯುತ್ತಿತ್ತು. ಕುಪ್ಪಯ್ಯ ಓದಿನಲ್ಲಿ ಬಹಳ ಜೋರು, ತಿಪ್ಪಯ್ಯನೂ ಒಳ್ಳೆಯ ಅಂಕಗಳನ್ನೇ ತೆಗೆಯುತ್ತಿದ್ದನಾದರೂ ಕುಪ್ಪಯ್ಯನಷ್ಟು ಜೋರಿರಲಿಲ್ಲ. ಕಾಲೇಜಿನಲ್ಲಿ ಲೆಕ್ಚರರು ಪಾಠ ಮಾಡುವಾಗ ಕುಪ್ಪಯ್ಯ ನಿದ್ದೆ ಹೊಡೆದರೂ ಏನೂ ಹೇಳುತ್ತಿರಲಿಲ್ಲ. ಯಾಕೆಂದರೆ ವರ್ಷದ ಕೊನೆಯಲ್ಲಿ ಕಾಲೇಜಿನ ಮಯರ್ಾದೆ ಉಳಿಸುವವನು ಅವನೇ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ತಿಪ್ಪಯ್ಯ ಪ್ರಶ್ನೆ ಹಾಕಿದರೆ ಮಾತ್ರ ಅದಕ್ಕೆ ತೂಕವೇ ಬೇರೆ ಇರುತ್ತಿತ್ತು. ಒಟ್ಟಿನಲ್ಲಿ ಇಬ್ಬರದೂ ಒಂಥರಾ ಮಜದ ಜೀವನವೇ ಆಗಿತ್ತು ಕಾಲೇಜಿನ ಸಮಯದಲ್ಲಿ. ಅವನ ವಿಷಯ ಇವನಿಗೆ ಇವನ ವಿಷಯ ಅವನಿಗೆ ಬಿಟ್ಟರೆ ಮತ್ಯಾರಿಗೂ ತಿಳಿದಿರಲಿಲ್ಲ ಮತ್ತು ತಿಳಿಯುತ್ತಿರಲಿಲ್ಲ. ಕುಪ್ಪಯ್ಯ ಮೊದಲನೇ ವರ್ಷದಿಂದಲೂ ತನ್ನದೇ ಕ್ಲಾಸಿನ ಹುಡುಗಿಯೊಬ್ಬಳ ಹಿಂದೆ ಬಿದ್ದು ಕೊನೆಯವರೆಗೂ ಅವಳಲ್ಲಿ ಮಾತನಾಡಲು ಆಗದೇ ಹೋದದ್ದು ತಿಪ್ಪಯ್ಯನಿಗೆ ಮಾತ್ರ ಗೊತ್ತು. ಕೊನೆಯ ಒಂದೂವರೆ ವರ್ಷ ಇರುವಾಗ ತಿಪ್ಪಯ್ಯ ಫಸ್ಟ್ ಈಯರಿಗೆ ಬಂದ ಹುಡುಗಿಯೊಬ್ಬಳ ಅಂದಕ್ಕೆ ಮರಳಾಗಿ ಅವಳನ್ನು ಮನಸಿಗೆ ಹಚ್ಚಿಕೊಂಡಿದ್ದು ಕುಪ್ಪಯ್ಯನಿಗೆ ಮಾತ್ರ ಗೊತ್ತು. ಅಂಥ ಸ್ನೇಹ ಅವರಿಬ್ಬರ ನಡುವೆ ಅವರಿಗೇ ಅರಿವಿಲ್ಲದೇ ಮೂಡಿತ್ತು. ದಿನಾ ಒಂದು ಜಗಳ, ನಿಂತಲ್ಲೇ ಸಣ್ಣ ಕಿತ್ತಾಟ, ಮತ್ತೆ ಒಂದೇ ಸೈಕಲ್ಲ ಮೇಲೆ ಇಬ್ಬರ ಪಯಣ ಮನೆಯ ಕಡೆ.
ಕಾಲೇಜು ಮುಗಿಯುವ ದಿನ ಹತ್ತಿರ ಬಂದಾಗ ಮಾತ್ರ ಪರೀಕ್ಷೆಗೆ ಓದಲೂ ಮನಸು ಬಾರದು. ಇವರಿಬ್ಬರೂ ಬೇರೆಯಾಗುವ ಯೋಚನೆ ನಿಜಕ್ಕೂ ಅವರಲ್ಲಿರಲಿಲ್ಲ. ಇದ್ದದ್ದು ಪ್ರೀತಿಯ ಹುಡುಗಿ ನಾಳೆಯಿಂದ ಕಾಣಲು ಸಿಕ್ಕಳಲ್ಲಾ ಎಂದು. ಕಾಲನೆಂಬ ತಪ್ಪಲೆಯ ಬಿಸಿ ನೀರಿನಲ್ಲಿ ಬೇಯುತ್ತಿರುವ ಬಟಾಟೆಯಂತಾದರು ಅವರಿಬ್ಬರೂ. ಆದರೆ ಕೊನೆಗೂ ಅವರು ಅವರವರ ಹುಡುಗಿಯರನ್ನು ದೂರದಿಂದಲೇ ಕಂಡು ಕಣ್ತುಂಬಿಕೊಂಡು ಹೋದರು ಕೊನೆಯ ದಿನವೂ.. ಮತ್ತದೇ ವಿರಹದ ಸಂಜೆಗಳು ಅವರನ್ನು ಕಾಡಿದವು. ಕಾಲಕ್ರಮೇಣ ಅವರವರ ಕೆಲಸದಿಂದ, ಅವರಿಬ್ಬರ ಬೇರೆ ಬೇರೆ ಹರಟೆಯಿಂದ ಹಳೆಯ ಹುಡುಗಿಯರ ನೆನಪುಗಳು ಮಾಸುತ್ತ ಬಂದವು.. ಅಂತೂ ಕೊನೆಗೆ ಜೀವನಕ್ಕೆ ಎಂದು ಕುಪ್ಪಯ್ಯನಿಗೊಂದು ಕೆಲಸ ಎಂಬುದಾಯ್ತು. ಅವನೀಗ ಊರು ಬಿಟ್ಟು ಗುಳೇ ಹೊರಡಬೇಕಾಯ್ತು. ಮುಸ್ಸಂಜೆಯ ರೈಲು ಹಳಿಯ ದಿನಚರಿ ಕೊನೆಯಾಯ್ತು. ಎಷ್ಟೋ ಆಡಿದ ಮಾತುಗಳು ರೈಲು ಹಳಿಯ ಮೇಲೇ ಉಳಿದುಹೋಯ್ತು. ಎಷ್ಟೋ ಆಡಬೇಕಾಗಿದ್ದ ಮಾತುಗಳು ಎಲ್ಲೆಲ್ಲೋ ಕೊಚ್ಚಿಹೋಯ್ತು ಆ ವರುಷದ ಮಳೆಗೆ. ಅವರಿಬ್ಬರೂ ಈಗ ಮೊಬೈಲಿನಲ್ಲಿ ಮಾತ್ರ ಮಾತಾಡಿಕೊಳ್ಳುತ್ತಾರೆ, ಮೆಸೇಜು ಮಾಡುತ್ತಾರೆ. ಅದು ಬಿಟ್ಟರೆ ಎದುರೆದುರು ಸಿಗುವುದು ವರ್ಷಕ್ಕೆರಡು ಸಲ ಮಾತ್ರ.
ಈಗ ತಿಪ್ಪಯ್ಯನಿಗೂ ಕೆಲಸವಾಯಿತು. ಒಂದು ವರುಷ ಕಾದ ಮೇಲೆ ಒಂದು ಕಡೆ ತಿಂಗಳ ಇಷ್ಟು ಎಂದು ಮಾಡಿದ ಕೆಲಸಕ್ಕೆ ಬೆಲೆಯ ಕಟ್ಟುವ ಯಜಮಾನ ಸಿಕ್ಕಿದ ಅವನಿಗೂ! ಈಗ ಕುಪ್ಪಯ್ಯ ಮತ್ತು ತಿಪ್ಪಯ್ಯ ತಿಂಗಳಿಗೊಂದು ಸಲ ಸಿಗುವಂತಾಗಿ ಮತ್ತೆ ಹಳೆಯ ನೆನಪುಗಳೆಲ್ಲವನ್ನೂ ಮೆಲುಕು ಹಾಕುವಂತಾಯ್ತು. ಆದರೆ ಇದು ಬಹಳ ದಿನ ನಡೆಯಲೇ ಇಲ್ಲ. ಯಾಕೆಂದರೆ ಕಾರಣವೂ ಅವರಿಗೆ ತಿಳಿದಿಲ್ಲ. ದಿನವೂ ಇಪ್ಪತ್ತೈದು ಮೆಸೇಜು ಮಾಡುತ್ತಿದ್ದವರು ದಿನಕ್ಕೆ ಒಂದೊಂದೇ ಮೆಸೇಜು ಕಡಿಮೆ ಮಾಡುತ್ತ ಬಂದರು. ಹಾಗೇ ದಿನ ಕಳೆಯುತ್ತ ಕಳೆಯುತ್ತ ಮೆಸೇಜು ಮಾಡುವುದೇ ಬಂದಾಗಿಹೋಯಿತು. ಎಲ್ಲೋ ಒಂದು ದಿನ ಬಸ್ ಸ್ಟೇಂಡಿನಲ್ಲಿ ಅಕಸ್ಮಾತ್ತಾಗಿ ಸಿಕ್ಕಿದಾಗ ಹೋ ಎಂದು ಸುಮ್ಮನೇ ನಕ್ಕು ಹಾಗೆಯೇ ಸಾಗಿಬಿಟ್ಟರು ಅವರಷ್ಟಕ್ಕೆ ಅವರು.
ಅದಾದ ಮೇಲೆ ಅದೆಲ್ಲಿ ಅವರವರ ಕೆಲಸದಲ್ಲಿ ಮಗ್ನರಾಗಿಬಿಟ್ಟರೋ ತಿಳಿಯದು. ಈಗ ತಿಪ್ಪಯ್ಯನ ನೆನಪು ಕುಪ್ಪಯ್ಯನಲ್ಲೂ ಕುಪ್ಪಯ್ಯನ ನೆನಪು ತಿಪ್ಪಯ್ಯನಲ್ಲೂ ಇರಬಹುದು. ಹಾಗೆಯೇ ಅವರ ಮೊಬೈಲು ನಂಬರುಗಳು ಕೂಡಾ ಇರಬಹುದು. ಆದರೆ ಸಂಪರ್ಕ ಮಾತ್ರ ಇಲ್ಲ. ಅವರ ಗೆಳೆತನ ಹಾಗಿತ್ತು ಎಂದು ಹೇಳಲೂ ಕೂಡಾ ಇಂದು ಸಾಧ್ಯವಿಲ್ಲ. ಅವನ ಪಾಡಿಗವ, ಇವನ ಪಾಡಿಗಿವ. ನೆನಪಾದರೆ ಅವನು ಯಾಕೆ ಬೇಕು? ಅವನಿಲ್ಲದೇ, ಅವನ ಜೊತೆ ಮಾತಿಲ್ಲದೇ ಬದುಕಿಲ್ಲವೇ ಇಷ್ಟು ದಿನ! ಎಂದು ಪ್ರಶ್ನೆ ಕೇಳಿಕೊಂಡು ಸುಮ್ಮನಾಗಿಬಿಡುತ್ತಾರೆ.
ವಿಷಯ:  ಕಾಲಕ್ಕೆ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ.
ಸಂದರ್ಭ : ಸ್ನೇಹಿತರ ದಿನಾಚರಣೆ.(ಅಗಸ್ಟ್ 2, 2009)
ಉಪಸಂಹಾರ : ನಾನೂ ಕಾಲನಾದನೇನು? ಯಾರಿದ್ದರೇನು ಬಿಟ್ಟರೇನು! ನನ್ನ ಪಾಡಿಗೆ ನಾನು ಗುರುತಿಲ್ಲದ ಊರಿನಲ್ಲಿ ಬದುಕನೇನು ಕಾಡಿನಲ್ಲಿ ಬದುಕುವ ಅಪರಿಚಿತ ಹುಲಿಯ ಹಾಗೆ! ಮನುಷ್ಯ ಸಂಘ ಜೀವಿ ಎಂಬುದು ತಿಳಿದವರ ಮಾತು. ಅವರು ನನ್ನನ್ನೂ ತಿಳಿದು ಹೇಳಿದರೇನು! ಅದು ನನಗೆ ಹೇಗೆ ಅನ್ವಯ ಎಂಬುದು ನನಗೆ ತಿಳಿಯದೇ ಹೋಗಿ ಬೇರೆಯವರಿಗೆ ತಿಳಿಯುವುದೇನು!? ಉಪಸಂಹಾರದಲ್ಲಿಯೂ ಎಷ್ಟೊಂದು ಪ್ರಶ್ನೆಗಳು! ಮೇಲಿನ ಕತೆಗೂ ನನಗೂ ನಂಟು ಇದೆಯೆಂದರೆ ಇದೆ. ಇಲ್ಲ ಎಂದರೆ ಇಲ್ಲ. ಇದೆ ಎಂದರೆ ನಾನು ತಿಪ್ಪಯ್ಯ.
ತನ್ನ ಪಾಡಿಗೆ ತಾನು ನಡೆಯುತ್ತಲೇ ಇರುವ ಕಾಲವನ್ನು 'ಯಾಕೆ?' ಎಂದು ನಿಲ್ಲಿಸಿ ಪ್ರಶ್ನೆ ಮಾಡಲು ಯತ್ನಿಸುತ್ತಾರೆ. ಅದಕ್ಕೇನು ಮಿತ್ರರೇ! ಅದರ ಜೊತೆ ನಡೆಯುತ್ತಿದ್ದೇವೆ ನಾವು, ಅದಕ್ಕೇ ನಾವು ಮಿತ್ರರು ಎಂದುಕೊಳ್ಳುವ ನಮ್ಮನು ಕಂಡರೆ ನಗು ಬರುತ್ತದೆ. ಒಂದು ಸಂಘ, ಅದರಲ್ಲಿ ನಾಲ್ಕಾರು ಜನಗಳು, ಆದರೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ, ಒಬ್ಬರ ಮಾತನ್ನು ಇನ್ನೊಬ್ಬ ಕೇಳದ ಮೇಲೆ, ಆ ಸಂಘ ಭಂಗವಾಗಿ ಅಲ್ಲಿ ಯುದ್ಧ ನಡೆಯುವುದಕ್ಕಿಂತ ಅಲ್ಲಿ ಸಂಘವೇ ಇಲ್ಲದಿದ್ದರೆ ಅಷ್ಟು ಜನ ಆರಾಮವಾಗಿ ಇರಬಹುದಲ್ಲವೇ?
ಕೊನೆಯ ಉಪಸಂಹಾರ : ನಾನು ಕಾಲನಲ್ಲ, ನಾನು ಸಂಘಜೀವಿ, ನಾನು ಬದುಕುತ್ತಿರುವುದು ಮನುಷ್ಯರ ಜೊತೆಗೆ. ಅವರಲ್ಲಿ ಕೆಲವರು ನನಗೆ ಸ್ನೇಹಿತರು, ಕೆಲವರು ಶತ್ರುಗಳು, ಮತ್ತು ಕೆಲವರು ನನಗೆ ಯಾರೂ ಅಲ್ಲದವರು ಮತ್ತು ಕೇವಲ ಪರಿಚಯದವರು ಹಾಗೂ ಉಳಿದವರು ಯಾರ್ಯಾರೋ ಜನರು. ಜನರೆಲ್ಲರೂ. ನನಗೆ ಯುದ್ಧ ಮಾಡಲು ಇಷ್ಟವಿಲ್ಲ. ಹಾಗಾಗಿ ನಾನು ನನ್ನ ಪರಿಚಯದವರೊಡನೆ ಎಷ್ಟು ಮಾತನಾಡುತ್ತೇನೋ ನನ್ನ ಶತ್ರುಗಳ ಹತ್ತಿರ ಅದಕ್ಕಿಂತಲೂ ಕಡಿಮೆಯೇ ಮಾತನಾಡಿತ್ತೇನೆ. ಆದರೆ ನನ್ನ ಗೆಳೆಯರ ಜೊತೆ ನಾನು ಜಾಸ್ತಿ ಮಾತನಾಡುತ್ತೇನೆ ಮತ್ತು ಜಗಳವಾಡುತ್ತೇನೆ, ಯಾಕೆಂದರೆ ಅವರು ನನ್ನ ಮೇಲೆ ಭಯಂಕರ ಯುದ್ಧ ಹೂಡುವುದಿಲ್ಲ ಎಂದು ನನಗೆ ಗೊತ್ತು. ನಾ ತಪ್ಪು ಮಾಡಿದರೆ ತಿದ್ದುವುದಿಲ್ಲ ನನ್ನ ಶತ್ರು. ನನ್ನ ತಪ್ಪನ್ನು ನಾನು ಒಪ್ಪಿಕೊಂಡರೆ ಮಾತ್ರ ನಾನು ಸರಿಯೇನು? ನನ್ನ ತಪ್ಪನು ಒಪ್ಪಿಕೊಳ್ಳದೇ ಹೋಗಿ ಈಗ, ಮುಂದೆ ಆ ತಪ್ಪನು ಮಾಡದಿದ್ದರೆ ಅದು ಏನು? ನಾನು ಶತ್ರುವಲ್ಲ ನನಗೆ, ಹಾಗೆಯೇ ಮಿತ್ರರಿಗೆ. ನನಗೆ ಗೆಳೆಯರಿದ್ದಾರೆ ಎಂದುಕೊಂಡ ಕ್ಷಣ ನಾನು ಬೇಸರವಿಲ್ಲದೇ ಬದುಕಿರುತ್ತೇನೆ. ನನಗೆ ಯಾರೂ ಇಲ್ಲ ಎನ್ನಿಸಿದ ಕ್ಷಣ ನಾನು ಬರೆಯುತ್ತೇನೆ. ಬರೆದು ಮುಗಿದ ಮೇಲೆ ನನಗೆ ಏನೆನ್ನಿಸುತ್ತದೆಯೋ ಅದು ಇಲ್ಲಿ ನನಗೆ ಸಿಕ್ಕುವುದಿಲ್ಲ ಅನ್ನಿಸುತ್ತದೆ, ಹಾಗಾಗಿ ಮತ್ತೆ ನಾನು ಒಂಟಿಯಾಗುತ್ತೇನೆ. ಆ ಅನಿಸಿಕೆಯೆ ಜಾಸ್ತಿಯಾಗಿ ಬಾನು ಬರಡು ಬಾವಿಯಂತೇ ತೋರುತ್ತದೆ.
ಒಂಟಿಯಾಗಿ ಕುಳಿತಾಗ ಮತ್ತೆ ಮನಸು ಕೇಳುತ್ತದೆ ನೀನು ನಿಜಕ್ಕೂ ಒಂಟಿಯಾ? ಉತ್ತರಕ್ಕೆ ಬದಲಾಗಿ ಮುಗಿಲು ಮಳೆಯ ಸುರಿಸುತ್ತದೆ. ದಿನವಲ್ಲಿಗೆ ಮುಗಿಯುತ್ತದೆ.

                                      *ಇಲ್ಲಿಗೀ ಕಥೆ ಮುಗಿಯಿತು *

ನಾ...ನೀ...


ಬಾ ಇಲ್ಲಿ ಒಂದು ಕ್ಷಣ 
ನೋಡಲ್ಲಿ ಕಿಟಕಿಯಾಚೆ
ನಿನ್ನ ನೋಡಿ ನಗುತಿಹ ಚಂದ್ರ...
ನೀ ಕೇಳು ಕನಸಿನ ಹಾಡು
ಒಂದು ಸಾಲು ಗುನುಗುತ ಹಾಗೇ
ಮರೆತೇಬಿಡುವ ಪ್ರೀತಿಯ ಲೋಕ...


ನೀ ಹುಡುಕು ನನ್ನನೊಮ್ಮೆ,,
ಸಿಕ್ಕೇಬಿಡುವೆ ನಾನು
ನೀ ಕೇಳು ನನ್ನೊಲುಮೆ
ಕೊಟ್ಟೇಬಿಡುವೆ ನಾನು
ಮರೆತುಬಿಡು ಅಂದು ನಾನು
ಮರೆತುಬಿಡು ಅಂದ ಮಾತು
ಮರೆವಿನಲಿ ಕಾಣುವುದೇನು 
ಮುಂದಿನ ದಾರಿ?


ನೀ ಹಾಡು ನಿನ್ನೆ ನಾನು
ಕನಸಿನಲಿ ಕಂಡ ಹಾಡು
ನೆನಪಿರಲಿ ಕೊನೆಯ ಸಾಲು
ಮರೆಯದಿರು ಮೊದಲ ಹಾಡು
ಮರದ ಮರೆಗೆ ಬಂದು ನೋಡು
ಚಿಗುರ ತುದಿಗೆ ಯಾರದೋ ನಗು!
ಗಾಳಿಯಲ್ಲಿ ತೇಲಿ ಬಂದು 
ನಿನ್ನ ತುಟಿಯ ಸೇರಿತೇನು?

ನೋಡಲೇನು ಹೀಗೆ ಕೂತು
ಹಗಲೂ ಇರುಳೂ ನಿನ್ನ ನಾನು?
ಬರಲಿ ಒಂದು ಪ್ರೀತಿಯ ತೀರ
ನಗಲಿ ಮೋಡ ತುಂಬಿದ ಬಾನು
ನೆನೆವ ನಾನು ನೀನು ಸೇರಿ 
ನಡೆದು ಬಂದ ದಾರಿಯನ್ನು.
ಬೇಕೆ ನಮಗೆ ಹಳೆಯ ಚಂದ್ರ?
ನಗುವ ಸರದಿ ನಂದು ನಿಂದು! 

ನಿನಗಿರುವ ಚೆಲುವು

ನಿನಗಿರುವ ಚೆಲುವು ನನಗಿಲ್ಲವಲ್ಲೇ
ನೀನೆಂಥ ಗೆಳತಿ ನನಗೆ...
ನಿನ್ನೊಲವ ಬೇಡಿ ನಾ ಸೋತು ಹೋದೆ
ದೋಸ್ತಿಯಾದರೂ ಇರಲಿ ಕೊನೆಯವರೆಗೆ

ಗೆಳೆತನಕ್ಕೂ ದಿನವೊಂದ ಮಾಡಿಟ್ಟಿಹರು
ಹೃದಯಗಳನೆಲ್ಲ ಅಡವಿಟ್ಟು
ಕೈ ಕೈ ಸೇರಿ ನಗುವೊಂದ ಬೀರಿದ ಮೇಲೆ
ಹೋದೀತೆಲ್ಲಿಗದು ನಮ್ಮ ಬಿಟ್ಟು!

ಅವನೆದೆ ಕುಣಿದು ಕುಪ್ಪಳಿಸಿ ನುಡಿಯಿತು
ಗೆಳತಿ ಸಿಕ್ಕಳು ನನಗೆ ಈ ಸಂಜೆಯಲ್ಲಿ
ಬರದ ಮಾತುಗಳನೊಂದೊಂದೆ ನುಡಿಯುತ್ತ
ಮನ ಕೇಳಿತು- ಕಳೆದು ಹೋದೆನೆಲ್ಲಿ!

ಗೆಳತಿ ಸಿಕ್ಕಳು ಎಂದು ಕಪ್ಪೆ ಹಾರಿತು ಮನ
ಅವನ ಕೈತಪ್ಪಿ ಹಾರಿಹೋಯಿತು.
ಕನಸು-ನಲಿವಿಗೆ ಬೇರೆ, ಪ್ರೀತಿ-ನೆನಪಿಗೆ ಬೇರೆ
ದಿನವೆಲ್ಲ ಹೀಗೇ ಕಳೆದುಹೋಯಿತು.

ಮುಸ್ಸಂಜೆ ಕ್ಷಣವೆಲ್ಲ ನೆನಪಲುಳಿಯಲಿ ಎಂದು
ಮಾತಿನ ಕೋಡಿ ಹರಿಸಿದಳು ಮನಬಿಚ್ಚಿ.
ನಾವೆಂದೂ ಹೀಗೇ ಇರುವ ಒಬ್ಬರಿಗೊಬ್ಬರು ಎಂದು
ಗೆಳೆತನವ ಮುಗಿಸಿದಳು ರಾಖಿ ಕಟ್ಟಿ.

ಅಪ್ಪಂಗೊಂದು ದಿನ ಅಮ್ಮಂಗೊಂದು ದಿನ
ಗೆಳೆಯರಿಗೊಂದಿನ ಪ್ರೇಮಿಗೊಂದಿನ
ನಗಲಿಕ್ಕೊಂದಿನ ಅಳಲಿಕ್ಕೊಂದಿನ
ಮುಗಿಸಿಬಿಡಿ ಎಲ್ಲವನ್ನೂ ಅದೇ ದಿನ!