Friday, February 4, 2011

ಬೆಳಕಾದ ಮೇಲೆ .......


ಶುರು:


ಅವ ಅವಳನ್ನು ಮದುವೆಯಾದ. ಅವ ಅವಳನ್ನು ಮದುವೆಯಾಗಿ ಸಂಸಾರ ಹೂಡಿದ. ಮನೆ ಮಾಡಿದ. ಪಾತ್ರೆ ಪಗಡೆ ಕೊಂಡುಕೊಂಡ. ಕೇಜಿಗಟ್ಟಲೆ ಕೊಳ್ಳುತ್ತಿದ್ದವ ಕ್ವಿಂಟಾಲುಗಟ್ಟಲೇ ಅಕ್ಕಿ ಕೊಳ್ಳಲು ಶುರು ಮಾಡಿದ. ಪದೇ ಪದೆ ಔಷಧಿ ಅಂಗಡಿಯ ಮುಂದೆ ಚೀಟಿ ಹಿಡಿದು ಕಾದ. ಬಿಳೀ ಕೊಟ್ಟೆಯ ಹಿಡಿದು ಹಾಲಿನಂಗಡಿಯವನ ಮುಂದೆ ಹಲ್ಲು ಗಿಂಜಿದ. ಹಂಸಕ್ಷೀರ ನ್ಯಾಯವಾದಿಯಾದ. ರಾತ್ರಿ ತೂಕಡಿಕೆಯಲ್ಲೂ ಹಳೇ ಪುಸ್ತಕದ ಹಾಳೆಯ ತಿರುವಿದ. ಹೆಂಡತಿಯ ನಿದ್ರೆಗಾಗಿ ಕಾದ. ಅವಳಿಗೆ ನಿದ್ರೆ ಬಂದ ಮೇಲೆ ದೀಪವಾರಿಸದೇ ಮಲಗಿದ. ಕತ್ತಲಲ್ಲಿ ಕಳೆಯಬಾರದು ಏನೂ!


ಅಂತ್ಯ:


ಹೂವಿನಂಗಡಿಯ ಮುಂದೆ ಹೂವಿಗಾಗಿ ತಾಸೆರಡು ಕಾದು ಸೂರ್ಯ ಮೆಲ್ಲಗೆ ಕೆನ್ನೆ ತಟ್ಟಿದ. ಹೂ ಮಾರುವ ಹೆಣ್ಣಿನ ಬಳೆಗಳ ಸದ್ದು ಹತ್ತಿರವಾದಂತೇ ಸಂಜೆಯಾದ ಅನುಭವ. ಮೊಳ ಹೂವು ಕೊಳ್ಳುವಲ್ಲಿ ಅಂಗೈಯಗಲ ಪತ್ರೆಯನ್ನು ಕಿವಿಯಲ್ಲಿಟ್ಟುಕೊಂಡು 'ಕಿತ್ನಾ ಹುವಾ?' ಎಂದರೆ, ದಸ್ ಎಂದವಳು ಅಂದಾಗ ತಾಸೆರಡು ಕಾದ ಸಂಕಟ ಸೆಕೆಂಡಿನಲ್ಲಿ ಮಾಯವಾಯ್ತು. 


ಗುಂಗೇ ಗುಂಗು! 


ಮನೆಗೆ ಬಂದ. ಒಳಗಿಂದ ಯಾವುದೋ ಸೌಂಡು, ರಸ್ತೆಯ ಬದಿಯಲ್ಲಿ ಕಲ್ಲು ಬೆಂಚಿನಲ್ಲಿ ಸುಖ ದುಃಖ ವಿಚಾರಿಸಿಕೊಳ್ಳುತ್ತಿದ್ದ ಪ್ರೇಮಿಗಳ ಪಕ್ಕದಲ್ಲಿ ಬಸ್ಸಿನದೊಂದು ಟಾಯರು ಒಡೆದಂಥ ಶಬ್ದ. ಎಂಥದಿದು ಎಂದು ಅಡುಗೆ ಮನೆಗೆ ಧಾವಿಸಿದರೆ ಅನ್ನವೆಲ್ಲ ಚೆಲ್ಲಾಪಿಲ್ಲಿ. ಬಾತ್ ರೂಮಿನ ಕೊಂಚವೇ ಬಾಗಿಲು ತೆಗೆದು ಇಣುಕಿ ನೋಡುತ್ತಿರುವ ಅರೆಬೆತ್ತಲೆ ಹೆಂಡತಿ. ಸುಡುಗಾಡು ಕಲ್ಲಕ್ಕಿ ಬೇಗ ಬೆಂದು ಸಾಯಲಿ ಎಂದು ಕುಕ್ಕರಿನ ಸೀಟಿಯ ಮೇಲೆ ಕಲ್ಲು ಹೇರಿಟ್ಟ ಅತ್ತೆಯ ಕೈಯಲ್ಲಿ ದೊಡ್ಡಕ್ಷರದ ಲಲಿತಾ ಸಹಸ್ರನಾಮದ ಪುಸ್ತಕ. 
'ಹೋಗೋ ಬ್ರಾಹ್ಮಣ ಮುಂಡೇದೆ, ಅದನ್ನೆಲ್ಲ ಚೊಕ್ಕ ಮಾಡಿ ಸಾರಿಸಿ ಸ್ನಾನ ಮಾಡಿ ಬಂದು ದೇವರ ಪೂಜೆ ಮಾಡು' ಅತ್ತೆಯ ಪ್ರಶಾಂತ ದನಿ. ಒಡೆದ ಕುಕ್ಕರಿನ ಬುಸ್ಸನೆ ಹೊಗೆ ಅವನ ಬಾಯಲ್ಲಿ. ನನಗಿವತ್ತು ರಜೆ. ಮೊಟ್ಟೆ ತಿಂದಿದ್ದೇನೆ, ರಾತ್ರಿ ಮಟನ್ನೂ ತಿನ್ನುತ್ತೇನೆ. ಸತ್ತರೂ ಸ್ನಾನ ಮಾಡುವುದಿಲ್ಲ. ಕುಕ್ಕರುಗಾಲಲ್ಲಿ ಸೋಫಾದ ಮೇಲೆ ಕುಳಿತವನ ಅವತಾರವನ್ನು ನೋಡಲಿಕ್ಕೂ ಬಿಡಲೇ ಇಲ್ಲ ದೊಡ್ಡಕ್ಷರದ ಲಲಿತಾ ಸಹಸ್ರನಾಮದ ಪುಸ್ತಕ. 
'ಬ್ರಾಹ್ಮಣನಾದರೇನು? ಗಂಡಸ್ತನ ತೋರಿಸಲಿಕ್ಕೆ ಬೀರನ್ನಾದರೂ ಕುಡಿ ಎಂದವ ಕೆಂಗೇರಿ ಮೋರಿಯಲ್ಲಿ ಹುಳಸೇಹಣ್ಣು ಮುಖ ಮಾಡಿಕೊಂಡು ಉಪ್ಪಿನಕಾಯಿ ಚೀಪುತ್ತ ಬಿದ್ದಿದ್ದಾನೆ. ಸೂರತ್ತಿನಲ್ಲಾದರೆ ಸರಿ, ಮೋರಿ ಯಾವುದು ರಸ್ತೆ ಯಾವುದು ತಿಳಿಯದು. 'ಛೀ, ಗಲೀಜು' ಎಂದರೆ 'ಸಾಫ್ ಕರೋ ಬ್ಯಾವಡಾ' ಎಂದು ತನಗಿಂತ ಉದ್ದದ ಪೊರಕೆಯ ಕೈಗೆ ಕೊಟ್ಟು ಫ್ಲೈಓವರಿನ ಕೆಳಗಿನ ಕಟ್ಟೆಯ ಮೇಲೆ ಬೀಡಿಯೊಳಗಿನ ತಂಬಾಕು ಜಗಿಯುತ್ತ ಕೂರುವ ಹೆಂಗಸರೊಂದಿಗೆ ಯಾರಿಗಾದರೂ ಮಾತನಾಡಲಿಕ್ಕುಂಟೇ?!
'ಸ್ವಾಮೀ, ಇಲ್ಲಿ ಉಪನಗರ ಬಸ್ಸು ಬರ್ತದಾ?' ಎಂದದ್ದಕ್ಕೆ ಎದುರಿನ ಮುದುಕ ಬುಡದಿಂದ ತುದಿಯನಕ ಒಮ್ಮೆ ಕಣ್ಣಾರೆ ಕಂಡು, 'ಓ ಅಲ್ಲೇ ಅಲ್ವೇನಪ್ಪ ಬಸ್ ಸ್ಟೇಂಡು? ಎರಡೇ ನಿಮಿಷ ನಡ್ಕೊಂಡ್ ಹೋದ್ರೆ ' ಅಂದ. 'ಅಯ್ಯೋ ಬಿಡಿ ಸ್ವಾಮೀ, ಟೈಮಿಗೇನು? ನಾಳೆನೂ ಬರುತ್ತೆ. ನನ್ನತ್ರ ಇವತ್ತಿನ ಪಾಸುಂಟು, ಇದು ನಾಳೆ ಬರತ್ಯೇ?' 
ಬಸ್ಸು ಬಂತು.
ಅಂಗೈಯಗಲದ ಪತ್ರೆ ಹತ್ತು ರುಪಾಯಿ. ಒಡೆದ ಕುಕ್ಕರು ಮೂರು ಸಾವಿರ. ರಾತ್ರಿಗೆಂದು ತೆಗೆದಿಟ್ಟ ಬೀರು ನೂರೈವತ್ತು. ತಟಕು ಕನ್ನಡಕವ ಹಾದು ಪೊರೆ ಬೆಳೆದ ಕಣ್ಣು ಸೇರಲು ದೊಡ್ಡಕ್ಷರದ ಹನುಮಾನ್ ಚಾಲೀಸಾ ನಾಲ್ವತ್ತು. ಮೊನ್ನೆ ಬೇವಾರ್ಸಿ ಜತಿನ್ ಭಾಯ್, ಸಾವಿರದ ಬಂಡಲ್ಲಿನಿಂದ ಎರಡು ನೋಟನ್ನು ತೆಗೆದು ಶೇರ್ ಬ್ರೋಕರನಿಗೆ ಕೊಟ್ಟು ಇದರಲ್ಲಿ ಇದ್ದಿದ್ದೇ 98 ಎಂದು ವಾದ ಮಾಡಿ ಕೊನೆಗೂ ಕೊಂಡು ಹೋದದ್ದು ಎರಡು ಸಾವಿರ. ಹೆಂಡತಿಯ ಸಿಟ್ಟಿಗೆ ಮೆಡಿಕಲ್ ಶಾಪೇ ಮದ್ದು. ಯಾವ ಮೂಲೆಯಿಂದ ನೋಡಿದರೂ ನಷ್ಟಾವತಾರವೇ ಎಂದುಕೊಂಡು ಕಂಡಕ್ಟರನ ಎದುರೇ ತನ್ನ ದಿನದ ಪಾಸನ್ನು 'ತಗೋಳ್ಳಿ,  ಸಹಿ ಮಾಡಿಕೊಳ್ಳಿ' ಎಂದು ಇಪ್ಪತ್ತು ರುಪಾಯಿಗೆ ಮಾರಿ ತನ್ನಷ್ಟಕ್ಕೆ ಇಳಿದುಹೋದ...