Sunday, August 15, 2010

ಸ್ವಾತಂತ್ರ್ಯೋತ್ಸವಕ್ಕೇ...... ಜಯವಾಗಲಿ


ಒಂದು ಚಾನಲ್ಲಿನಲ್ಲಿ 63ನೇ ಸ್ವತಂತ್ರ ದಿನ, ಇನ್ನೊಂದರಲ್ಲಿ 64ನೇದು. ಎಷ್ಟನೇದಾದರೇನು! ಧ್ವಜ ಹಾರಿಸಿ ಹಣೆಯ ಮೇಲೆ ಮುಂಗೈಯ ಮುಂದೆ ಮಾಡಿಟ್ಟುಕೊಂಡು ಜನಗಣಮನ ಹಾಡಿ, `ನಾಳೇ ನಾವೇ ನಾಡ ಹಿರಿಯರು, ನಮ್ಮ ಕನಸಿದು ಸುಂದರ...' ಎಂದುದುರಿಸದೇ ಸ್ವೀಟು ಕೊಡುವುದಿಲ್ಲ ಮಾಸ್ತರರು ಎಂದು ಅದನ್ನೂ ಉದುರಿಸಿ, ಸಿಹಿ ತಿಂದು ಮನೆಗೆ ಬಂದರು ಶಾಲೆ ಮಕ್ಕಳು. ಯಾರೋ ಬರೆದುಕೊಟ್ಟ ಹತ್ತತ್ತು ಪುಟ ಭಾಷಣವ ಒಂದೇ ಗುಟುಕಿನಲ್ಲಿ ಓದಿ ಮುಗಿಸಿ ಮನೆಗೆ ಹೊರಟ ಯಡಿಯೂರಪ್ಪ. ಕೇಸರಿ ಮುಂದಾಗಿ ಸುತ್ತಿಕೊಂಡು ಮುರುಟಿ ಬಿದ್ದ ಧ್ವಜದ ಪಾಡು ಗೋವಿಂದ. ಇನ್ನು ಬರುವರು ಆರು ಗಂಟೆಯ ನಂತರ ಬಿಸಿಲಿಳಿದ ಮೇಲೆ ಇಳಿಸಿಕೊಂಡು ಹೋಗುವರು, ಬೆಳಗ್ಗೆ ಸ್ನಾನವಾದ ಮೇಲೆ ಮೈಯೊರೆಸಿಕೊಂಡು ಹರಗಿದ್ದ ಟುವಾಲಿನಂತೇ. 
ಮತ್ತೇನು ವಿಶೇಷ?! 
ಸೂರತ್ತಿನಲ್ಲಿ ಯಾರೋ ಬಿಳಿಯ ಬಟ್ಟೆ ತೊಟ್ಟವರು ಹೆಗಲಿಗೆ ಕೇಸರಿ ಶಾಲು ಹೊದ್ದವರು ಬಂದು `ಜೈ ಭಾರತ್ ಮಾತಾಜೀ' ಎಂದು ಎರಡೆರಡು ಜಿಲೇಬಿ ಕೊಟ್ಟು `ಆಪಕಾ ಯೇ ದಿನ್ ಮೀಠಾ ರಹೇ' ಎಂದು ಹೋಗಿಯೇ ಹೋದರು. ಟೀವಿಯಲ್ಲಿ ಒಂದರ ಹಿಂದೊಂದೊಂದು ಕಾರ್ಯಕ್ರಮ. ನಡುನಡುವೆ `ವೀಕ್ಷಕರಿಗೆಲ್ಲ ಸ್ವಾತಂತ್ರ್ಯೋತ್ಸವದ ಶುಭಾಶಯಗಳು'. ಚಾನಲ್ಲಿನ ಲೋಗೊದ ಮೇಲೆ ಕೇಸರಿ ಬಿಳಿ ಹಸುರು ಬಣ್ಣ. ಒಂದು ದಿನದ ರಂಗು. ಹಿಂಗಡೆಯ ಪರದೆಯ ಮೇಲೆಲ್ಲ ಚಿಕ್ಕ ಚಿಕ್ಕ ಪ್ಲೇಸ್ಟಿಕ್ ಬಾವುಟಗಳು. 
ಈ ಅರವತ್ಮೂರನೇ ಸ್ವಾತಂತ್ರ್ಯೋತ್ಸವದ ದಿನದಂದು ನಿಮಗೆ ಏನನ್ನಿಸುತ್ತಿದೆ ಎಂದು ನಿರೂಪಕಿಯೊಬ್ಬಳು ಹಿರಿಯರನ್ನು ಸಂದರ್ಶನ ಮಾಡುತ್ತಿದ್ದರೆ ಇನ್ನೊಂದು ಚಾನಲ್ಲಿನಲ್ಲಿ `ಅರವತ್ನಾಲ್ಕನೇ  ಸ್ವಾತಂತ್ರ್ಯ ದಿನದ ವಿಶೇಷ ಕಾರ್ಯಕ್ರಮಗಳು' ಎಂದು ಜಾಹೀರಾತೋ ಜಾಹೀರಾತು. ಯಾರೋ ಹೇಳುವುದನ್ನು ಕೇಳುವುದು ಬಿಟ್ಟು ಸ್ವತಃ ಒಮ್ಮೆ ಲೆಕ್ಕ ಹಾಕಬಾರದೇ? ಕೈ ಬೆರಳಿಲ್ಲವೇ? ಅಷ್ಟಾಗದಿದ್ದರೆ ಬರೀ ಸ್ವಾತಂತ್ರ್ಯೋತ್ಸವ ಎಂದರೆ ಸಾಲದೇ?
ಒಂದು ಕಡೆ ಸಮಾವೇಶ, ಇನ್ನೊಂದು ಕಡೆ ಪಾದಯಾತ್ರೆ. ಮತ್ತೊಂದು ಕಡೆ ಇಂತಹ ಅಪದ್ಧ. ಇವುಗಳಿಂದ ನಮ್ಮ ದೇಶಕ್ಕೆ ಎಂದಿಗೋ ಸ್ವಾತಂತ್ರ್ಯ!

:ಜೈ ಹಿಂದ್:

1 comment:

  1. ಇದು 63 ನೇ ವರ್ಷ. 64 ನೇ ಆಚರಣೆ ...... ಲೆಕ್ಕ ಹಾಕಿ ನೋಡಿ ......

    ReplyDelete