Monday, August 9, 2010

ಸೂರತ್: ಬೀದಿ ಒಂದು

ಸೂರತ್ತಿನ ಬೀದಿಯಲ್ಲಿ ಮುನ್ಸಿಪಾಲಿಟಿಯವರು ಎಷ್ಟು ಹಿಡಿ ಹಿಡಿದುಕೊಂಡು ಗುಡಿಸಿದರೂ ಐದೇ ನಿಮಿಷದಲ್ಲಿ ಧೂಳು ತುಂಬುತ್ತದೆ. ಹೊಸ ಧೂಳಿಗೆ ಅವಕಾಶವಾಗಲೆಂದೇ ಹಳೆಯ ಧೂಳು ತೆಗೆಯುವುದೂ ಅವರ ಉದ್ದೇಶವಿರಬಹುದು, ಕೇಳಿದವರಾರು?  ಹೊಸ ಧೂಳಿಗೆ ಅವಕಾಶ ಕೊಡುತ್ತಲೇ ಹಳೆಯ ಧೂಳನ್ನು ಎಲ್ಲಿ ಕೊಂಡು ಹೋಗಿ ಹಾಕಿದರೆಂದು ತಿಳಿದವರಿಲ್ಲ. ಇಲ್ಲಿ ಕುಕ್ಕರಗಾಲಲ್ಲಿ ಕೂತು ಮೇಸ್ತ್ರಿಗೆ ಕಾಯುವ ಮಂದಿಗೆ ಬಹಳ ಸಲ ಸೂರ್ಯ ಕಂತಿದರೂ ಕಾಯುವ ಕೆಲಸವೇ ಮುಗಿಯುವುದಿಲ್ಲ. ಇನ್ನೆಲ್ಲಿ ಮನೆಗೆ ಹೋಗುವುದು? ಬೆಳಗಾದರೆ ವಾಪಸು ಇಲ್ಲಿಗೇ ಬರಬೇಕಲ್ಲ ಎಂದು ಅಲ್ಲಿಯೇ ತಲೆಗೆ ಕಟ್ಟಿದ್ದ ಟುವಾಲು ಹಾಸಿಕೊಂಡು ಮಲಗುವವರೂ ಉಂಟು. ಹಾಗೆ ಮಲಗಿದವರನ್ನು ರಾತೋರಾತ್ರಿ ಕಸ ತುಂಬುವ ಟೆಂಪೋದ ಮೇಲೆ ಬಂದು ಎತ್ತಾಕಿಕೊಂಡು ಹೋಗುವ ಮುನ್ಸಿಪಾಲಿಟಿಯವರು ಬೆಳಿಗ್ಗೆ ಬಿಡಲಿಕ್ಕೆ ತಲೆಗೆ ನೂರು ಕೇಳುವುದೂ ಉಂಟು. ಮನೆಯಲ್ಲಿ ಮಲಗಿದರೆ ಹೆಂಡ್ತಿ ಕಾಟ, ಬೀದಿಯಲ್ಲಿ ಮಲಗಿದರೆ ಮುನ್ಸಿ ಕಾಟ! ಕೊನೆಯದಾಗಿ ಎಲ್ಲಿದ್ದರೂ ಹೇಗಿದ್ದರೂ ಗಂಡಸರು ಹೈರಾಣು. ಹಾಗೆಯೇ ರಸ್ತೆಯ ಮೇಲೆ ಮಲಗಿ ತಾಸಾಗಿರುವುದಿಲ್ಲ, ಎಲ್ಲಿಂದಲೋ ಟಪ್ಪ.. ಟಪ್ಪ.. ಎಂದು ಟಪ್ಪಾಳೆ ತಟ್ಟುತ್ತ ಬಂದೇ ಬಿಟುವ ಚಕ್ಕಾಗಳು. ಡಾರ್ಲಿಂಗ್ ದೇದೋನ.. ಎಂದು ಒಂದು ಸಲ ಟಪ್ಪ ಎಂದು ಕೈತಟ್ಟಿ ತೊಡೆಯ ಚಿವುಟಿದರೆ ಮುಗಿದೇ ಹೋಯಿತು ಅವರ ನಿದ್ರೆ. ದೇದೋನ ಎಂದಾಗ ಕೊಡಲಿಕ್ಕೆ ಸಾವಿರ ದುಡಿದಿಟ್ಟುಕೊಂಡಿದ್ದಾನೆಯೇ?ಬೆಳಿಗ್ಗೆ ಚಾಯ್ಗೆಂದು ಇಟ್ಟುಕೊಂಡಿದ್ದ ಮೂರು ರುಪಾಯಿ ಚಕ್ಕಾ ಪಾಲು. ತಥ್ ಎಂದು ಶಾಪ ಹಾಕಿ ಮಲಗುವುದರಲ್ಲಿ ಪೆಕೆಕೇ..... ಎಂದು ಹಾರನ್ನು ಮಾಡುತ್ತ ಬರುತ್ತದೆ ಒಂದು ಕರಿ ಮಾತ್ತೊಂದು ಬಿಳಿ ಕಾರು. ಅದರೊಳಗೆ ಯಾರೋ ಹೆಂಗಸು ಕೂಗಿದ ಸದ್ದು . ಆ ಸರ್ಕಲ್ಲು, ಈ ತಿರುವನ್ನೆಲ್ಲ ನಾಕು ಬಾರಿ ತಿರುಗಿ ಬರುವುದರಲ್ಲಿ ಕಾರಿನೊಳಗೆ ನಿಶ್ಶಬ್ದ. ಇನ್ನು ಮುಂದಿನ ದೃಶ್ಯ ನೋಡಬಾರದು ಎಂದು ಮುಸುಕೆಳೆದು ಮಲಗುವ ಎಂದರೆ ಚಾದರವಿಲ್ಲ. ಗಟ್ಟಿ ಕಣ್ಣು ಮುಚ್ಚಿ ಮಲಗಿದರೆ ಕೇಳುವುದು ಕಾರಿನ ಬಾಗಿಲು ತೆಗೆದ ಸದ್ದು. ದಪ್ಪ್ ಎಂದು ಅಕ್ಕಿಯ ಮೂಟೆ ಹತ್ತಡಿ ಮೇಲಿಂದ ಬಿದ್ದ ಸದ್ದು. ಮತ್ತೆ ಬಾಗಿಲು ಹಾಕಿದ ಸದ್ದು. ತೆಲಯೆತ್ತಿ ನೋಡಿದರೆ ಅಕ್ಕಿಯ ಮೂಟೆಯಂತೆಯೇ ಮುದ್ದೆಯಾಗಿ ಬಿದ್ದೊಂದು ಹರಿದ ಬಟ್ಟೆಯ ಹೆಂಗಸು. ನೋಡಬಾರದು ಎಂದರೂ ನೋಡಿ ಹೋಗುವಲ್ಲಿ ಪೋಲಿಸರ ಆಗಮನ. ಅವರ ಪಾಲಿಗೆ ಬೇಕಲ್ಲ ಆಹಾರ.ರಸ್ತೆ ಬದಿಗೆ ಮಲಗಿದ್ದೇ ತಪ್ಪು. ಕಾಲರು ಹಿಡಿದು ಕರಕೊಂಡು ಹೋದರು, ನಾಕು ಮಾತು ಬೈದರು, ಜಾವ್.. ಸಾಲೇ... ಎಂದು ಕಳಿಸಿದರು. ಬರುವಾಗ ಎದುರಿಗೆ ಕಂಡ ಎಪರುತೆಪರಿನ ಮನುಷ್ಯನ ಮುಖ 'ನನ್ನ ಹೆಂಡತಿ ಕಳೆದು ಹೋಗಿದ್ದಾಳೆ ಹುಡುಕಿ ಕೊಡಿ ಎನ್ನುತ್ತಿದ್ದಂತಿತ್ತು. ತಿಂಗಳಿಗೊಮ್ಮೆ ಹೀಗೆ ನಡೆಯದಿದ್ದರೆ ಸೂರತ್ತಿನಲ್ಲಿನ ಕಮೀಶನರುಗಳ ಮಕ್ಕಳು ದೂರದೂರಿಗೆ ರಜೆ ಕಳೆಯಲು ಹೋಗಿದ್ದಾರೆನ್ನಬಹುದು ಅಷ್ಟೇ.
'ಹಮಾರೇ ವಹಾ.. ಲಡ್ಕೀ ಭೇಜ್ನೇವಾಲೇ ಐಸಾ ನಹೀ ಕರ್ತೇ' ಎಂದು ಬೆಳಕು ಹರಿಯುವುದರೊಳಗೇ ಕ್ಯಾತೆ ಶುರುಮಾಡಿದ್ದ ಅವನ ಕೈಗೆ ನೂರು ರುಪಾಯಿ ನೋಟನಿಟ್ಟು ಅಳುತ್ತ ಹೋಗೇ ಹೋದಳು. 'ತಥ್ ಭೋ........' ಎಂದು ನಿಸ್ಸಹಾಯಕನಾಗಿ ರಾಗ ಎಳೆದು ಮುಗಿಸಿದ... ಅಂತೂ ಬೆಳಗಾಗ, ಕಾಯುವಿಕೆ ಶುರು ಮತ್ತೆ, 'ಮೇಸ್ತ್ರಿ ಬಂದಾನು, ಕೆಲಸ ತಂದಾನು....' 
ಇದೇನೂ ಅರಿಯದ ನಾವುಗಳು ಸೂರ್ಯ ಮೂಡಿದ ಮೇಲೆ ರಂಗುರಂಗಿನ ಮಾಯೆಯ ನೆನೆಯುತ್ತ, ಚಿಟ್ಟೆಗಳು ಚೆಲ್ಲಿ ಹೋದ ಸಿಹಿಗಾಳಿ ಮೆಲ್ಲುತ್ತ, ಬೇಂಕಿನ ಕಡೆಗೆ............

1 comment:

  1. Vinu Superrrrrrr...... Maga. mattu hinge baretaa iru....

    ReplyDelete