Tuesday, August 31, 2010

!?

     ?


ರಾಜ್ಯ, ಸ್ವರಾಜ್ಯ, ರಾಮ ರಾಜ್ಯವೆಲ್ಲ ಅಪ್ಪ ಓದಿ ಅಟ್ಟದಲ್ಲಿ ಕಟ್ಟಿಟ್ಟ ಕಥೆ ಪುಸ್ತಕಗಳು! 


ಈಗಿನ ಕಾಲದಲ್ಲಿ ಯಾವುದೋ ಟೀವಿಯವರು, ಪೇಪರಿನವರು ರಾಮಾಯಣದ ಕಾಲಕ್ಕೆ ತಿರುಗುತ್ತಾರೆ. ರಾಮ-ರಾವಣರ ಯುದ್ಧ ನಡೆದ ಜಾಗ ಇದು, ಹನುಮಂತ ಸುಟ್ಟ ಲಂಕೆಯಿದು ಎಂದು ಶ್ರೀಲಂಕಾದ ಯಾವುದೋ ಜಾಗವನ್ನು ತೋರಿಸುತ್ತಾರೆ. ನಾವು ಅದನ್ನು ಕಂಡು ಮನಸಲ್ಲೇ ರಾಮಾಯಣದ ಕಾಲವನ್ನು ಸ್ಮರಿಸುತ್ತೇವೆ. ಆದರೆ ವಾಸ್ತವ ಅದಲ್ಲ. ವಾಸ್ತವದಲ್ಲಿ ರಾಮನ ಸಜ್ಜನಿಕೆ, ಹರಿಶ್ಚಂದ್ರನ ಸತ್ಯವಂತಿಕೆ ಕೆಲಸಕ್ಕೆ ಬರುವಂತಹುದಲ್ಲ. ನಾವು ದಿನಕ್ಕೆ ನೂರಾರು ಜನರೊಂದಿಗೆ ಮಾತನಾಡುತ್ತೇವೆ. ನೂರಾರು ಜನರೊಂದಿಗೆ ಪ್ರಯಾಣ ಮಾಡುತ್ತೇವೆ. ಎಲ್ಲೋ ಮೂಲೆಯಲ್ಲಿ ನಿಂತು ಬ್ರೆಡ್ಡೋ ಬನ್ನಿನೊಂದಿಗೆ ಚಾ ಕುಡಿದು ಹೊಟ್ಟೆಯನ್ನು ಇದೇ ಊಟ ಎಂದು ಸಮಾಧಾನ ಪಡಿಸುತ್ತೇವೆ. ಇಂತಹ ಮಾತು-ಕತೆಯಲ್ಲಿ, ಅವಸರದಲ್ಲಿ, ಅಹಂಕಾರದಲ್ಲಿ ಸಜ್ಜನಿಕೆ, ಸತ್ಯವಂತಿಕೆ, ಮಡಿವಂತಿಕೆಗಳೆಲ್ಲ `ಒಂದಾನೊಂದು ಕಾಲದಲ್ಲಿ ಒಬ್ಬ ರಾಜ......'  ಎಂಬತಹ ಕತೆಗಳೇ ಆಗಿಬಿಡುತ್ತವೆ.
 ನಾನೊಬ್ಬ ಸಜ್ಜನನಾದರೆ, ಸತ್ಯವಂತನಾದರೆ ಜಗತ್ತು ಬದಲಾಗುವುದಿಲ್ಲ. ನಾನು ಬೇರೆಯವರನ್ನು ಬದಲಾಯಿಸಲೂ ಆಗುವುದಿಲ್ಲ. ನೋಡಿ ಕಲಿಯುವ ಜಮಾನಾ ಇದಲ್ಲ. ಬೇರೆಯವರು ಹೇಗೂ ಇರಲಿ ನಾನು ಮಾತ್ರ ಬದಲಾಗುತ್ತೇನೆ ಎಂದು ಹೊರಟರೆ, ಬದಲಾಗುವುದು ದೊಡ್ಡ ಮಾತಲ್ಲ, ಆದರೆ ಬದುಕಲಿಕ್ಕಾಗುವುದಿಲ್ಲ. ಬೆಂಗಳೂರಲ್ಲಿ ಪಾಪ! ಭಿಕ್ಷುಕ ಎಂದು ರುಪಾಯಿ ನಾಣ್ಯ ಹಾಕಿದರೆ `ಹಯ್ಯ್... ಒಂದ್ ರುಪಾಯ್ಗೆ ಈ ಬಿಸ್ಲಲ್ಲಿ ನಿಲ್ಬೇಕಾ ನಾನು?' ಅಂತಾನೆ. ಸೂರತ್ತಿನಲ್ಲಿ ಹಾಕಿದರೆ, `ತುಮ್ಹೀ ರಖೋ ಭಾಯ್, ಚಾಯ್ ಪೀಯೋ ದೇಖೇಂಗೇ' ಅನ್ನುತ್ತಾನೆ. ರಸ್ತೆಯ ಮೇಲೆ ಗಾಡಿಯಡಿಗಾಗಿ ಸತ್ತ ನಾಯಿಯ ಮೇಲೆ ಇನ್ನೊಂದು ನಾಯಿ ಬಂದು ಕಾಲೆತ್ತಿ ನಿರಾತಂಕ ಉಚ್ಚೆ ಹೊಯ್ದು ಹೋಗುತ್ತದೆ. ತಿಂದು ಬಿಸಾಡಿದ ದೋಸೆಯ ಚೂರು ಕಂಡರೆ ಕೂಗಿ ತನ್ನ ಬಳಗವನ್ನು ಕರೆಯುವುದಿಲ್ಲ ಕಾಗೆ. ಸುಮ್ಮನೆ ತಿಂದು ಮೂತಿಯೊರೆಸಿಕೊಂಡು ಹೋಗುತ್ತದೆ ತನ್ನಷ್ಟಕ್ಕೆ. ಹಳೆಯ ಕಾಲದ ಕಥೆಯ ಕೇಳುತ್ತ ಕುಳಿತಾಗ ಅನಿಸುತ್ತದೆ, ಈಗಲೂ ಹಾಗೆಯೇ ಇರಬೇಕಿತ್ತು ಎಂದು. ಆದರೆ ಈಗಿನ ಕಾಲದಲ್ಲಿ ನಾವಿದ್ದೇವೆ ಎಂಬುದು ನಿಜ. ಈಗಿನ ಕಾಲದಲ್ಲಿ ನಾವಿದ್ದೇವೆ ಎಂಬುದು ನಿಜಕ್ಕೂ ಸಾಹಸ, ಹಿಂದಿನ ಕಾಲಕ್ಕೆ ಹೋಲಿಸಿದರೆ!!!!
ಇಲ್ಲಿ ನಾನು, ನನ್ನದು, ನಾವು ನನ್ನವು ಅಷ್ಟೇ ಉಳಿಯುವಂಥದ್ದು. ಬಾಕಿಯೆಲ್ಲ ರಸ್ತೆಯ ಮೇಲೆ ತಿರುಗಾಡುವ ಯಾರದೋ ಚಪ್ಪಲಿಯ ಅಡಿಗಾಗಿ ಹೋಗುವ ಬಾಳೇ ಹಣ್ಣು ಸಿಪ್ಪೆ. 


ಕೊನೆಯಲ್ಲಿ :::
ಗಾಂಧಿ ಕೂಡಾ ರಾಮರಾಜ್ಯದ ಕನಸು ಕಂಡದ್ದೇ ವಿನಃ ಆವಾಗಲೂ ರಾಮರಾಜ್ಯವಾಗಿರಲಿಲ್ಲ. ಅದು ರಾಮನ ಕಾಲದಲ್ಲೇ ಮುಗಿದದ್ದು. ನಮ್ಮ ರಾಜ್ಯದಲ್ಲಿ ರಾಮ ಎಂಬ ವ್ಯಕ್ತಿ ಮುಖ್ಯಮಂತ್ರಿಯಾದರೆ ರಾಮರಾಜ್ಯ ಎಂದು ಕರೆಯಬಹುದೇನೋ 

1 comment: