Wednesday, June 17, 2020

ಮೊದಲೊಲವ ಕರೆಗಂಟೆ!


ಕನ್ನಡಿ ಹೇಳೀತೇ ನನ್ನಂದವ?? 

ಮಂಚದ ಮೇಲಿನ ಪುಟ್ಟ ಗೊಂಬೆ ಸಣ್ಣಗೆ ನಗುತ್ತಿತ್ತು. ಬೆನ್ನಿಗೊಂದು ಕಣ್ಣಿಲ್ಲ. ಆದರೇನು ಎಂಬಂತೇ ಮತ್ತೆ ಮತ್ತೆ ತಿರುಗಿ ತಿರುಗಿ ಕನ್ನಡಿಯ ಕಡೆಗೆ ಓರೆ ನೋಟದಲ್ಲಿ ನೋಡಿದವಳ ಕಂಡು ಟೆಡ್ಡಿಯ ಕರಿಮೂತಿಯೂ ಸೊಟ್ಟಗಾಗಿತ್ತು ಹೊಟ್ಟೆಕಿಚ್ಚಿನಿಂದ.
  "ಕನ್ನಡಿಯಾದರೂ ತಾನಾಗಬಾರದೇ...!!" ಎಂದು ಅವನು ಕಳಿಸಿದ ಮೆಸೇಜು ನೆನಪಾಗಿ ನಾಚಿದಳು. 

ಎಲ್ಲ ಮಾತಿಗೂ ಅರ್ಥ ಹುಡುಕಲು ಹೋದೆನೇ ತಾನು? ಅರಿಯದ ಸಂಭ್ರಮವ ಅನುಭವಿಸುವುದೇ ಪ್ರೀತಿ.

ಬೆಳಗಿನಿಂದ ನಾಕು ಬಾರಿ ಖುಷಿಯಿಂದ ಬಾಗಿಲು ತೆಗೆದು ಬೇಸರದಿಂದ ಹಾಕಿದಳು. ತಿಂಗಳಿನಿಂದ ಕಾಯುತ್ತಿದ್ದ ಕ್ಷಣವೊಂದು ಬಂದೇ ಬಿಟ್ಟಂತೆ. ಪ್ರತಿ ಸಲ ಬಾಗಿಲು ತೆಗೆಯುವಾಗಲೂ ಕಣ್ಣುಗಳಲ್ಲಿ ಹೊಸ ಹೊಳಪು; ಹೊಸ ಸೂರ್ಯ ಉದಯಿಸಿದಂತೇ ಮತ್ತೆ ಮತ್ತೆ. ಗಡಿಯಾರಕ್ಕೆ ಅವಸರವಿಲ್ಲ. ಅದು ತಿರುಗುವುದು ಅದರ ನಿಯಮದಂತೇ. ಇಂದು ನನಗಾಗಿ ತಿರುಗು ಒಂಚೂರು ಬೇಗ ಎಂದು ಉಸಿರು ಬಿಗಿ ಹಿಡಿದಳು ಬೆಡಗಿ. ಸೆಕೆಂಡು ಮುಳ್ಳಿನ ವೇಗ ಜಾಸ್ತಿಯಾಯಿತೋ ಎಂದು ತಿಳಿದಿಲ್ಲ, ಅವಳ ಎದೆ ಬಡಿತವಂತೂ ಆಯಿತು. ಮತ್ತೆ ಮತ್ತೆ ಸೆಳೆಯಿತು ಕನ್ನಡಿ. ಪ್ರತಿ ಸಲ ಅದರೆದುರು ನಿಂತಾಗಲೂ ಹೊಸ ಹೊಸತೇ ಭಾವ. ಯಾವ ಅಂಗಡಿಯಲ್ಲಿ, ಯಾವ ಮೂಲೆಯಲ್ಲಿ ಯಾರಿಗೂ ಬೇಡದ ಪೇಪರು ಸುತ್ತಿ ಬಿದ್ದಿದ್ದ ಈ ಕನ್ನಡಿಯಿಂದು ನನ್ನ ಬಿಂಬವ ಹೊತ್ತು ಪಾವನವಾಯಿತು ಎಂದು ಮನದೊಳಗೇ ನಕ್ಕಳು ಕೋಮಲೆ. ಸೊಟ್ಟ ಮೂತಿಯ ಟೆಡ್ಡಿಗೆ ಉರಿಯಾಯಿತು ಮತ್ತೆ. 

ಢಣ್.....‌ ಎಂದು ಸ್ಟೀಲಿನ ಪಾತ್ರೆಗೆ ಚಮಚೆಯಿಂದ ಹೊಡೆದ ಸದ್ದು. ಮತ್ತೆ ಜಾಗೃತವಾಯಿತು ಮನಸ್ಸು. ಎಂದೂ ಕೂತಲ್ಲಿಂದ ಅಲುಗಾಡದ ಚೆಲುವೆಯೆದ್ದು ಓಡಿದ್ದು ಕಂಡು ಗಲ್ಲದ ಮೇಲೆ ಬೆರಳಿಟ್ಟುಕೊಂಡಳು ಅಮ್ಮ. 

ಕಣ್ಣಿನಲ್ಲಿ ಮತ್ತೆ ಕಂತಿದ್ದ ಸೂರ್ಯ ಎದ್ದು ಬಂದ. ʼಕೂಸೆ, ಗೇಟು ಯಾರು ತೆಗೆದಿಟ್ಟದ್ದು? ನೋಡು, ದನದ ಬಾಯಲ್ಲಿ ದಾಸಾಳ ಗಿಡದ ಶ್ರಾದ್ಧವೇ ಆಗೋಯ್ತುʼ, ಅಪ್ಪನ ದನಿಗೆ ಸೂರ್ಯನ ಎದುರು ಕಾರ್ಮೋಡ.

ಎಂದಿಗೂ ನೆನಪಿಗೇ ಬಾರದ ಗಡಿಯಾರವಿಂದು ಸುಮ್ಮನೇ ಶತ್ರುವಾಗಿದೆ. ಎಂದೂ ಶಾಂತವಾಗಿರುವ ಸೆಕೆಂಡಿನ ಮುಳ್ಳು ಇಂದು ಜಗವೆಲ್ಲ ತನ್ನದೇ ಎಂದು ಸದ್ದು ಮಾಡುತ್ತಿದೆ. ಊಟಕ್ಕೆ ಕೂರಲೇ? ಆಗಲೇ ಬಂದರೆ? ಅಪ್ಪ ಏನದು ಎಂದರೆ? 

ಅರ್ಧವೇ ತುಂಬಿದ ನೀರ ತಪ್ಪಲೆಯಲ್ಲಿ ಖಾಲಿ ಲೋಟವೊಂದು ಬಿದ್ದಂತೇ; ಕತ್ತು ಉದ್ದವಾಯಿತು ಗೇಟು ತೆರೆದ ಸದ್ದಿಗೆ. ಎಂಟು ಸೂರ್ಯರ ಉದಯವಾಯಿತು ತುಂಟ ರೆಪ್ಪೆಯ ನಡುವಲಿ. ಕಿರುಚಿ ಬಿಡಲೇ ಅವ ಬಂದ ಖುಷಿಯಲಿ? 

"ಏನದು?"

"ಡ್ರೆಸ್ಸು... ಅವತ್ತೇ ಹೇಳಿದ್ದೆ ಅಲ್ಲ!! ಚಂದ ಇತ್ತು ತರಿಸಿದೆ"    

ಮತ್ತೆ ತೆರೆಯಿತು ಶೃಂಗಾರ ಲೋಕದ ಬಾಗಿಲು.

ನಿನ್ನ ಬಾಗಿದ ತುಟಿಗಳಂಚಲಿ ಹೊರಟ ನಲುಮೆಯ ದನಿಯ ತರಂಗ ಸೇರಲೇ ಇಲ್ಲ ನನ್ನ ಕಿವಿಯ ಇಂದಿಗೂ.... ನನ್ನ ಕಣ್ಣಿಗೆ ಬಿಡುವೇ ಸಿಗಲಿಲ್ಲ ಕೊನೆಗೂ. ನಿನ್ನ ಮಾತನ್ನು ನೋಡುತ್ತಲೇ ಕಳೆದುಬಿಟ್ಟೆ ಸಂಜೆಗಳೆಲ್ಲವನ್ನೂ. ನಿನ್ನ ಕಂಗಳ ಸೂರ್ಯ ಕಂತುವುದೇ ಇಲ್ಲವೇನೋ ನಾ ಕಣ್ಣ ಮುಚ್ಚಿದರೂ. ಹೇಗೆ ಬರೆಯಲಿ ನಾನು ಕಲ್ಲು ಬಂಡೆಯ ನಡುವೆ ನಿನ್ನ ಗಲ್ಲದ ಮೇಲೆ ನನಗೇ ತಿಳಿಯದೆ ಬರೆದ ಚಿತ್ತಾರವನು ಸಾಲುಗಳಲಿ? ಕಡಲ ಹಿನ್ನೀರೂ ಉಪ್ಪೆಂದು ಹುಸಿನಗೆಯ ನಕ್ಕಿದ್ದು ನೀನಲ್ಲವೇ! ನಿನ್ನ ನೋಟದ ಬೆಳಕು ನನ್ನ ದಾರಿಯ ತೆರೆದಿರಲು, ನಿನ್ನ ನಗುವಿನ ಬೆರಳು ನನ್ನ ಕೈ ಹಿಡಿದು ನಡೆಸಿರಲು, ನನ್ನ ಬದುಕಿನ ರೀತಿ ನೀನಾಗಿ ಒಲಿದಿರಲು, ಆ ನಗೆಯ ಮರೆತು ಕತ್ತಲೆಯ ಗವಿಯಲ್ಲಿ ಕಳೆಯಲಿ ಹೇಗೆ ಉಳಿದೆಲ್ಲ ಜೀವನವ?? - ಒಂದು ಚೀಟಿ, ಪ್ರೀತಿಯ ಸಾಲುಗಳು.

ಮತ್ತೆ ಕಟ್ಟಿತು ಕಳೆ ಕನ್ನಡಿಯ ಲೋಕದಲಿ. ಬುಧವಾರವೇ ಇಂದು? ಅಲ್ಲ. ಮತ್ತೆ ನಾಕು ದಿನ ಕಳೆಯಲಾರೆ ಇದನ್ನೆದುರಿಟ್ಟುಕೊಂಡು. ಮೊದಲ ಸಲ ಒಲವ ಹೆಸರಿಟ್ಟುಕೊಂಡು ಬಂದದ್ದಲ್ಲವೇ! ʼನಿನ್ನ ಮೈಯನಪ್ಪಲು ಕಾದಿಹೆ, ಬಂದಿಹೆ ಗಾವುದ ದೂರದಿಂದ, ಬಹುಗನಸುಗಳ ಸುಂಕ ತೆತ್ತು...ʼ. - ಮತ್ತೊಂದು ಸಣ್ಣ ಚೀಟಿ, ಕಳ್ಳ ಕಾಮನೆಗಳು. 

"ಊಹು, ಅಂದುಕೊಂಡಂತಿಲ್ಲ. ಪೋಟೊದಲ್ಲಿ ಕಂಡಂತಿಲ್ಲ, ಅವಳಿಗೆಂದೇ ಹೊಲಿದ ಡ್ರೆಸ್ಸಿರಬಹುದೇ! ನನಗೇಕೆ ಒಪ್ಪುತ್ತಿಲ್ಲ???" 
ಎಂಟು ಸೂರ್ಯರ ಪ್ರಭೆ ಕಡಿಮೆಯಾಗಲು; ಕನ್ನಡಿ ನಕ್ಕಿತು, ಟೆಡ್ಡಿಯ ಸೊಟ್ಟ ಕಪ್ಪು ಮೂತಿ ನೆಟ್ಟಗಾಯಿತು.

"ಸ್ವಲ್ಪ ಹಿಡಿಸಿದರಾಯಿತು ಸೊಂಟದ ಬಳಿ......" ಎಂದು ಮುಗುಳುನಕ್ಕಳು ಚೆಲುವೆ, ಮತ್ತೆಲ್ಲ ಮೊದಲಿನಂತಾಯಿತು!!