Wednesday, August 22, 2012

ಕೂಸು ಕುಮಾರಿಯೂ…. ಸಾಬಿ ಕುಮಾರನೂ….


ಓಡಿ ಹೋಗುವವರ ಹಿಡಿಯಲಿಕ್ಕಾಗದು. ಓಡುವವರ ಹಿಂದೆ ಓಡಿದರೆ ಸ್ಕೂಟರಿನ ಹಿಂದೆ ಅಟ್ಟಿಸಿಕೊಂಡು ಹೋಗುವ ನಾಯ ಪಾಡಾಗುವುದು. ಯಾರೋ ಓಡಿ ಹೋದರೆಂಬ ಸುದ್ದಿಯ ಕೇಳಿ ಉದ್ದುದ್ದ ಭಾಷಣದಂತಹ ನ್ಯೂಸುಗಳು ನ್ಯೂಸೆನ್ಸುಗಳು. ಅದಕ್ಕಾಗಿ ವಾದ- ಅಪವಾದಗಳು. ಸರಿಯೋ- ತಪ್ಪೋ?! ಹೆಚ್ಚು ಮತ ಯಾವುದಕ್ಕೋ ಅದು ತಪ್ಪಾಗಿದ್ದರೂ ಸರಿ. ಕಡಿಮೆ ಮತದ ಸರಿಯೂ ತಪ್ಪೇ!

ನಾ ಹುಟ್ಟಿದ ಹವ್ಯಕ ಕೇರಿಯಲ್ಲಿಯೂ ಮಾಣಿ ಎಂದುಕೊಂಡು ರಿಕ್ಷಾ ಓಡಿಸುವ `ನಾಯ್ಕಮಾಣಿ’ ಯೊಂದಿಗೆ ಓಡಿಹೋಗಿದ್ದ ಕೂಸು ವಾಪಸು ಬಂದು ಮನೆಯಲ್ಲೇ ಇದ್ದದ್ದನ್ನು ಕಂಡಿದ್ದೇನೆ. ಮದುವೆಯಾಗಿ ಮಕ್ಕಳಾದ ಸುದ್ದಿಯಿನ್ನೂ ಬಂದಿಲ್ಲ. ಪಕ್ಕದೂರಿನ ಮುಸ್ಲಿಂ ಹುಡುಗಿ ದೂರದ ಬೆಂಗಳೂರಿನ ಮೋಹಕ್ಕೆ ಬಿದ್ದು ಕ್ರಿಶ್ಚಿಯನ್ ಹುಡುಗನೊಂದಿಗೆ ಮನೆಯವರ ಕೈಗೆ ಸಿಕ್ಕು ಕಡಿಗಲ್ಲಿನಲಿ ರಪ್ಪ ರಪ ಹೊಡೆತ ತಿಂದು ಸತ್ತ ಕತೆಯ ಕೇಳಿದ್ದೇನೆ. ಇಲ್ಲಿ ಯಾರೋ ಕೂಸು ಸಾಬಿಯೊಂದಿಗೆ ಮೂರನೇ ಬಾರಿಗೆ ಓಡಿ ಹೋಗಿ ಹತ್ತಾರು ದಿನಗಳ ನಂತರ ಉಡುಪಿಯ ಹತ್ತಿರದಿಂದ ವಾಪಸು ಕರೆತಂದರಂತೆ! ಓಡಿ ಹೋದರೆ ಕೈಗೆ ಸಿಗಬಾರದು. ಕೈಗೆ ಸಿಗುವಂತಿದ್ದರೆ ಓಡಿ ಹೋಗಬಾರದು! ಆದರೆ ಹುಚ್ಚು ಜನ ಸ್ಟ್ರೈಕ್ ಎನ್ನುವಂಥಾದ್ದೇನೋ ಮಾಡಿದರು. `ಜಾತಿ’ಯನ್ನು ನಡುವೆ ತಂದರು. ಒಂದು ದಿನ ಹಾಳು ಮಾಡಿದರು. ಅಷ್ಟೂ ತಿಳಿಯುವುದಿಲ್ಲವೇ ಓಡಿ ಹೋಗುವವರ ಮನಸಿನಲ್ಲಿ ಏನಿತ್ತು ಎಂದು! ಅಷ್ಟೂ ತಿಳಿಯುವುದಿಲ್ಲವೇ ಸಿಕ್ಕಿ ಬೀಳುವವರ ಮನಸಿನಲ್ಲಿ ಏನಿತ್ತು ಎಂದು! ಎಲ್ಲರೂ ಅವರವರ ಪ್ಯಾಂಟನ್ನು ಮಾತ್ರ ಹಾಕಬೇಕು, ಯಾಕೆಂದರೆ ನಾನು ನನ್ನ ಪ್ಯಾಂಟನ್ನು ಮಾತ್ರ ಹಾಕುತ್ತೇನೆ ಎಂದರೆ ಆದೀತೇ? ಇದು ಪ್ಯಾಂಟಿಗೆ ಮಾತ್ರವೇ ಸಂಬಂಧಿಸಿದ ವಿಷಯ. ಅಪಾರ್ಥ ಬೇಡ!

ಇಲ್ಲಿ ಯಾವುದೂ ಮೂಗಿನ ನೇರಕ್ಕೆ ನಡೆಯುವುದಿಲ್ಲ.

ಸಂಸಾರ, ಸಂಸ್ಕಾರ, ಬಾವನೆ, ಸಮಾಜ, ಸುಖ, ದುಃಖ, ಪುರಾಣ, ವಚನ, ಇತಿಹಾಸ, ಪೂರ್ವೋಚ್ಛರಿತ, ಪೂರ್ವ ಚರಿತ, ಪೂರ್ವಾಗ್ರಹ, ಪೂರ್ವಾರ್ಜಿತ…. ಯಾರೂ ಯಾವುದನ್ನೂ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ಪ್ರೀತಿಯೇ ಬಂಧನವಾಗುವ ಇಂದಿನ ಪರಿಸ್ಥಿತಿಯಲ್ಲಿ ಅಭಿಮಾನ ಹಿಂಸೆಯಾಗದಿದ್ದೀತೇ?

ಮಗ ಬೇರೆ ಜಾತಿಯವಳನ್ನ ಮದುವೆಯಾದ ಎಂಬ ಕಾರಣಕ್ಕೆ ಅಪ್ಪ ಮನೆಯ ಬಾಗಿಲನ್ನೇ ಹಾಕಿ ಕುಳಿತ. ಸೊಸೆ ತನ್ನ ಮಗನಿಗೆ ದೇವರಿಗೆ ನಮಸ್ಕಾರ ಮಾಡಲಿಕ್ಕೆ ಕಲಿಸಿದಳು. ಮಗನ ಸಾಫ್ಟವೇರ್ ಇಂಜಿನೀಯರಿಕೆಗೆ ಮೆಚ್ಚಿ ಇನ್ನೊಬ್ಬ ಅಪ್ಪ ಅಂಥದೇ ಹುಡುಗಿ ಹುಡುಕಿ ಜಾತಕ ಹೊಂದಿದ ಭರವಸೆಯಲ್ಲಿಯೇ ಮದುವೆ ಮಾಡಿದ. ತೊಟ್ಟ ಸಾಫ್ಟವೇರ್ ಹರಿದು ಹೋದೀತೆಂದು ಹೆದರಿ ದೇವರಿಗೆ ದೀಪ ಹಚ್ಚುವುದನ್ನೇ ಬಿಟ್ಟುಬಿಟ್ಟಳು ಸೊಸೆ!

ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಯಾರೂ!

ಯಾವುದು ಮರವೆಯಾಗುತ್ತಿದೆಯೋ ಅದರದ್ದೇ ಬಡಬಡಿಕೆ ಶುರುವಾಗುವುದು. ದಿನವೂ ಬುಡಬುಡಕೆಯೊಂದಿಗೆ ಹೇಳಬೇಕು; ಕನ್ನಡದವರಿಗೆ ಕನ್ನಡ ಮಾತಾಡಿ ಎಂದು. ಬ್ರಾಹ್ಮಣರಿಗೆ ಬ್ರಾಹ್ಮಣ್ಯ ಕಾಪಾಡಿ ಎಂದು, ದೇವರಿಗೆ ಕೈಮುಗಿ ಎಂದು!
ಎಲ್ಲ ವಿಪರ್ಯಾಸವೇ!

ತಲತಲಾಂತರಗಳಿಂದ ನಂಬಿಕೊಂಡು ನಡೆದುಕೊಂಡು ಬಂದ ದೇವರು ಒಮ್ಮೆಲೇ ಸುಳ್ಳಾಗಿಬಿಡುತ್ತಾನೆ!

ಮಂತ್ರ ಪಠಣವನ್ನಾಲಿಸಿದರೆ ಕಾದ ಸೀಸವನ್ನು ಕಿವಿಯಲ್ಲಿ ಹೊಯ್ಯುತ್ತಿದ್ದರಂತೆ ಈ ಬ್ರಾಹ್ಮಣರು…. ಎಂಬ ಯಾವುದೋ ಕಾಲದ ಮಾತನ್ನು ಇಂದಿಗೂ ಚಪ್ಪರಿಸಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ ಒಬ್ಬ!

ದೇವರಿಲ್ಲ ಎಂದು ಜಾತಿ ಬದಲಿಸಿದವ ಜ್ಞಾನಪೀಠಿಯಾಗುತ್ತಾನೆ. ದೇವರಿಲ್ಲ ಎಂಬ ವಾದವೇ ಜ್ಞಾನ ಎಂದು ಎಸ್ಸೆಮ್ಮೆಸ್ಸು ತೀರ್ಮಾನ ಕೊಡುತ್ತದೆ.

ತಿರುಪತಿ ತಿಮ್ಮಪ್ಪನೂ ಮೊಬೈಲಿನ ಸಿಗ್ನಲ್ಲಿನ ದೆಸೆಯಿಂದ ಶಕ್ತಿಹೀನನಾಗಿದ್ದಾನೆ ಎಂದು ನ್ಯೂಸ್ ಚಾನಲ್ಲೊಂದರಲ್ಲಿ ಅರ್ಧ ಗಂಟೆಯ ಉಪಸಂಹಾರ ನಡೆಯುತ್ತದೆ.

ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆಯೊಂದು ಅವಶ್ಯಕವೇ? ಇಷ್ಟವಿದ್ದವ ಭಜನೆ ಮಾಡುತ್ತಾನೆ, ಇಲ್ಲದಿದ್ದವ ಕೆಲಸ ಮಾಡುತ್ತಾನೆ!

ಹೇಳುವ ಉದ್ದೇಶ ಒಳ್ಳೆಯದೇ ಇರಬಹುದು. ಕೇಳುವ ಮನಸು ಹೇಗೆ ಯೋಚಿಸುವುದೋ ಯಾರಿಗೆ ಗೊತ್ತು! ವೇದಘೋಷವನ್ನೂ ಖಾಲಿ ಬಕೆಟ್ಟಿನಲ್ಲಿ ಬೀಳುತ್ತಿರುವ ನಲ್ಲಿ ನೀರಿನ ಶಬ್ದ ಎನ್ನುವವರಿಲ್ಲವೇ!? ಅವರೂ ಬ್ರಾಹ್ಮಣರೇ!
ತಪ್ಪು ತಿಳಿಯಬೇಡಿ ಯಾರೂ! ನನಗೆ ಸುಳ್ಳು ಫೋಸು ಕೊಟ್ಟು ಕೆಮೆರಾದ ಎದುರು ನಿಲ್ಲಲಿಕ್ಕೆ ಬರುವುದಿಲ್ಲ.

ಯಾರೂ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಅವರಿಗೆ ಅವರದ್ದೇ ಗೊಂದಲ, ಅವಸರ. ‘ಸೂರ್ಯಂಗೇ ಟಾರ್ಚಾ?’ ಎಂದು ಹಳೇ ಟೇಪ್ರೆಕಾರ್ಡರ್ ನಲ್ಲಿ ರೀಲು ಸುತ್ತಿಕೊಂಡಾಗ ಬರುವ ಸ್ವರದಲ್ಲಿ ಕೇಳುವವರ ಮುಂದೆ……….

ತಮ್ಮ ಮನೆಯ ನಾಯನ್ನು ಸರಿಯಾಗಿ ಸರಪಳಿ ಹಾಕಿ ಬಿಗಿದು ಸರಿಯಾದ ಜಾಗದಲ್ಲಿ ಕಟ್ಟಿ ಹಾಕದೇ ರಾತ್ರಿ ಹುಲಿ ಹೊತ್ತೊಯ್ದಿತು ಎಂದು ಹುಲಿಗೆ ಬಲೆ ಬೀಸಿ, ಅದರ ಹೊಟ್ಟೆಯೊಳಗಿನ ಜೀರ್ಣವಾದ ನಾಯಿಗೆ ರೋದಿಸುವವರ ಮುಂದೆ………

….. ನಾನು ಸಣ್ಣವ. ನೋಡಿದೆ, ಸುಮ್ಮನೆ ಬಂದೆ. ಅಷ್ಟೇ!

ಯಾರೋ ಓಡಿಹೋದರು ಎಂಬ ಸುದ್ದಿಗೆ ಅರ್ಧಸಾವಿರ ಕಮೆಂಟು! ವಿಷಯ ಖರೆಯೋ ಸುಳ್ಳೋ ಆಮೇಲೆ. ಶುರುವಾಗಲಿ ಆಟ. ಗೆಲ್ಲುವವರ್ಯಾರಾದರಾಗಲಿ, ನಂದೂ ಒಂದು ಕವಡೆಯಿರಲಿ…….

ವಿ.ಸೂ.: ಇಲ್ಲಿ ಬರೆದದ್ದೆಲ್ಲ ನಾನು ಕೇಳಿದ್ದು ಮತ್ತೆ ನೋಡಿದ್ದು ಮಾತ್ರ. ಯಾವುದಾದರೂ ಸಾಲು ಕಲ್ಪನೆ ಅನಿಸಿದಲ್ಲಿ ದಯವಿಟ್ಟು ಕ್ಷಮಿಸಿ.
ಮತ್ತೊಂದು ವಿ.ಸೂ.: ಇದನ್ನು ಯಾರಾದರೂ ಕೋಮುವಾರು ಅಥವಾ ಜಾತ್ಯಾವಾರು ತೆಗೆದುಕೊಳ್ಳುವ ಮುನ್ನ, ಮಧ್ಯಾನ್ನ ಕೆರೆಯ ಬಳಿ ಕಟ್ಟೆಯ ಮೇಲೆ ಬಟ್ಟೆ ತೊಳೆದಲ್ಲಿ ಕಟ್ಟೆ ಸಾಫಾಯಿತೋ ಬಟ್ಟೆ ಸಾಫಾಯಿತೋ ಎಂದು ದೃಢಪಡಿಸಿಕೊಳ್ಳಿ!

Tuesday, August 14, 2012

ಒಬ್ಬ ಮಾಣಿಯ ಅಪ್ಪ!


'ಮೂರನೇ ಕ್ಲಾಸಿನಲ್ಲಿ ಮೂರುಸಲ ಫೇಲಾದವನಂತೆ ಅವ ಎಂದು ಮಾಸ್ತರು ಅಸಡ್ಡೆ ಮಾಡಿದ್ದಕ್ಕೇ ಎಸ್ಸೆಲ್ಸಿಯಲ್ಲಿ ರೆಂಕ್ ಬಂದನಂತೆ!' ಎಂದು ದೊಡ್ಡಗೆ ನಗೆ ಹೊಡೆದ ಸುಬ್ರಾಯಜ್ಜ. ಈ ಹಳ್ಳಿಯಲ್ಲಿ ಹೌದೋ ಅಲ್ವೋ, ಈ ಶಾಲೆ ಶುರುವಾದಾಗ್ಲಿಂದ ನೋಡ್ತಿದ್ದೇನೆ ಮಾರಾಯ, ಒಬ್ಬನೇ ಒಬ್ಬ ಕಲಿತ ಮಾಸ್ತರ ಬಂದದ್ದಿದ್ರೆ ಹೌದಂತಿದ್ದೆ ನಾನು ಎಂದು ಮತ್ತೆ ನಕ್ಕು ಸುಮ್ಮನಾದ. ಅದು ಅವನ ಚಾಳಿ. ನಿಮಿಷಕ್ಕೊಂದು ಮಾತನಾಡಿ ಎರಡು ನಿಮಿಷ ಸುಮ್ಮನಿರುವುದು. ಪಕ್ಕದಲ್ಲಿರುವವನಿಗೆ ವಿಷಯ ಮರೆತೇ ಹೋಗಿರುತ್ತದೆ ಮತ್ತೆ ಅವ ಮಾತನಾಡುವುದರೊಳಗೆ. ಇಂತಹ ಸುಬ್ರಾಯಜ್ಜನೂ ಇಂದು ಮಗ ಸೊಸೆಯರೊಂದಿಗೆ ಬೆಂಗಳೂರಲ್ಲಿದ್ದಾನೆ. ಇಲ್ಲಿರುವ ತುಂಡು ಬೂಮಿಯಲ್ಲಿ ತುಂಡು ಕಚ್ಚೆ ತೊಳೆಯುವುದಕ್ಕೆ ಸೋಪೂ ಬರುವುದಿಲ್ಲೆಂದು ಮಗ ಎಚ್ಚರಿಸಿದ್ದಕ್ಕೆ ರಾತ್ರೋರಾತ್ರಿ ತನ್ನ ಅಳಿದುಳಿದ ಬದುಕನ್ನೆಲ್ಲ ಹುಟ್ಟಿದ ಮನೆಯಲ್ಲಿಯೇ ಕಳೆಯಬೇಕೆಂಬ ಸ್ವಂತ ನಿರ್ಧಾರವನ್ನೇ ಬದಲಿಸಿ ಮಗನೊಂದಿಗೆ ಬೆಂಗಳೂರಿಗೆ ಹೊರಡಲೆದ್ದು ನಿಂತಾಗ ತನ್ನ ಮಜಬೂರಿಯನ್ನು ನೆನೆದು ಒಂದು ಹನಿ ಕಣ್ಣೀರು ಗಲ್ಲದ ಮೇಲಿಳಿಯಿತು.

                      ಚಿಕ್ಕಂದಿನಲ್ಲಿ, ಮಳೆಗಾಲದಲ್ಲಿ ಅಂಗಳದಲ್ಲಿ ಜಾರಿಬಿದ್ದು ಸೊಂಟವುಳುಕಿ ಮೂರೇ ದಿನದಲ್ಲಿ ಸುಬ್ರಾಯಜ್ಜನ ತಾಯಿ ತೀರಿಕೊಂಡರು. ಇವನಿಗೆ ಮೀಸೆ ಬಂದು ದೇಶವೇ ಕಾಣದ ಸಮಯದಲ್ಲಿ, ತೋಟದಲ್ಲಿ ಕೊಳೆತ ಅಡಕೆ ಹಾಳೆಯ ಮೇಲೆ ಕಾಲಿಟ್ಟು ಜಾರಿದ ರಭಸಕ್ಕೆ ಗಾಳಿ ಮಳೆಗೆ ಮುರಿದು ಬಿದ್ದಿದ್ದ ಅಡಕೆ ಮರದ ಚೂಪು ತಲೆಗೆ ಜಪ್ಪಿ ಅಲ್ಲಿಯೇ ಅವನ ತಂದೆಯ ಉಸಿರು ನಿಂತಿತು. ಸುಬ್ರಾಯ ರಾತ್ರೋರಾತ್ರಿ ಅನಾಥನಾಗಿ ಹೋದ. ಅಂತಹ ಸಂದರ್ಭದಲ್ಲಿ ಅವರೇ ಪೋಷಿಸಿ ಬೆಳೆಸಿದ ತೋಟ ಗದ್ದೆಗಳು ಇ0ದು ಅವರ ಮಗನ ಹೊಟ್ಟೆ-ಬಟ್ಟೆ-ಓದಿಗೆ ಆಸರೆಯಾದದ್ದು ಹಳೆಯ ಮಾತು. ಅದೇ ತೋಟ, ಮನೆಯನ್ನು  ರಾತ್ರಿ ಬೆಳಗಾಗುವುದರೊಳಗೆ ಬಿಟ್ಟೆದ್ದು ಮಗನೊಂದಿಗೆ ಹೊರಟಾಗ ಅಲ್ಲಿ ಮಗನಿಗೆ ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯೆಂಬುದು ತಿಳಿದಿದ್ದರೂ ಊರ ಮನೆಯ ಮೋಹ ಕಿಂಚಿತ್ತೂ ಕಾಡಲಿಲ್ಲ. ಅಂತೂ ಇಷ್ಟು ವರ್ಷ ಉಳಿದು ಬೆಳೆದ ಮನೆಯನ್ನು ಅನಾಥವಾಗಿಸಿ ಪಯಣ ಹೊರಡುವ ಮುಂಚೆ ಅವರಿಗೆ ನೆನಪಾದದ್ದು ಹೆಂಡತಿ ಸರಸ್ವತಿ. ಅವಳ ನೆನೆದು ನಕ್ಕು ನಕ್ಕು ನರಗಳೆಲ್ಲ ಸಡಿಲವಾಗಿ ಇನ್ನೊಂದೆರಡು ವರ್ಷ ಆಯಸ್ಸು ಹೆಚ್ಚಿದಂತೆನಿಸಿತು. ಆ ಮಹಾತಾಯಿಯ ಕಥೆಯನ್ನೇನು ಕೇಳುತ್ತೀರಿ! ಅವಳ ಕತೆಯೊಂದು ಅವರಿಗೆ ದುಃಖದ ವಿಷಯವಾಗಿರದೇ ಹಾಸ್ಯದ ವಿಷಯವಾಗಿ ಅವರೇ ಊರವರೊಂದಿಗೆ ಬಾಯಿ ಚಪ್ಪರಿಸಿಕೊಂಡು ಹೇಳುತ್ತಿದ್ದರು. ಈಗಲೂ ಒಮ್ಮೊಮ್ಮೆ ಹೇಳಿಕೊಂಡು ಮನದಣಿಯೆ ನಗುತ್ತಾರೆ.

                 ಅಂದು ಹುಣ್ಣಿಮೆಯ ದಿನ. ದೇವರ ಕೋಣೆಯ ಪಕ್ಕದಿಂದ ಹೊರ ಜಗಲಿಗೆ, 'ಮಗ ಹುಟ್ಟಿದ ಸುಬ್ರಾಯ ನಿಂಗೆ' ಎಂಬ ಸುದ್ದಿಯನ್ನು ತಂದದ್ದು ಕತ್ಲಮನೆ ಶಾಂತಾಮಣಿ. ಅವರ ಮನೆಗೆ ಕತ್ಲಮನೆ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ಇನ್ನೊಂದೇ ಕತೆ. ಅದು ಬಿಡಿ. ತುಂಬು ಚಂದಿರನ ಬೆಳಕಲ್ಲಿ ಮಡದಿಗೆ ಹೆರಿಗೆ ಸರಾಗ ಆಗಲಿ ಎಂದು ದೇವರ ನೆನೆಯುತ್ತ ಕುಳಿತ ಅವರಿಗೆ ಗಂಡು ಮಗು ಆದದ್ದು ಬಹಳ ಸಂತೋಷ ತಂದಿತ್ತು. ಆಚೀಚೆ ಮನೆಯ ಮಣಮಣಿಯರ ಸಹಾಯದಿಂದ, ತನ್ನ ಮಣಿಗೆ ಆ ಚಂದ್ರನ ನೆರಳಲ್ಲಿ ಜನಿಸಿದ ಈ ಚಂದ್ರನಿಗೆ ಶಶಾಂಕ ಎಂದು ನಾಮಕರಣ ಮಹೋತ್ಸವವ ಮನೆಯಲ್ಲಿಯೇ ಜರುಗಿಸಿ, ಹನ್ನೊಂದನೆಯ ದಿನಕ್ಕೆ ಮಣಿಯರೆಲ್ಲರಿಗೂ ಅಗ್ಗದ ಸೀರೆಯ ದಾನದಿಂದ ಧನ್ಯವಾದವ ಸಲ್ಲಿಸಿ ಜಗಲಿಯ ಮೇಲೆ ಬೆನ್ನು ಚಲ್ಲಿ ಮುಸ್ಸಂಜೆಯ ಕಳೆಯುತ್ತಿರಲು ಪುಟ್ಟ ಶಶಾಂಕ ಬಿಡದೇ ಅಳುತ್ತಿರುವುದು ಕೇಳಿ ಏನಾಯಿತೋ ಎಂದುಕೊಂಡು ತೊಟ್ಟಿಲ ಬಳಿ ಹೋದರೆ ಸರಸು ಅಲ್ಲಿಲ್ಲ.ಇದೊಂದು ಮರುಳಿ, ಮಗು ಅಳುವುದೂ ಕೇಳುವುದಿಲ್ಲ. ಉಚ್ಚೆ ಹೊಯ್ದೇ ಮುಗಿಯುವುದಿಲ್ಲ. ಎಲ್ಲಿ ಹೋದ್ಯೇ? ಎಂದು ತೊಟ್ಟಿಲ ತೂಗುತ್ತ ಕೂರಲು ಹೋದರೆ ಅಲ್ಲೊಂದು ಪಾಟಿ ಇವರ ಕುಂಡೆಯಡಿಗಾಗಿ ಫಟ್ ಎ0ದು ಒಡೆಯಿತು. ಹರಹರಾ, ಇದೆಂಥದಿದು ಒಡೆದದ್ದು!? ಎಂದು ದೀಪದ ಬೆಳಕಲ್ಲಿ ಹಿಡಿದು ನೋಡಿದರೆ ಸರಸ್ವತಿಯ ಅಕ್ಷರ.... ಬರುವುದಿಲ್ಲ. ಹೋಗುವೆ ಎಂದು. ಅದನ್ನು ಕಂಡು ದಂಗೇ ದಂಗು. ನಾನು ಮದುವೆಯಾದಾಗ 'ಅ' ಬರೆಯಲಿಕ್ಕೆ ಬರದಿದ್ದವಳು ಇಂದು ಪಾಟಿ-ಕಡ್ಡಿ ಹಿಡಿದು 'ಹೋ' ತನಕ ಬರೆದಿದ್ದಾಳಲ್ಲ! ಭಪ್ಪರೇ..... ಎಂದು ನಗಬೇಕೋ ಅಳಬೇಕೋ ತಿಳಿಯದೇ ತೊಟ್ಟಿಲ ತೂಗುವುದರಲ್ಲಿ ಮಗ್ನವಾದರು.ಅದೊಂದು ದೃಶ್ಯ ಸತ್ತರೂ ಮರೆಯಾಗದು ಮನಸಿನಿಂದ. ಹೇಳದೇ ಕೇಳದೇ ಬಿಟ್ಟು ಹೊರಡುವಾಗ ಕೇವಲ ಹನ್ನೊಂದು ದಿನದ ಮಗುವೂ, ಆ ಮಗುವಿನ ಜನನಕ್ಕೆ ಕಾರಣನಾದ ನಾನೂ ಅಂಥವಳಿಗೇ ನೆನಪಿಗೆ ಬಾರದೇ ಹೋಗಿರುವಾಗ, ನಮ್ಮ ಸ್ನೇಹದ, ದಾಂಪತ್ಯದ, ಕಾಮದ ಮೋಹ ಆಗ ಅವಳನ್ನು ಸೆರೆಹಿಡಿಯಲು ವಿಫಲವಾದಾಗ ನನ್ನ ಈ ಮನೆಯ ಮೇಲಿನ ಮೋಹ ಸೆರೆ ಹಿಡಿದೀತೇ!? ಎಂದು ಹುಸಿ ಸಮಾಧಾನ ತಂದುಕೊಂಡು ಕಣ್ಮುಚ್ಚುವುದರೊಳಗೆ ಬೆಳಕಿನೊಂದಿಗೆ ಸ್ವಾಗತಿಸುತ್ತಿತ್ತು ಬೆಂಗಳೂರು.

 ಹಳೆಯ ದಾರಿಯ ಮರೆತೋ ಅಥವಾ ತೊರೆದೋ ಮುಂದಿನ ದಾರಿಯ ಹುಡುಕಿ ಬೆಂಗಳೂರಿನ ಅನವಶ್ಯಕ ಅವಸರದಲ್ಲಿ ಮಗ-ಸೊಸೆಯೊಂದಿಗೆ ಕಳೆದುಹೋದರು.


  

Monday, August 13, 2012

ಥೋ....


ಸಿಟಿ ಮಧ್ಯದ  ಸರ್ಕಲ್ಲಿನಲ್ಲಿ ನಿಂತಿರುತ್ತಿದ್ದ ಕೆಂಪು ಲಿಪ್ ಸ್ಟಿಕ್ಕಿನ ಹೆಂಗಸು ಕಣ್ಣೆದುರಿಗೆ ಹೀಗೆಯೇ ಹಾದು ಹೋದ ಸಂದರ್ಭದಲ್ಲಿ ಅವನಿಗೆ ಕಚ್ಚಿದ ನುಶಿಗೆ ಏಡ್ಸ್ ಬಂದು ತೀರಿತು. ಮುಸ್ಸಂಜೆಯಲಿ ರಸ್ತೆಯ ಬದಿಗೆ ಚಹ ಮೋರುತ್ತ ನಿಂತ ಆಸಾಮಿಯ ಕಿವಿಯಲ್ಲಿ ಕೊಚ್ಚೆ ಹೀರುತ್ತಿದ್ದ ನೊಣವೊಂದು ಗೊಂಯ್ ಎಂದ ಪರಿಣಾಮ; ಜ್ಞಾನೋದಯ! ಕುಡಿಯದೇ ಬಿಟ್ಟುಹೋದ ಚಹವನ್ನು ಅಂಗಡಿಯವ ಯಾರಿಗೂ ಕಾಣದಂತೇ ಟೇಬಲ್ಲಿನ ಕೆಳಗೆ ಹಿಡಿದು ಥರ್ಮಸಿನಲ್ಲಿ ತುಂಬಿ ಪಕ್ಕದವನೊಂದಿಗೆ ಹರಟಲು ನಿಂತ. ರಾತ್ರಿ ಹನ್ನೆರಡು ಗಂಟೆಗೂ ದೀಪವಾರಿಸದ ದೊಡ್ಡವರ ನೋಡುತ್ತ ಬೆಳೆದ ಮಕ್ಕಳು ಮುಖ ಗಂಟು ಹಾಕಿಕೊಂಡು ಏಳುವುದೇ ಹನ್ನೊಂದು ಗಂಟೆಗೆ. ಎದ್ದು ಮಾಡುವುದಾದರೂ ಏನು? ನೀರು ಕಾಣದ ಹೊಲಸು ನಾಲಗೆಗೆ ಚಹಾ ಚಪ್ಪರಿಸುವುದೊಂದೇ ಕೆಲಸ. ಎಫ್ಎಮ್ಮಿನಲ್ಲಿ ಬರುತ್ತಿದ್ದ ದರಿದ್ರ ಹಾಡೊಂದನ್ನು ಬಂದು ಮಾಡಿ ಟೀವಿ ಹಾಕಿದರೆ ನಾಕಾರು ಅಜ್ಜಂದಿರು ಸುತ್ತಲೂ ಕುಳಿತು, ನಮ್ಮ ಕಾಲದಲಿ ಹಾಗಿತ್ತು, ಒಂದು ಕಾಸಿನಲಿ ಹೊಟ್ಟೆ ತುಂಬುತ್ತಿತ್ತು, ಎಂದು ತಿಲ್ಲಾನ ಹಾಡುತ್ತಿದ್ದರು.
ಯಾರೋ ಎಲ್ಲೋ ನೆನಪಾಗಿ, ಮಧ್ಯರಾತ್ರಿಯಲಿ ದಪ್ಪ ಅಂಗಿ, ಮೊಳಕಾಲು ಉದ್ದದ ಚಡ್ಡಿ ಹಾಕಿ ಹೊರಗೆ ಹೊರಟವನ `ಎಲ್ಲಿಗೆ?' ಎಂದು ಕೇಳದೇ ತಾನೂ ಬರಲೇ ಎಂದು ಹೆಂಡತಿ ಎಂದಾಗ ತನಗೆ ನೆನಪಾದದ್ದು ಏನು ಎಂಬುದೇ ಮರೆತುಹೋಗಿ ಹೆಂಡತಿಯೊಂದಿಗೆ ಮುಚ್ಚಿಕೊಂಡು ವಾಕಿಂಗು ಮುಗಿಸಿ ಬಂದ. ದೂರದಲ್ಲಿ ರೈಲು ಹರಿದುಹೋದ ಸದ್ದು. ನಾನು ಅವನು ಕೈ ಕೈಯ ಹಿಡಿದು ದೂರ ದೂರಕೆ ನಡೆದು ಜೀವಮಾನದಲ್ಲಿಯೇ ಒಂದಾಗದ ರೈಲು ಹಳಿಗಳ ಸೇರಿಸಲಿಲ್ಲವೇ? ಅದು ಅವಳ ಕತೆ. ತಾನು ಇವಳನ್ನು ಮೊದಲು ಭೇಟಿಯಾದಾಗಲೂ ಯಾವ ರೋಮಾಂಚನವೂ ಇರಲಿಲ್ಲವಲ್ಲ! ಈಗೆಲ್ಲಿಂದ ಬಂದೀತು? ಹಾಳು ಮದುವೆ!! ಎಂದುಕೊಂಡು ಇವಳ ಕಂಡು ನಗುನಗುತ್ತ ವಾಕಿಂಗು ಮುಗಿಸಿದ. ಇವಳ ಮನಸಲ್ಲಿ ಮಾತ್ರ ಆ ನಗುವ ಕಂಡು ಅದ್ಯಾವ್ಯಾವ ನರಗಳಲ್ಲಿ ಏನೇನು ಹರಿದಾಡಿತೋ? ಹೊದಕಲು ಸರಿಸಿ ಕಣ್ಣು ಒಡೆಯುವುದರೊಳಗೆ ಬಿಮ್ಮನೆ ನೆತ್ತಿ ಬಿರಿಯೆ ಬಿಸಿಲು.
ಇದೆಂಥ ಕರ್ಮವೋ! ಸೈಕಲ್ಲು ಇತ್ತು. ಬೈಕು ತಗೊಂಡ. ಕಾರೂ ಆಯ್ತು. ಮುಂದೆ? ಅಜ್ಜನ ಕೋಲಿದು ನನ್ನಯ ಕುದುರೆ. ದೇವರು ಚಾಲಾಕಿ. ಬಿಟ್ಟರೆ ವಿಮಾನು ತೆಗೆದುಕೊಂಡೇ ತನ್ನ ಬಳಿ ಬರ್ತಾನೆ ಅಂತ ಕೋಲೂರಲಿಕ್ಕೂ ಆಗದಷ್ಟು ಶಕ್ತಿಯ ಉಳಿಸಿ ಈಗ ಸಾಯಿ ಮಗನೇ ಅಂದ. ಸತ್ತು ನೋಡಿಯೇ ಬಿಡುವ ಎಂದ ಅಜ್ಜ ವಾಪಸು ಬರಲಿಲ್ಲ.
ಏನೂ ಕೆಲಸ ಮಾಡದೇ ಇದ್ದರೆ ಆರಾಮ. ಆದರೆ ಯಾರೋ ಹಿಂದಿ ಭಾಷೆಯಲ್ಲಿ ಹೇಳಿದ್ದಾರೆ, ಆರಾಮ ಹರಾಮ ಹಯ್. ಈ ಹಯ್ ಎನ್ನು ಶಬ್ದವನ್ನು ಗದ್ದೆ ಹೂಡುವ ತುಳಸಪ್ಪನೂ ಬಳಸುತ್ತಿದ್ದ. ಏನೇ ಇರಲಿ. ಪೆನ್ಸಿಲ್ಲು ಮೊಂಡಾಯ್ತು. ನಲ್ಲಿಯಲ್ಲಿ ನೀರು ಸೋರುವ ಶಬ್ದ. ರಸ್ತೆಯಲ್ಲಿ ಕುಂಯ್.......... ಎಂದು ಉದ್ದ ಹಾರನ್ನು ಮಾಡುತ್ತ ಹೋದ ಒಂಟಿ ಕಾರು.
ಇಲ್ಲಿ ಬರೆದದ್ದು ಏನು ಅಂತ ನನಗೆ ಗೊತ್ತಿಲ್ಲ. ಇಲ್ಲಿಗಿದರ ಸಮಾರೋಪವು.
ಥೋ....... ಎಂದವರಿಗೆ ಧನ್ಯವಾದವು!