Sunday, July 25, 2010

ಒಂದು ಕಥೆ

ಒಂದೂರಿನಲ್ಲಿ ಕುಪ್ಪಯ್ಯ ಮತ್ತು ತಿಪ್ಪಯ್ಯ ಎಂಬ ಸ್ನೇಹಿತರಿದ್ದರು. ಅವರಿಬ್ಬರೂ ಐದನೇ ತರಗತಿಯಿಂದಲೇ ಒಟ್ಟಿಗೆ ಬೆಳೆದವರು, ಆಟ ಪಾಠ ಎಲ್ಲ ನಡೆಯುತ್ತಿತ್ತು. ಕುಪ್ಪಯ್ಯ ಓದಿನಲ್ಲಿ ಬಹಳ ಜೋರು, ತಿಪ್ಪಯ್ಯನೂ ಒಳ್ಳೆಯ ಅಂಕಗಳನ್ನೇ ತೆಗೆಯುತ್ತಿದ್ದನಾದರೂ ಕುಪ್ಪಯ್ಯನಷ್ಟು ಜೋರಿರಲಿಲ್ಲ. ಕಾಲೇಜಿನಲ್ಲಿ ಲೆಕ್ಚರರು ಪಾಠ ಮಾಡುವಾಗ ಕುಪ್ಪಯ್ಯ ನಿದ್ದೆ ಹೊಡೆದರೂ ಏನೂ ಹೇಳುತ್ತಿರಲಿಲ್ಲ. ಯಾಕೆಂದರೆ ವರ್ಷದ ಕೊನೆಯಲ್ಲಿ ಕಾಲೇಜಿನ ಮಯರ್ಾದೆ ಉಳಿಸುವವನು ಅವನೇ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ತಿಪ್ಪಯ್ಯ ಪ್ರಶ್ನೆ ಹಾಕಿದರೆ ಮಾತ್ರ ಅದಕ್ಕೆ ತೂಕವೇ ಬೇರೆ ಇರುತ್ತಿತ್ತು. ಒಟ್ಟಿನಲ್ಲಿ ಇಬ್ಬರದೂ ಒಂಥರಾ ಮಜದ ಜೀವನವೇ ಆಗಿತ್ತು ಕಾಲೇಜಿನ ಸಮಯದಲ್ಲಿ. ಅವನ ವಿಷಯ ಇವನಿಗೆ ಇವನ ವಿಷಯ ಅವನಿಗೆ ಬಿಟ್ಟರೆ ಮತ್ಯಾರಿಗೂ ತಿಳಿದಿರಲಿಲ್ಲ ಮತ್ತು ತಿಳಿಯುತ್ತಿರಲಿಲ್ಲ. ಕುಪ್ಪಯ್ಯ ಮೊದಲನೇ ವರ್ಷದಿಂದಲೂ ತನ್ನದೇ ಕ್ಲಾಸಿನ ಹುಡುಗಿಯೊಬ್ಬಳ ಹಿಂದೆ ಬಿದ್ದು ಕೊನೆಯವರೆಗೂ ಅವಳಲ್ಲಿ ಮಾತನಾಡಲು ಆಗದೇ ಹೋದದ್ದು ತಿಪ್ಪಯ್ಯನಿಗೆ ಮಾತ್ರ ಗೊತ್ತು. ಕೊನೆಯ ಒಂದೂವರೆ ವರ್ಷ ಇರುವಾಗ ತಿಪ್ಪಯ್ಯ ಫಸ್ಟ್ ಈಯರಿಗೆ ಬಂದ ಹುಡುಗಿಯೊಬ್ಬಳ ಅಂದಕ್ಕೆ ಮರಳಾಗಿ ಅವಳನ್ನು ಮನಸಿಗೆ ಹಚ್ಚಿಕೊಂಡಿದ್ದು ಕುಪ್ಪಯ್ಯನಿಗೆ ಮಾತ್ರ ಗೊತ್ತು. ಅಂಥ ಸ್ನೇಹ ಅವರಿಬ್ಬರ ನಡುವೆ ಅವರಿಗೇ ಅರಿವಿಲ್ಲದೇ ಮೂಡಿತ್ತು. ದಿನಾ ಒಂದು ಜಗಳ, ನಿಂತಲ್ಲೇ ಸಣ್ಣ ಕಿತ್ತಾಟ, ಮತ್ತೆ ಒಂದೇ ಸೈಕಲ್ಲ ಮೇಲೆ ಇಬ್ಬರ ಪಯಣ ಮನೆಯ ಕಡೆ.
ಕಾಲೇಜು ಮುಗಿಯುವ ದಿನ ಹತ್ತಿರ ಬಂದಾಗ ಮಾತ್ರ ಪರೀಕ್ಷೆಗೆ ಓದಲೂ ಮನಸು ಬಾರದು. ಇವರಿಬ್ಬರೂ ಬೇರೆಯಾಗುವ ಯೋಚನೆ ನಿಜಕ್ಕೂ ಅವರಲ್ಲಿರಲಿಲ್ಲ. ಇದ್ದದ್ದು ಪ್ರೀತಿಯ ಹುಡುಗಿ ನಾಳೆಯಿಂದ ಕಾಣಲು ಸಿಕ್ಕಳಲ್ಲಾ ಎಂದು. ಕಾಲನೆಂಬ ತಪ್ಪಲೆಯ ಬಿಸಿ ನೀರಿನಲ್ಲಿ ಬೇಯುತ್ತಿರುವ ಬಟಾಟೆಯಂತಾದರು ಅವರಿಬ್ಬರೂ. ಆದರೆ ಕೊನೆಗೂ ಅವರು ಅವರವರ ಹುಡುಗಿಯರನ್ನು ದೂರದಿಂದಲೇ ಕಂಡು ಕಣ್ತುಂಬಿಕೊಂಡು ಹೋದರು ಕೊನೆಯ ದಿನವೂ.. ಮತ್ತದೇ ವಿರಹದ ಸಂಜೆಗಳು ಅವರನ್ನು ಕಾಡಿದವು. ಕಾಲಕ್ರಮೇಣ ಅವರವರ ಕೆಲಸದಿಂದ, ಅವರಿಬ್ಬರ ಬೇರೆ ಬೇರೆ ಹರಟೆಯಿಂದ ಹಳೆಯ ಹುಡುಗಿಯರ ನೆನಪುಗಳು ಮಾಸುತ್ತ ಬಂದವು.. ಅಂತೂ ಕೊನೆಗೆ ಜೀವನಕ್ಕೆ ಎಂದು ಕುಪ್ಪಯ್ಯನಿಗೊಂದು ಕೆಲಸ ಎಂಬುದಾಯ್ತು. ಅವನೀಗ ಊರು ಬಿಟ್ಟು ಗುಳೇ ಹೊರಡಬೇಕಾಯ್ತು. ಮುಸ್ಸಂಜೆಯ ರೈಲು ಹಳಿಯ ದಿನಚರಿ ಕೊನೆಯಾಯ್ತು. ಎಷ್ಟೋ ಆಡಿದ ಮಾತುಗಳು ರೈಲು ಹಳಿಯ ಮೇಲೇ ಉಳಿದುಹೋಯ್ತು. ಎಷ್ಟೋ ಆಡಬೇಕಾಗಿದ್ದ ಮಾತುಗಳು ಎಲ್ಲೆಲ್ಲೋ ಕೊಚ್ಚಿಹೋಯ್ತು ಆ ವರುಷದ ಮಳೆಗೆ. ಅವರಿಬ್ಬರೂ ಈಗ ಮೊಬೈಲಿನಲ್ಲಿ ಮಾತ್ರ ಮಾತಾಡಿಕೊಳ್ಳುತ್ತಾರೆ, ಮೆಸೇಜು ಮಾಡುತ್ತಾರೆ. ಅದು ಬಿಟ್ಟರೆ ಎದುರೆದುರು ಸಿಗುವುದು ವರ್ಷಕ್ಕೆರಡು ಸಲ ಮಾತ್ರ.
ಈಗ ತಿಪ್ಪಯ್ಯನಿಗೂ ಕೆಲಸವಾಯಿತು. ಒಂದು ವರುಷ ಕಾದ ಮೇಲೆ ಒಂದು ಕಡೆ ತಿಂಗಳ ಇಷ್ಟು ಎಂದು ಮಾಡಿದ ಕೆಲಸಕ್ಕೆ ಬೆಲೆಯ ಕಟ್ಟುವ ಯಜಮಾನ ಸಿಕ್ಕಿದ ಅವನಿಗೂ! ಈಗ ಕುಪ್ಪಯ್ಯ ಮತ್ತು ತಿಪ್ಪಯ್ಯ ತಿಂಗಳಿಗೊಂದು ಸಲ ಸಿಗುವಂತಾಗಿ ಮತ್ತೆ ಹಳೆಯ ನೆನಪುಗಳೆಲ್ಲವನ್ನೂ ಮೆಲುಕು ಹಾಕುವಂತಾಯ್ತು. ಆದರೆ ಇದು ಬಹಳ ದಿನ ನಡೆಯಲೇ ಇಲ್ಲ. ಯಾಕೆಂದರೆ ಕಾರಣವೂ ಅವರಿಗೆ ತಿಳಿದಿಲ್ಲ. ದಿನವೂ ಇಪ್ಪತ್ತೈದು ಮೆಸೇಜು ಮಾಡುತ್ತಿದ್ದವರು ದಿನಕ್ಕೆ ಒಂದೊಂದೇ ಮೆಸೇಜು ಕಡಿಮೆ ಮಾಡುತ್ತ ಬಂದರು. ಹಾಗೇ ದಿನ ಕಳೆಯುತ್ತ ಕಳೆಯುತ್ತ ಮೆಸೇಜು ಮಾಡುವುದೇ ಬಂದಾಗಿಹೋಯಿತು. ಎಲ್ಲೋ ಒಂದು ದಿನ ಬಸ್ ಸ್ಟೇಂಡಿನಲ್ಲಿ ಅಕಸ್ಮಾತ್ತಾಗಿ ಸಿಕ್ಕಿದಾಗ ಹೋ ಎಂದು ಸುಮ್ಮನೇ ನಕ್ಕು ಹಾಗೆಯೇ ಸಾಗಿಬಿಟ್ಟರು ಅವರಷ್ಟಕ್ಕೆ ಅವರು.
ಅದಾದ ಮೇಲೆ ಅದೆಲ್ಲಿ ಅವರವರ ಕೆಲಸದಲ್ಲಿ ಮಗ್ನರಾಗಿಬಿಟ್ಟರೋ ತಿಳಿಯದು. ಈಗ ತಿಪ್ಪಯ್ಯನ ನೆನಪು ಕುಪ್ಪಯ್ಯನಲ್ಲೂ ಕುಪ್ಪಯ್ಯನ ನೆನಪು ತಿಪ್ಪಯ್ಯನಲ್ಲೂ ಇರಬಹುದು. ಹಾಗೆಯೇ ಅವರ ಮೊಬೈಲು ನಂಬರುಗಳು ಕೂಡಾ ಇರಬಹುದು. ಆದರೆ ಸಂಪರ್ಕ ಮಾತ್ರ ಇಲ್ಲ. ಅವರ ಗೆಳೆತನ ಹಾಗಿತ್ತು ಎಂದು ಹೇಳಲೂ ಕೂಡಾ ಇಂದು ಸಾಧ್ಯವಿಲ್ಲ. ಅವನ ಪಾಡಿಗವ, ಇವನ ಪಾಡಿಗಿವ. ನೆನಪಾದರೆ ಅವನು ಯಾಕೆ ಬೇಕು? ಅವನಿಲ್ಲದೇ, ಅವನ ಜೊತೆ ಮಾತಿಲ್ಲದೇ ಬದುಕಿಲ್ಲವೇ ಇಷ್ಟು ದಿನ! ಎಂದು ಪ್ರಶ್ನೆ ಕೇಳಿಕೊಂಡು ಸುಮ್ಮನಾಗಿಬಿಡುತ್ತಾರೆ.
ವಿಷಯ:  ಕಾಲಕ್ಕೆ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ.
ಸಂದರ್ಭ : ಸ್ನೇಹಿತರ ದಿನಾಚರಣೆ.(ಅಗಸ್ಟ್ 2, 2009)
ಉಪಸಂಹಾರ : ನಾನೂ ಕಾಲನಾದನೇನು? ಯಾರಿದ್ದರೇನು ಬಿಟ್ಟರೇನು! ನನ್ನ ಪಾಡಿಗೆ ನಾನು ಗುರುತಿಲ್ಲದ ಊರಿನಲ್ಲಿ ಬದುಕನೇನು ಕಾಡಿನಲ್ಲಿ ಬದುಕುವ ಅಪರಿಚಿತ ಹುಲಿಯ ಹಾಗೆ! ಮನುಷ್ಯ ಸಂಘ ಜೀವಿ ಎಂಬುದು ತಿಳಿದವರ ಮಾತು. ಅವರು ನನ್ನನ್ನೂ ತಿಳಿದು ಹೇಳಿದರೇನು! ಅದು ನನಗೆ ಹೇಗೆ ಅನ್ವಯ ಎಂಬುದು ನನಗೆ ತಿಳಿಯದೇ ಹೋಗಿ ಬೇರೆಯವರಿಗೆ ತಿಳಿಯುವುದೇನು!? ಉಪಸಂಹಾರದಲ್ಲಿಯೂ ಎಷ್ಟೊಂದು ಪ್ರಶ್ನೆಗಳು! ಮೇಲಿನ ಕತೆಗೂ ನನಗೂ ನಂಟು ಇದೆಯೆಂದರೆ ಇದೆ. ಇಲ್ಲ ಎಂದರೆ ಇಲ್ಲ. ಇದೆ ಎಂದರೆ ನಾನು ತಿಪ್ಪಯ್ಯ.
ತನ್ನ ಪಾಡಿಗೆ ತಾನು ನಡೆಯುತ್ತಲೇ ಇರುವ ಕಾಲವನ್ನು 'ಯಾಕೆ?' ಎಂದು ನಿಲ್ಲಿಸಿ ಪ್ರಶ್ನೆ ಮಾಡಲು ಯತ್ನಿಸುತ್ತಾರೆ. ಅದಕ್ಕೇನು ಮಿತ್ರರೇ! ಅದರ ಜೊತೆ ನಡೆಯುತ್ತಿದ್ದೇವೆ ನಾವು, ಅದಕ್ಕೇ ನಾವು ಮಿತ್ರರು ಎಂದುಕೊಳ್ಳುವ ನಮ್ಮನು ಕಂಡರೆ ನಗು ಬರುತ್ತದೆ. ಒಂದು ಸಂಘ, ಅದರಲ್ಲಿ ನಾಲ್ಕಾರು ಜನಗಳು, ಆದರೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ, ಒಬ್ಬರ ಮಾತನ್ನು ಇನ್ನೊಬ್ಬ ಕೇಳದ ಮೇಲೆ, ಆ ಸಂಘ ಭಂಗವಾಗಿ ಅಲ್ಲಿ ಯುದ್ಧ ನಡೆಯುವುದಕ್ಕಿಂತ ಅಲ್ಲಿ ಸಂಘವೇ ಇಲ್ಲದಿದ್ದರೆ ಅಷ್ಟು ಜನ ಆರಾಮವಾಗಿ ಇರಬಹುದಲ್ಲವೇ?
ಕೊನೆಯ ಉಪಸಂಹಾರ : ನಾನು ಕಾಲನಲ್ಲ, ನಾನು ಸಂಘಜೀವಿ, ನಾನು ಬದುಕುತ್ತಿರುವುದು ಮನುಷ್ಯರ ಜೊತೆಗೆ. ಅವರಲ್ಲಿ ಕೆಲವರು ನನಗೆ ಸ್ನೇಹಿತರು, ಕೆಲವರು ಶತ್ರುಗಳು, ಮತ್ತು ಕೆಲವರು ನನಗೆ ಯಾರೂ ಅಲ್ಲದವರು ಮತ್ತು ಕೇವಲ ಪರಿಚಯದವರು ಹಾಗೂ ಉಳಿದವರು ಯಾರ್ಯಾರೋ ಜನರು. ಜನರೆಲ್ಲರೂ. ನನಗೆ ಯುದ್ಧ ಮಾಡಲು ಇಷ್ಟವಿಲ್ಲ. ಹಾಗಾಗಿ ನಾನು ನನ್ನ ಪರಿಚಯದವರೊಡನೆ ಎಷ್ಟು ಮಾತನಾಡುತ್ತೇನೋ ನನ್ನ ಶತ್ರುಗಳ ಹತ್ತಿರ ಅದಕ್ಕಿಂತಲೂ ಕಡಿಮೆಯೇ ಮಾತನಾಡಿತ್ತೇನೆ. ಆದರೆ ನನ್ನ ಗೆಳೆಯರ ಜೊತೆ ನಾನು ಜಾಸ್ತಿ ಮಾತನಾಡುತ್ತೇನೆ ಮತ್ತು ಜಗಳವಾಡುತ್ತೇನೆ, ಯಾಕೆಂದರೆ ಅವರು ನನ್ನ ಮೇಲೆ ಭಯಂಕರ ಯುದ್ಧ ಹೂಡುವುದಿಲ್ಲ ಎಂದು ನನಗೆ ಗೊತ್ತು. ನಾ ತಪ್ಪು ಮಾಡಿದರೆ ತಿದ್ದುವುದಿಲ್ಲ ನನ್ನ ಶತ್ರು. ನನ್ನ ತಪ್ಪನ್ನು ನಾನು ಒಪ್ಪಿಕೊಂಡರೆ ಮಾತ್ರ ನಾನು ಸರಿಯೇನು? ನನ್ನ ತಪ್ಪನು ಒಪ್ಪಿಕೊಳ್ಳದೇ ಹೋಗಿ ಈಗ, ಮುಂದೆ ಆ ತಪ್ಪನು ಮಾಡದಿದ್ದರೆ ಅದು ಏನು? ನಾನು ಶತ್ರುವಲ್ಲ ನನಗೆ, ಹಾಗೆಯೇ ಮಿತ್ರರಿಗೆ. ನನಗೆ ಗೆಳೆಯರಿದ್ದಾರೆ ಎಂದುಕೊಂಡ ಕ್ಷಣ ನಾನು ಬೇಸರವಿಲ್ಲದೇ ಬದುಕಿರುತ್ತೇನೆ. ನನಗೆ ಯಾರೂ ಇಲ್ಲ ಎನ್ನಿಸಿದ ಕ್ಷಣ ನಾನು ಬರೆಯುತ್ತೇನೆ. ಬರೆದು ಮುಗಿದ ಮೇಲೆ ನನಗೆ ಏನೆನ್ನಿಸುತ್ತದೆಯೋ ಅದು ಇಲ್ಲಿ ನನಗೆ ಸಿಕ್ಕುವುದಿಲ್ಲ ಅನ್ನಿಸುತ್ತದೆ, ಹಾಗಾಗಿ ಮತ್ತೆ ನಾನು ಒಂಟಿಯಾಗುತ್ತೇನೆ. ಆ ಅನಿಸಿಕೆಯೆ ಜಾಸ್ತಿಯಾಗಿ ಬಾನು ಬರಡು ಬಾವಿಯಂತೇ ತೋರುತ್ತದೆ.
ಒಂಟಿಯಾಗಿ ಕುಳಿತಾಗ ಮತ್ತೆ ಮನಸು ಕೇಳುತ್ತದೆ ನೀನು ನಿಜಕ್ಕೂ ಒಂಟಿಯಾ? ಉತ್ತರಕ್ಕೆ ಬದಲಾಗಿ ಮುಗಿಲು ಮಳೆಯ ಸುರಿಸುತ್ತದೆ. ದಿನವಲ್ಲಿಗೆ ಮುಗಿಯುತ್ತದೆ.

                                      *ಇಲ್ಲಿಗೀ ಕಥೆ ಮುಗಿಯಿತು *

3 comments:

  1. Yaavaaginda kate barule shuru hachkanjyo??/ Super aagiddu..

    ReplyDelete
  2. wow its supper...... Hinge continue madu....

    ReplyDelete