Sunday, July 25, 2010

ನಾ...ನೀ...


ಬಾ ಇಲ್ಲಿ ಒಂದು ಕ್ಷಣ 
ನೋಡಲ್ಲಿ ಕಿಟಕಿಯಾಚೆ
ನಿನ್ನ ನೋಡಿ ನಗುತಿಹ ಚಂದ್ರ...
ನೀ ಕೇಳು ಕನಸಿನ ಹಾಡು
ಒಂದು ಸಾಲು ಗುನುಗುತ ಹಾಗೇ
ಮರೆತೇಬಿಡುವ ಪ್ರೀತಿಯ ಲೋಕ...


ನೀ ಹುಡುಕು ನನ್ನನೊಮ್ಮೆ,,
ಸಿಕ್ಕೇಬಿಡುವೆ ನಾನು
ನೀ ಕೇಳು ನನ್ನೊಲುಮೆ
ಕೊಟ್ಟೇಬಿಡುವೆ ನಾನು
ಮರೆತುಬಿಡು ಅಂದು ನಾನು
ಮರೆತುಬಿಡು ಅಂದ ಮಾತು
ಮರೆವಿನಲಿ ಕಾಣುವುದೇನು 
ಮುಂದಿನ ದಾರಿ?


ನೀ ಹಾಡು ನಿನ್ನೆ ನಾನು
ಕನಸಿನಲಿ ಕಂಡ ಹಾಡು
ನೆನಪಿರಲಿ ಕೊನೆಯ ಸಾಲು
ಮರೆಯದಿರು ಮೊದಲ ಹಾಡು
ಮರದ ಮರೆಗೆ ಬಂದು ನೋಡು
ಚಿಗುರ ತುದಿಗೆ ಯಾರದೋ ನಗು!
ಗಾಳಿಯಲ್ಲಿ ತೇಲಿ ಬಂದು 
ನಿನ್ನ ತುಟಿಯ ಸೇರಿತೇನು?

ನೋಡಲೇನು ಹೀಗೆ ಕೂತು
ಹಗಲೂ ಇರುಳೂ ನಿನ್ನ ನಾನು?
ಬರಲಿ ಒಂದು ಪ್ರೀತಿಯ ತೀರ
ನಗಲಿ ಮೋಡ ತುಂಬಿದ ಬಾನು
ನೆನೆವ ನಾನು ನೀನು ಸೇರಿ 
ನಡೆದು ಬಂದ ದಾರಿಯನ್ನು.
ಬೇಕೆ ನಮಗೆ ಹಳೆಯ ಚಂದ್ರ?
ನಗುವ ಸರದಿ ನಂದು ನಿಂದು! 

No comments:

Post a Comment