ಇದೇ ಆರಾಮು |
ಎರಡು ನಿಮಿಷವೂ ಕಳೆಯಲಿಲ್ಲ ಕಣ್ಣು ಮುಚ್ಚಿ ಕುಳಿತು, ಮೊಬೈಲು ಕುಂಯ್ಯೆಂದಿತು.. ಕಣ್ಬಿಟ್ಟು ನೋಡಿದರೆ ಮಗಳು; ಹೊರಗಿನಿಂದ ಒಳಗೆ ಕಾಲ್ ಮಾಡಿದ್ದಾಳಿರಬಹುದು, ಓ, ಇಲ್ಲ, ಜಯನಗರಕ್ಕೆ ಹೋಗಿದ್ದಾಳೆ. ಏನಾಗಿರಬಹುದು? ಫೋನೆತ್ತಿದರೆ, 'ಅಪ್ಪಾ, ಇವನನ್ನು ಕರಕೊಂಡು ಬರಲೇ? ಅದೇ, ನಿನ್ನೆ ರಾತ್ರೆ ಹೇಳಿದ್ದೆನಲ್ಲ' ಮಗಳ ದನಿ. ಹಾಳಾಗಿ ಹೋಯಿತು ಧ್ಯಾನ. ಮಗಳು ತನ್ನಿನಿಯನನ್ನು ಮನೆಗೆ ಕರೆತರಲೇ ಎಂದಾಗ ಸುಗಮವಾಗಿ ಹೇಗೆ ಸಾಗಬಹುದು ಧ್ಯಾನ!?
ಹಾಗಾಗಿ ಈ ಜಂಜಡವೇ ಬೇಡ ಎಂದು ಕಾಡಿಗೆ ಹೋದ. ಅಲ್ಲಿಗೆ ಹೋದರೆ ಎಲ್ಲೋ ದೂರದಲ್ಲಿ ಮರ ಕಡಿಯುವ ಸದ್ದು. ಹಿಂಬದಿಯ ಪೊದೆಯಿಂದ ಕೇಳಿಬರುವ ಪ್ರೇಮಿಗಳಿಬ್ಬರ ಕಿಸಿಕಿಸಿ ನಗು. ಓ....ಅಲ್ಲಿಯಂತೂ ಕಂಡರೂ ಕಾಣದಂತೇ ಕೇಳಿಯೂ ಕೇಳದಂತೇ ಹೋಗುವ ಪರಿಸ್ಥಿತಿ. ಇವುಗಳ ಮಧ್ಯೆ ಧ್ಯಾನ ಮಾಡಿ ಗೆದ್ದೆ ನಾನು ಎಂದುಕೊಂಡು ವಾಪಸು ಮನೆಗೆ ಓಡೋಡಿ ಬಂದು ಏಸಿ ರೂಮಿನಲ್ಲಿ ಕುಳಿತರೆ ಮಗಳ ಕಾಟ. ಇನ್ನು ಹೆಂಡತಿಯೂ ಕರೆಯುವಳು, ಅಳಿಯ ಬರುವನಂತೆ ಸ್ವಲ್ಪ ತುಪ್ಪ ಮತ್ತು ರವೆ ತನ್ನಿ ಶಿರಾ ಮಾಡುವ ಎಂದು. ಅರಿಷಡ್ವರ್ಗವನ್ನು ಮೀರಿ, ಭವಸಾಗರವನ್ನು ದಾಟಿ ಇನ್ನಾದರೂ ಮುಕ್ತಿಯ ಮಾರ್ಗವನ್ನು ಹಿಡಿಯೋಣ ಎಂದರೆ ಅದಕ್ಕೂ ಅಡ್ಡಿಯೇ. ಸ್ವಾಮೀಜಿಯ ಮಾತುಗಳು ಇರಲಿ ಅವರೊಂದಿಗೇ ಖಾಯಂ. ಉಪ್ಪು ಖಾರ ಉಣ್ಣಿಸಿ ಬೆಳೆಸಿಕೊಂಡು ಕಾಪಾಡಿಕೊಂಡು ಬಂದ ದೇಹವಿದು. ಇಂದು ಏಕ್ದಮ್ ಉಪ್ಪೂ ಹಾಕದ ಗಂಜಿಯೂಟ ಮಾಡು ಎಂದರೆ ಸಹಿಸುವುದೇ ನಾಲಗೆ? 'ಸಾಯ್ಲಿ ಧ್ಯಾನ' ಎಂದು ಮತ್ತೆ ಏಸಿ ಹಾಕಿ, ಹೊದ್ದು ಮಲಗಿಬಿಟ್ಟ.
No comments:
Post a Comment