ಯಾರೋ ಸಣ್ಣಿದ್ದಾಗ!
ಯಾಣದ ಮನೆಯಲ್ಲಿ ಮೂಲೆಯ ಕೋಣೆಯಲ್ಲಿ ಒಂದು ದೊಣ್ಣೆ. ಇದು ಯಾಕೋ ಅಜ್ಜಾ.. ಎಂದರೆ ನಿನ್ನಂಥವರು ಬಂದರೆ ಎತ್ತಿ ಬಾರಿಸಲಿಕ್ಕೆ.... ಎಂದು ಬೊಜ್ಜು ಬಾಯಲ್ಲಿ ದೊಡ್ಡ ನಗು. ಮತ್ತೆ ಅಮ್ಮ ಯಾಕೆ ನನ್ನ ಇಲ್ಲಿ ಕರಕೊಂಡು ಬಂದದ್ದು! ಮನಸಲ್ಲಿ ಬಗೆಹರಿಯದ ಗೊಂದಲ. ಮನೆಯಲ್ಲಿ ತಾನು ಕೊಟ್ಟದ್ದು ಸಾಲದು, ಇಲ್ಲಿ ಬಂದೂ ತಿನ್ನಲಿ ನಾಕು ಎಂದಿರಬಹುದು, ಸಣ್ಣ ತಲೆಬಿಸಿ. ಎದ್ದು ಓಡಿ ಹೋಗಿಬಿಡಲೇ? ಪ್ರಶ್ನೆ. ಮಕ್ಕಳ ಕಳ್ಳರು ಹಿಡಕೊಂಡು ಹೋದರೆ? ಭಯ. ತೋಟಕ್ಕೆ ಹೋಗಿ ಕೂತುಬಿಡಲೇ? ಹಾವು ಹರಣೆ ಹರಿದರೆ! ಅಡಗಿ ಕೂತುಬಿಡಲೇ? ಹಸಿವಾದರೆ! ಸತ್ತುಬಿಡಲೇ? ಬಾವಿ ಹಾರಲೇ? ಬಾವಿ ಬಳಿ ಹೋಗಲು ಬಿಟ್ಟೀತೇ ಅಮ್ಮನ ಕೆಂಪು ಕಣ್ಣು? ಮರ ಹತ್ತಿ ಬೀಳಲೇ? ತೆರಕಿನ ಮೇಲೆ ಕಾಲಿಟ್ಟು ಶಬ್ದವಾದರೆ ಬರುವುದು ಅಜ್ಜಿಯ ನಾದಸ್ವರ, ಯಾರಾ.. ಅದು....? ಕೆರೆಯಲ್ಲಿ ಬಳಿದು ಹೋಗಲೇ? ಅವತ್ತು ಎಲ್ಲೋ ಹಾಗೇ ಆಯಿತಂತಲ್ಲ, ಮುಖ ತೊಳೆಯಲು ಹೋದ ಅಷ್ಟು ದೊಡ್ಡವನೇ ಬಳಕೊಂಡು ಹೋದನಂತೆ, ನಾನು ಹೋಗೆನೇ? ಬರುವುದು ಹೊರಗೆ ಮೂಲೆ ಕೋಣೆಯ ದೊಣ್ಣೆ.
ಇಷ್ಟೆಲ್ಲ ಯೋಚನೆ ಮಾಡಿ ಮಲಗಿದಲ್ಲೇ ನಿದ್ರೆ ಬಂದುಹೋಗಿ, ಕನಸಿನಲ್ಲಿ ನಾಯಕ ಮಾಸ್ತರರು, ಏ ಭಟ್ಟ ಇವತ್ತು ನನಗೆ ಹೇಳದೇ ಶಾಲೆಗೆ ರಜೆ ಹಾಕ್ದೆಯಲ್ಲ? ತಡೆ ನಿಂಗೆ ಮಾಡ್ತೇನೆ, ಎಂದು ದರದರನೆ ಕಾಲು ಹಿಡಿದು ಮಲಗಿದ ಕೋಣೆಯಿಂದ ಹೊರಗೆ ಎಳೆದುಕೊಂಡು ಬಂದು `ಯೇಳಾ' ಎಂದು ಬಾರ್ಕೋಲಿನಲ್ಲಿ ಒಂದು ರಪ್ಪನೆ ಬಾರಿಸಿ ಎಬ್ಬಿಸಿ ಕೂರಿಸಿದರೂ ತುಟಿಗಚ್ಚಿ ಅಳುವನ್ನು ತಡೆದುಕೊಂಡು ಹಿಂದೆ-ಮುಂದೆ, ಅಕ್ಕ-ಪಕ್ಕ ನೋಡದೇ ಮಾಸ್ತರರನ್ನೇ ದುರುಗುಟ್ಟಿ ನೋಡಲು, ಮಾಸ್ತರರಿಗೇ ಇನ್ನೊಂದು ಬಾರಿಸಲು ಕೈಬರದೇ ದಪದಪನೆ ತಮ್ಮಷ್ಟಕ್ಕೆ ನಡೆದು ಹೋದದ್ದನ್ನು ಕಂಡು, ಕಟ್ಟಿಕೊಂಡಿದ್ದರೂ ಅಳಲು ಮನಸೇ ಬಾರದೇ ದೊಡ್ಡಕೆ ಹಾ..ಹ್ಹಾ ಹ್ಹಾ ಎಂದು ನಗಲು........
ಸಾಯಂಕಾಲ ಸಂಧ್ಯಾವಂದನೆಯ ಸಮಯದಲ್ಲಿ ಅಪ್ಪ ಭಸ್ಮ ಮಂತ್ರಿಸಿ ಕೊಟ್ಟ.
ಚ೦ದದ ಬರಹ..ಇನ್ನಷ್ಟು ಬರಲಿ.
ReplyDeleteA big hug...
ಎಂತಕೋ ಗೊತ್ತಿಲ್ಯ ವಿನಾಯಕಣ್ಣ.. ಮತ್ಮತ್ತೆ ನಿನ್ನ ಬ್ಲಾಗಿಗೆ ಬಂದು ಬರ್ದಿದ್ದೆಲ್ಲಾ ಓದನ ಹೇಳನುಸ್ತು :-)
ReplyDelete