Thursday, June 21, 2012

ಕಿವಿಗೊಂದು ಕಾಲನ ಹೂ......!


ಏನನ್ನಾದರೂ ಬರೆಯಬೇಕೆಂದು ಬಹಳ ಯೋಚಿಸಿದೆ. ಊರು, ಕೇರಿ, ಕೂಟ, ಕ್ರಿಕೆಟ್ಟು, ಮನೆ, ಮನೆಯ ಹಿಂದಣ ಹಳ್ಳ, ಮುಂದಿನ ರಸ್ತೆ, ರಸ್ತೆಯಾಚೆಗಿನ ಹಲಸಿನ 
ಮರ, ಅದರ ಮೇಲೆ ಹಾದು ಹೋದ ಕರೆಂಟು ಲೈನು, ಲೈನಿಗೆ ತಾಗಬಾರದೆಂದು ಪ್ರತಿ ಮಳೆಗಾಲದಲ್ಲಿಯೂ ಗಳಕ್ಕೆ ಕತ್ತಿ ಕಟ್ಟಿಕೊಂಡು ಬರುವ ಕೆಇಬಿ ಜನ, ಕತ್ತಿಗೆ ಮಣಿಯುವ ರೆಂಬೆ, ಕೊಟ್ಟಿಗೆಯಲ್ಲಿ ಅಂಬಾ…. ಎಂದು ನಾಲ್ಕೂ ಕಾಲೆತ್ತಿ ಕುಣಿಯುವ ರಂಭೆ, ಶಾಲೆಗೆ ಹೋಗುವ ಪೋರನ ಕೆಂಪು ಜಿಲೇಬಿ ಚೆಡ್ಡಿಯ ಕಂಡು ಹೂಂಕರಿಸಿ ಬಂದ ಗೂಳಿ, ಪಕ್ಕದ ಮನೆಯಿಂದ ನಮ್ಮನೆಯ ನೆಲಗಟ್ಟಿನ ತನಕ ಸುರಂಗ ತೋಡಿದ ಶ್ರೀಮಾರ್ತಾಂಡ ಹೆಗ್ಗಣರಾಯರು, ಬೆಳಬೆಳಿಗ್ಗೆ ಬಂದು ತೋಟದ ಗಡಿಯ ಹಲಸಿನ ಕಾಯಿ ಕೊಯ್ದು ಕದ್ದು ಹೋದ ಬೊಬ್ಬರ್ಯ ಪಿಶಾಚಿ, ಅವನ ಮಗಳ ಮದುವೆ, ಲಗಾಟಿ ಹೊಡೆದರೂ ಅರ್ಥವಾಗದ ಹೊಟ್ಟು ಬೀಜಗಣಿತ, ಶಾಲೆಗೆ ಹೋಗದೇ ಇಡಿಯ ದಿವಸ ಅಡಗಿ ಕುಳಿತ ಮೋರಿ, ಸರಸರನೆ ಸುಳಿದು ಬಂದ ಹಾವು, ಅಪ್ಪಯ್ಯಾ…… ಎಂದು ಹೆದರೆದ್ದು ಓಡಿದ ನಡುಮಧ್ಯಾನ್ನ, ಇಷ್ಟು ಬೇಗನೇ ಮುಗಿಯಿತೇ ಶಾಲೆ? ಎಂದು ದೊಡ್ಡಪ್ಪನ ಗಾಳಿಕೋಲಿನ ಪೆಟ್ಟು, ಬಂಡಿ ಹಬ್ಬದಲ್ಲಿ ಯಾರೋ ತೆಗೆಸಿಕೊಟ್ಟ ಪೆಪ್ಪರಮಿಂಟು, ಹುಲಿದೇವರ ಹಬ್ಬದಲ್ಲಿ ಕೊಂಡ ಸಣ್ಣಗೌಡನ ಕೆಂಪು ಕನ್ನಡಕ, ನಿಧಾನ ನಿಧಾನ ಮೈಗೆ ಹತ್ತಿದ ವಯಸ್ಸು, ಒಂದೊಂದೇ ಒಂದೊಂದೇ ವರ್ಷದ ಲೆಕ್ಕದಲ್ಲಿ ಕಡಿಮೆಯಾಗುತ್ತಿರುವ ಆಯಸ್ಸು, ಆಹಾ.. ಎನಿಸಿದ ಕಾಲೇಜು, ಓಹೋ… ಎನಿಸಿದ ಪ್ರೀತಿ, ಅಯ್ಯಯ್ಯೋ ಅನಿಸಿದ ವಿಯೋಗ, ಜೀವನದ ಒಂದೊಂದೇ ಕದ ತೆರೆಸಿದ ವಾಸ್ತವ, ಪುಡಿಗಾಸು ಕಿಸೆ ತುರುಕಿದ ಕೆಲಸ, ಬೇಕೆನಿಸಿದ್ದು ಕೊಂಡ ಸಂತಸ, ಸ್ವಂತದ ಗಾಡಿ, ಬೇಕಷ್ಟು ಪೆಟ್ರೋಲು, ಸಾಕಷ್ಟು ತಿರುಗಾಟ, ಬೇಕೇ ಎಂಬ ಲೋಕ, ಸಾಕಪ್ಪಾ ಎಂಬ ಕಾಲ, ಎಷ್ಟಪ್ಪಾ ಎಂಬ ನಗು, ಅಯ್ಯಪ್ಪಾ ಎಂಬಷ್ಟು ಊಟ, ಕಣ್ಣು ತೆರೆಯುವಲ್ಲಿಯೇ ಬರುವ ಬೆಳಗು, ಕಣ್ ಹೊರಳುವಲ್ಲಿ ಇರುಳು, ಒಂದಷ್ಟು ತಾರು, ಸ್ವಲ್ಪವೇ ಬೀರು, ಗಡದ್ದು ರೋಟಿ – ಸಬ್ಜಿ, ಮಸ್ತು ನಿದ್ರೆ, ಮತ್ತೆ ಬೆಳಗು, ಅದೇ ಬೇಂಕು, ಚಂದಮಾಮನ ತೋರಿಸಿ ಮೊಸರು ತುತ್ತನುಣ್ಣಿಸುವ ಅಮ್ಮನಂತೇ ಸಂಬಳವ ನೆನಪು ಮಾಡಿಸಿ ತನ್ನತ್ತ ಕರೆಯುವ ಕೆಲಸ, ಮತ್ತೆ ಹೋಗು ಹೋಗು ಹೋಗು, ಕೆಲಸ ಮಾಡು, ನೀನು ಸತ್ತೆ; ಪ್ರೊಮೋಶನ್ನು......ಮೆನೇಜರು, ಹಿಡಿ ಕಂಪನಿಯನ್ನು, ಅದು ಬೇಡ, ಆ ಕಂಪನಿ ಲಾಸು, ಅದು ಗೊಡ್ಡು, ಓ… ಅಲ್ಲಿ ನೋಡು ಬಕ್ರ! ಕೊಡಿಸು ಅವನಿಗೊಂದು ಇನ್ಸೂರನ್ಸು, ಹಿಡಿ ಅವನನ್ನು, ಹಾಕು ಎಣ್ಣೆ, ಮಾಡಿಸು ಸ್ನಾನ, ಬಿಸಿ ನೀರಿಲ್ಲವಾ? ತಗೋ ತಣ್ಣೀರು, ಬರಗಾಲ ದೇಶದ ಪ್ರಜೆಗೆ ಚರಂಡಿ ನೀರೇ ಪಾನಕ! ಬಿಡು ಬಿಡು ಅವನಲ್ಲಿ ದುಡ್ಡಿಲ್ಲ. ಹೋ.. ಇದು ದೊಡ್ಡ ಕುಳ, ಹಾಕು ಒಂದು ಬೆಣ್ಣೆ ಬಿಸ್ಕೀಟು. ಇಲ್ಲ ಇಲ್ಲ, ಅವನ ಬಿಸಿಗೆ ಬೆಣ್ಣೆ ಡಾಲ್ಢಾ ಆಯ್ತು. ಬಾ ರೂಮಿಗೆ, ಬೆಳಿಗ್ಗೆ ಮರೆತ ಸ್ನಾನವನ್ನು ಈಗ ಮುಗಿಸು, ತಿಂಡಿ ತಿನ್ನು, ಮಲಗು, ಬೆಳಿಗ್ಗೆ ಎದ್ದು ಊಟ ಮಾಡು, ಅಯ್ಯೋ… ಬೆಳಗಾಯಿತೇ ಮತ್ತೆ? ಕೂರು ತಲೆಯ ಮೇಲೆ ಕೈ ಹೊತ್ತುಕೊಂಡು........ ಸಮುದ್ರ  ದಂಡೆಯ  ಮೇಲೆ ಭಿಕಾರಿ ಬಿದ್ದಿದೆ ಕಾಲ !
ಇದನ್ನೆಲ್ಲ ಯೋಚಿಸುವಲ್ಲಿಗೆ ಬರೆಯುವುದೂ ಬೇಡ ಏನೂ ಬೇಡ. ತಥ್ ಎಂದು ಪೆನ್ನು ಬಿಸಾಡಿ ಕೂತೆ. ಮನಸು ನಿರ್ಲಿಪ್ತ. ತಲೆ ಖಾಲಿ ಖಾಲಿ………..ಎಂದಿನಂತೇ….

Monday, June 11, 2012

ಗದಬಾದೇಶ ಸಂಧಿ:


ಪ್ರೀತಿಯ ನಿನಗೆ,
ಅದೇ ಮರ, ಹೊಸ ಧೂಳು, ಆ ಧೂಳು ಹಾರಿಸುವ ಗಾಳಿಯ ಪ್ರಯತ್ನ. ಯಾವುದನ್ನೂ ಬೇಕಂತಲೇ ಯಾವುದೂ ಮಾಡುವುದಿಲ್ಲ. ಗಾಡಿ ಹೋಯಿತು, ರಸ್ತೆಯಲ್ಲಿದ್ದ ಧೂಳು ಹಾರಿತು, ಎಲೆಯ ಮೇಲೆ ಕೂತಿತು. ಮಳೆ ಬಂತು, ನೀರಾಗಿ ರಸ್ತೆಗೆ ಬಂತು. ಬಿಸಿಲಾಗಿ ಮತ್ತೆ ಮಣ್ಣು ಧೂಳಾಗಿ ಅದೇ ಎಲೆಯ ಮೇಲೆ! ಯಾರ ಬದುಕಲ್ಲೂ ಹೊಸ ತಿರುವು ಬರುವುದಿಲ್ಲ. ಅವೇ ರಸ್ತೆ, ಅವೇ ತಿರುವುಗಳು. ಮಧ್ಯೆ ಮಧ್ಯೆ ಧೂಳು ತಿಂದು ಹೋಗುವ ನಾವುಗಳು ಮಾತ್ರವೇ ಹೊಸಬರು.
ಗೆಳತೀ,      
ಶಬ್ದವೆನಿಸುತ್ತಿದೆ ಈ ಪದ ನನಗಿಂದು! ಇರಲಿ, ಆದರೂ ಹೇಳುತ್ತೇನೆ;           
ಗೆಳತೀ,
ನೀನು ಮದುವೆಯಾಗೋಣ ಆಗೋಣ ಎಂದೆ.  ನಾನು ಬೇಡ ಬೇಡ ಎಂದೆ. ನಿನ್ನ ಮದುವೆ ನಿಕ್ಕಿಯಾಯ್ತು. ನಾನು ಅತ್ತೆ!
ಧೂಳನು ಎಬ್ಬಿಸಿ ಓಡಿದೆ ನಾಯಿ, ಮುದುಕಿಯ ಕಾಲಿಗೆ ಇಲ್ಲ ಹವಾಯಿ!!
ನೀನು ಬೆಳುದಿಂಗಳಲ್ಲಿ ನಡೆಯುತ್ತೀಯೋ ಉರಿ ಬಿಸಿಲಲ್ಲಿ ನಡೆಯುವೆಯೋ ನನಗೆ ತಿಳಿಯದು. ನಾನಂತೂ ಮಳೆ ಮುಗಿದ ಬಿಸಿಲಲ್ಲಿ ಮೋರಿಯ ಮೇಲೆ ಕೂತು ಬೆಟ್ಟದ ನೀರನ್ನು ನೋಡುತ್ತಿರುತ್ತೇನೆ. ಅದರಲ್ಲಿ ನಿನ್ನ ಮುಖ ಹುಡುಕುವುದಿಲ್ಲ. ಯಾವ ಮರದ ಬುಡದಲ್ಲಿ ಕಜ್ಜಿ ನಾಯಿ ಮಿಂದೆದ್ದು ಹೋದ ನೀರೋ ಅದು!
ಜೋರು ಮಳೆಯಿದ್ದರೂ, ಬಿರು ಬಿಸಿಲಿದ್ದರೂ, ಕಟ್ಟ ಚಳಿಯಿದ್ದರೂ………… ಏನೂ ಅನಿಸುವುದಿಲ್ಲ.
ಊಹುಂ!! ಏನೂ ಅನಿಸುವುದಿಲ್ಲ.
I lost a lot in confusion! ಸಮುದ್ರದ ಕರಿಮಣ್ಣ ದಂಡೆಯ ಮೇಲೆ ಮಂಡಿಯೂರಿ ಕುಳಿತು ಹ್ಹೋ………. ಎಂದು ಮುಳುಗುವ ಸೂರ್ಯನಿಗೆ ಮುಖಮಾಡಿ ಕೂಗಿಬಿಡುವ ಅನಿಸುತ್ತಿದೆ. ಅಲೆ ಬಂದು ಅಪ್ಪಳಿಸಿದ ಹೊಡೆತಕ್ಕೆ ಕಣ್ಣಲ್ಲಿ ಮರಳು ತುಂಬಿ, ಕಿವಿಯಲ್ಲಿ ನೀರು ತುಂಬಿ, ಉಪ್ಪುಪ್ಪು ತುಟಿಯ ಚಪ್ಪರಿಸುತ್ತ ಮೂಕನಾಗುವ ಅನಿಸುತ್ತಿದೆ.
ಇಲ್ಲ, ಹಾಗನ್ನಿಸುವುದಿಲ್ಲ!
ಆಕಾಶದ ಸೂರ್ಯ ಅಘನಾಶಿನಿಯಲ್ಲಿ ಮೀಯುವುದನ್ನು ನೋಡಿದ್ದಕ್ಕೆ ರಪ್ಪನೆ ಕೆನ್ನೆಗೆ ಬಾರಿಸಿದಂತಾಯ್ತು ಬೆಳಕು. ಬತ್ತಿ ಹೋಗಿದ್ದ ಜಲಪಾತದ ಬುಡಕ್ಕೆ ಉಚ್ಚೆ ಹೊಯ್ಯುತ್ತಿದ್ದವನ ನೆತ್ತಿಯ ಮೇಲೆ ಬಿಮ್ಮನೆ ಒದ್ದಂತಾಯ್ತು ಹೊಸಮಳೆಯ ನೀರು ಬಿದ್ದು!
ಯೂನಿವರ್ಸಿಟಿ ರೋಡಿನಲ್ಲಿ ಹೊಸ ಹೆಣ್ಮಕ್ಕಳ ಮಾರಾಟ - ಹಳೇ ಗಂಡಸರ ಪರದಾಟ, ಮೂರು ಮುಕ್ಕಾಲು ಕೇಜಿ ಗೋಧಿಗೆ ಮೂರುವರೆ ತಾಸು ಸರತಿಯಲ್ಲಿ ನಿಂತ ಮುದುಕಿಯ ಗೋಳಾಟ. ಎಲ್ಲದಕ್ಕೂ ನಾನೇ ಸಾಕ್ಷಿಯಾಗಬೇಕೇ!? ಕಲ್ಕುಟಿಕ, ಪೆಂಜುರ್ಲಿಯ ರಂಪಾಟದ ಪೂಜೆಗೆ ನಾನೇ ವೈದಿಕನಾಗಬೇಕೇ?
ಹ್ಞಂ!!
ನೀಲಿ ಕಣ್ಣಿನ ಕನಸು ಕರಗಿ ಹೋಯಿತು ನೋಡು, ಹಳದಿ ನೋಟವೆ ಈಗ ಖಾಯಮ್ಮು!
ಹೇಳಿದರೆ ಕೇಳುವುದಿಲ್ಲ, ಕೇಳಿದರೆ ಹೇಳುವುದಿಲ್ಲ, ನಗುವಿಗೂ ಇಲ್ಲ ಕೊಂಚ ಟಾಯಮ್ಮು!!
ಎಲ್ಲ ಸರಿಯಿರುವಾಗಲೂ ಒಂದೊಂದೇ ತಪ್ಪು ಕುದುರುವುದೇ ಜೀವನ!
ನಾನು ಪ್ರಾಸ-ನೀನು ಭಾಸ. ನಾನು ಕಣ್ಣು-ನೀನು ಕನಸು. ನಾನು ಮರ-ನೀನು ಗಾಳಿ. ನಾನು ಬೆಟ್ಟ-ನೀನು ಮೋಡ. ನಾನು ಕಂಬ-ನೀನು......................... ಬೇಡ ಬಿಡು.
ಕೈಯಲ್ಲಿ ಹಿಡಿದುಕೊಳ್ಳಲು ಬೇಸರವಾಗಿ ಆ ಬ್ರಹ್ಮ ಹಾರಿಬಿಟ್ಟ ನೈಟ್ರೊಜನ್ ಪುಗ್ಗಿಯಂತಿದೆ...............ಬದುಕು!
ಏನೂ ಅನ್ನಿಸುವುದಿಲ್ಲ ಆದರೂ..
                                                                
                                                                   ಇಂತಿ
                                                                   ನಾನು