Sunday, August 29, 2010

ಒಂದು, ಇನ್ನೊಂದು, ಮತ್ತೊಂದು

ಒಂದು ಕಥೆಯ ಹೇಳ್ತೇನೆ:
ಅದು ಒಂದು ಹುಡುಗಿಯ ಫೋಟೊ, ಒಬ್ಬ ಹುಡುಗನ ಕೈಲಿತ್ತು.
ಅದನ್ನು ಕಂಡ ಇನ್ನೊಬ್ಬ ಹುಡುಗನಿಗೆ ಅದರ ಮೇಲೆ ಆಸೆಯಾಯ್ತು. 

ಒಂದು ನಿಮಿಷ, ಇನ್ನೊಂದು ಘಟನೆ ನೆನಪಾಯ್ತು;
ಅದೊಂದು ತರಗತಿ. ಎಂಟನೇ ಕ್ಲಾಸು ಹುಡುಗರಿಗೆ ಮುಂದಿನ ಪೀರಿಯಡ್ಡು ಕಂಪ್ಯೂಟರು. ಎರಡನೇ ಡೆಸ್ಕಿನ ಇಬ್ಬರು ಮಾತಾಡಿಕೊಂಡರು, ಇವತ್ತು ನಾವು ಮಿಸ್ಸಿಗೆ ಕಾಣದ ಹಾಗೇ ಗೇಮ್ಸ್ ಆಡೋಣ ಎಂದು. ಹೌದಾ? ನಾನೂ ಬರ್ತೇನೆ, ಎಂದ ಮೂರನೇ ಡೆಸ್ಕಿನ ಹಟಮಾರಿ. ಅವನು ಹಾಗೆಯೇ ಅಲ್ಲಿಗೆ ಹೋಗಿ ಕುಳಿತ. ಯಾವತ್ತೂ ಕೂರುವ ಮೊದಲನೇ ಡೆಸ್ಕಿನವನಿಗೆ ಅಲ್ಲಿ ಜಾಗವೇ ಇರಲಿಲ್ಲ. ಅವನಿಗೆ ಸಿಟ್ಟು ಬಂತು. ಕಂಡಕಂಡವರಲ್ಲೆಲ್ಲ ಹೇಳಿದ, ಅವ ನೋಡು, ಮೂರನೇ ಡೆಸ್ಕಿನವ, ಕಂಡಕಂಡಲ್ಲೆಲ್ಲ ಕೂರ್ತಾನೆ, ಬಿಡುವುದಿಲ್ಲ ಅವನನ್ನು, ಹೆಡ್ಮಾಸ್ತರರಿಗೆ ಹೇಳ್ತೇನೆ, ಎಂದೆಲ್ಲ ಹಲುಬುತ್ತ ಹಲುಬುತ್ತ ಕ್ಲಾಸೇ ಮುಗಿದುಹೋಯ್ತು. ಹಲುಬಿದವ ಹಲುಬುತ್ತಲೇ ಉಳಿದ. ಮೂರನೇ ಡೆಸ್ಕಿನವ ತನ್ನಷ್ಟಕ್ಕೆ ಆಡಿಕೊಂಡು ಎದ್ದು ಬಂದ.

ಬಿಟ್ಟ ಕಥೆ:
ಆ ಫೋಟೊವ ನನಗೆ ಕೊಡು ಎಂದು ಒಬ್ಬನ ಬಳಿ ಇನ್ನೊಬ್ಬ ಗೋಗರೆದ. `ಅದೆಂಥ ಕಿರಿಕಿರಿ ಮಾರಾಯ ನಿಂದು? ನಂಗೆ ಸಿಕ್ಕ ಹುಡುಗಿಯ ಫೋಟೊ ಹೆಂಡತಿ ಇದ್ದ ಹಾಗೇ. ನಿಂಗೆ ಹೇಗೆ ಕೊಡುವುದು?' ಎಂದು ಒಬ್ಬ ವಾದ ಮಾಡಿದ. ಛೇ, ನನಗೆ ಸಿಗದೇ ಹೋಯ್ತಲ್ಲಾ ಎಂದು  ಬೇಸರವಾಗಿ, ಸಿಟ್ಟುಗೊಂಡು ಎಲ್ಲರ ಬಳಿಯೂ ಹೇಳುತ್ತ ಬಂದ, `ಅವನ ಬಳಿ ಚಂದದ ಹುಡುಗಿಯ ಫೋಟೊ ಉಂಟು'. 'ಹೌದಾ? ನೋಡುವ ತೋರಿಸು' ಎಂದು ಮತ್ತೊಬ್ಬ ದುಂಬಾಲು ಬಿದ್ದ. ಇದೆಂಥ ಅವಸ್ಥೆ ಮಾರಾಯ ನಿಮ್ಮದು? ಒಂದು ಫೋಟೊಕ್ಕಾಗಿ ಹೀಗೆ ಕಚ್ಚಾಡುವುದು, ಎಂದು ಮೇಲಿನ ಕಿಸೆಯಲ್ಲಿದ್ದ ಫೋಟೊವನ್ನು ಪೇಂಟಿನ ಕಿಸೆಯಲ್ಲಿಟ್ಟುಕೊಂಡು ತನ್ನ ಪಾಡಿಗೆ ಹೋಗೇ ಹೋದ. ಈ ವಿಷಯ ಮಗದೊಬ್ಬನ ಕಿವಿಗೂ ಬಿತ್ತು ಒಂದು ದಿನ. ಅವ ಒಬ್ಬನ ಬಳಿಯಿರುವ ಆ ಫೋಟೊವ ಕಂಡು ಎದ್ದಾಡಿ ಬಿದ್ದಾಡಿ ನಗಲಾರಂಭಿಸಿದ, 'ಅಲ್ಲವೋ ಮಾರಾಯ, ಎರಡು ವರ್ಷ ಹಳೇ ಫೊಟೊ ಇಟ್ಟುಕೊಂಡು ತಿರುಗಾಡ್ತೀಯಲ್ಲ, ಅದೂ ಪಾಸ್ಪೋರ್ಟ ಸೈಜಿಂದು ಪೇಂಟಿನ ಕಿಸೆಯಲ್ಲಿಟ್ಕೊಂಡು. ನನ್ನಪ್ಪನ ಸೊಸೆಯಾಗಿರುವ ಅವಳ ಹೊಸ ರೂಪವನ್ನೇ ತೋರಿಸ್ತೇನೆ ನಿಂಗೆ, ನಡೆ ನಮ್ಮನೆಗೆ.'
ಒಬ್ಬ ಆ ಫೋಟೊವ ತೆಗೆದು ಮೋರಿಗೆ ಎಸೆದ.

ಕೊನೆಯಲ್ಲಿ ಹೊಳೆದದ್ದು::
ನಮ್ಮೂರಿನಲ್ಲೊಬ್ಬ ಶ್ರೀಪತಿ. ನನ್ನೆದುರಿಗೆ ನಿಂತು 'ನಮ್ಮೂರಿನಲ್ಲಿ ಯಾವನಾ ಅವ ನಾಟಕ ಬರೆಯುವುದು? ಎಂದು ಮುಸಿ ಮುಸಿ ನಕ್ಕ............... ನಕ್ಕ.................... ನಕ್ಕ................... ಹೆ ಹ್ಹೆ ಹ್ಹೇ....... ನಗುತ್ತಲೇ ಉಳಿದ!

1 comment: