ನಾನೇನು ಹೇಳಲು
ಹೊರಟಿದ್ದೇನೆ?! ನನಗಿಲ್ಲ ಖಾತ್ರಿ.
ರಸ್ತೆಯ ಧೂಳು,
ಮುಖದ ಬೆವರು. ಬಿಸಿಲ ಧಗೆ.
ಕೊಡಪಾನ ನೀರಿಗೆ
ಸಲ್ಲದ ಕಾಟ.
‘ನಾನು ನಡೆಯಲಾರೆ’
ಎಂದಳು ರಮೆ.
‘ನಾನು ಬದುಕಲಾರೆ’
ಎಂದನು ರಾಮ.
ಬದುಕಲು ನೀರು
ಬೇಕು. ನೀರಿಗೆ ಮಾರುದೂರ ನಡೆಯಬೇಕು.
‘ನಿಮಗೆ ನಾನು
ಬೇಕೋ, ನೀರು ಬೇಕೋ?’
ರಮಿಸಲು ತಾ
ರಮೆ...... ನಕ್ಕನು ರಾಮ.
‘ನಾ ನೀರ ತರುವೆ..’
ಹೊರಟಳು ರಮೆ.
‘ನಾನೂ ಬರುವೆ..’
ಎದ್ದು ನಿಂತನು ರಾಮ.
‘ನೀರ ತರುವನಕ
ಕಾದರಾಗದೇ?’
‘ಜೊತೆಗೆ ಬರುವೆ,
ನೀರೆರೆದರಾಗದೇ?’
ತರ್ಕ – ಕುತರ್ಕ,
ಪ್ರೀತಿ – ವಿರಸ, ಕಾಮ – ಸರಸ.
‘ಅವಕಾಶ ಕೈತಪ್ಪಿ
ಹೋದರೆ!!’ ನೀರಿಗೆ ಹೊರಟಳು ರಮೆ.
‘ರಮೆ ಕೈತಪ್ಪಿ
ಹೋದರೆ!!’ ಹಿಂದೆಯೆ ಹೊರಟನು ರಾಮ.
ರಾಮ ರಾಮ!
ಒಂದರ ಹಿಂದೊಂದು.
ಒಬ್ಬರ ಹಿಂದೊಬ್ಬ.
ದೂರದಿಂದ ಕಂಡವ,
ಮೂರು ಹೊತ್ತು ಕೂತು ಉಂಡವ.
ಸರಿಯಿಲ್ಲ.
ಹಣತೆಯಲಿ ಎಣ್ಣೆ
ಆರಲಿಲ್ಲ.
ದೀಪ ಉರಿಯಲಿಲ್ಲ,
ಕದಿರು ಬೆಳೆಯಲಿಲ್ಲ.
ಧೂಪ ಹಚ್ಚಲು
ಕಡ್ಡಿಯಿಲ್ಲ.
ಒದ್ದೆ ಒದ್ದೆ.
ಮುಸ್ಸಂಜೆಯಲಿ
ಮಳೆ ಬಂತಲ್ಲ!
ರಾತ್ರಿ ಕನಸಿನಲಿ
ಯಾರೋ ಬಾಗಿಲು ತಟ್ಟಿದರು...
ದೀಪವಾರಿಸದೇ
ಮಲಗಿ ರೂಢಿ.
‘ಮನೆಯಲ್ಲಿ
ಯಾರೂ ಇಲ್ಲ’ ಎಂದು ಕೂಗಿ ಹೇಳಿದೆ.
ಸುಮ್ಮನೇ ಹೋದರು.
ನನಗೋ ಕುತೂಹಲ;
ಅವರು ನನಗಿಂತ ದಡ್ಡರೇ?!
ಬಾಗಿಲು ತೆಗೆದು
ನೋಡಲೇ?
ಕೂಗಿ ಹೇಳುವಾಗ
ಇಲ್ಲದ ಚಿಂತೆ ಈಗ;
ದಡ್ಡ ದೋಸ್ತರ
ಸೊಡ್ಡು ನೋಡಿಬಿಡುವ.... ಎಂದು.
ಸೂರ್ಯನಲಿ
ಕಡ್ಡಿ ಇಟ್ಟವರ್ಯಾರೋ!
ಒಂದು ಕನಸು
ಪೂರ್ತಿಯಾಗುವುದರಲ್ಲೇ ಗೀರಿದ.
ಒಂದು ಹಾಡಿನಲ್ಲಿ
ಮುಗಿಯುವುದಿಲ್ಲ ರಾತ್ರಿ.
ಕೀಲಿ ತಿರುಪಿದರೂ
ಓಡುವುದಿಲ್ಲ
ಕುಮಟೆ ಜಾತ್ರೆಯ
ರೈಲುಗಾಡಿ.
ಎಲ್ಲಿದ್ದೀ?
ಇಲ್ಲೇ!
ಸೂಪರ್ರೋ..
ReplyDelete