Sunday, April 26, 2020

ಬ್ರಹ್ಮಚರ್ಯವೇ......


                         

“ಐತಾಳರೇ, ನಿಮಗೊಬ್ಬ ಮಗ ಇದ್ದಾನಲ್ಲ, ನೀಲಕಂಠ, ಅವ ಬೆಂಗಳೂರೇ ಅಲ್ವೇ?”

ಹೂ, ಅವಂದು ಈಗ ದೊಡ್ಡ ಹುದ್ದೆ. ಅವನ ಮಾತಾಡ್ಸುದೇ ಕಷ್ಟ ಈಗ"

ನೋಡ್ಲಿಕ್ಕೆ ಸ್ವಲ್ಪ ಉಪರಾ ತಪರಾ ಆದ್ರೂ ಮಾಣಿ ಗನಾದು

ಛೇ, ಎಂತದು ನೀವು ಹಾಗೆ ಹೇಳೂದು? ಮಾಣಿಯ ಗುಣವೂ ಗನಾದು, ಮಾಣಿಯೂ ಗನಾದು.  ನಿಮಗೆಂತಕ್ಕೆ ಈಗ ಅದರ ನೆನಪಾದದ್ದು??”

ಒಂದೊಂದ್ ಸಲ ಏನಾಗ್ತದೆ ಅಂದ್ರೆ, ಈ ದನಕ್ಕೆ  ಒಳ್ಳೆ ಹೋರಿ ಸಿಗದೇ ಇದ್ರೂ ಈ ಟ್ಯೂಬ್ ಉಂಟಲ್ಲ, ಅದ್ನೇ ಬಳಸ್ಬೇಕು

ಒಂದೇ ಸಲಕ್ಕೆ ಮನೆಯಿಂದ ಕೊಟ್ಗೆಗೆ ನಡೆದಿರಿ??”

ಒಂದೊಂದ್ ಸಲ ಸನ್ನಿವೇಶಕ್ಕೆ ಮಾತು ಹೊಂದಾಣಿಕೆ ಆಗ್ಬೇಕಲ್ಲ ಮಾರಾಯ್ರೆ!!”

ನಿಮ್ಮ ಈ ಒಗಟು ಮಾತ್ರ ನಂಗೆ ಜಗಟೇ ಯಾವತ್ತೂ"

ಹ ಹ ಹ, ನಂಗೆ ಒಂದು ಆಲೋಚನೆ ಬಂತು ಐತಾಳರೇ, ನಾವು ಅಕ್ಕ ಪಕ್ಕದ ಮನೆಯವರು, ಸ್ನೇಹಿತರು. ದಿನಕ್ಕೆ ನಾಕು ಮಾತಾಡಿ ಮೂರನ್ನ  ಬಿಡ್ತೇವೆ. ನಿಮಗೆ ಗೊತ್ತಲ್ಲ, ನನ್ನ ಅಣ್ಣನ ಮಗಳು. ದೊಡ್ಡವಳು. ಒಬ್ಬಳೇ ಕೂತು ಭಾಳ ಬೇಜಾರ್ ಮಾಡ್ಕೊಳ್ತಾಳೆ ತನ್ನ ಜೀವನ ಹೀಗಾಗೋಯ್ತು ಅಂತ. ಹೇಗಿದ್ರು ನಿಮ್ಮ ಮಗನಿಗೂ ೩೮ ಆಯ್ತಲ್ಲ. ಅದ್ಕೆ ಯೋಚ್ನೆ ಮಾಡ್ತೇ ಇದ್ದೆ."

“ನೀವಿದ್ದೀರಲ್ಲ, ಭಯಂಕರ ಕನ್ನಿಂಗ್ ನೀವು. ಆದರೂ ನಮ್ಮ ಕೊಟ್ಗೆ ಹೋರಿಗೆ ಮನೇಲೆ ಆಕಳು ಸಿಗುದಾದ್ರೆ ಒಂದ್ ಹುಲ್ ಕಟ್ ಹಾಕ್ಲಿಕ್ಕೆ ನಮಗೆ ತೊಂದ್ರೆ ಇಲ್ಲ.”

ನಾನು ಮುಂದಿನ ವಾರ ಬೆಂಗ್ಳೂರಿಗೆ ಹೋಗ್ತೇನೆ, ನಿಮ್ಮ ಮಗನ ಅತಪತ ಕೊಡಿ, ಒಂದ್ ಸರ್ಪ್ರೈಸ್ ವಿಸಿಟ್ ಕೊಟ್ ಬರುವ ಅಂತ ಉಂಟು"

ನೀವು ಹೇಳ್ದಾಂಗೆ"

                                                     ********************************
“ಫಕೀರಪ್ಪ, ಸಾಕಾಗೊಯ್ತು ಮಾರಾಯ, ಇನ್ನು ನನ್ನತ್ರ   ಆಗೂದಿಲ್ಲ. ಕೊಳ್ಳಿ ಇಡುಕೂ ಯಾರೂ ಇರುದಿಲ್ವ ಹೇಳಿ”

“ನೀವು ಹೀಗೆ ಸೂರ್ಯ ಮುಳುಗುದೇ ಕಾಯ್ಕಂಡ್ ದೀಪಕ್ಕೆ ಎಣ್ಣೆ ಹಾಕ್ತೀರೋ ಬಿಡ್ತೀರೋ, 38 ಆಯ್ತು ಹೆಂಗಿದ್ರೂ. ಕೊಳ್ಳಿ ಎಂತಕ್ಕೆ? ತನ್ನಿಂತಾನೇ ಉರೀತದೆ ಬಿಡಿ”.

“ಆ್ಯ.... ನಿಂಗ್ಹೆಂಗ್ ಗುತ್ತಾಗ್ಬೇಕು ನನ್ನ ಕಷ್ಟ? 40 ವರ್ಷಕ್ಕೇ ನಾಕ್ ಮದ್ವೆ ಆದವ, ಗೊಬ್ಬರಗುಂಡಿ ನೀನು. 20 ವರ್ಷಕ್ಕೆ ಶುರು ಮಾಡಿದ್ರೂ, 5 ವರ್ಷಕ್ಕೊಂದು ಸಂಸಾರ ನಿಂಗೆ. ನನ್ನ ಬಾಡಿ ವಣಗ್ಲಿಕ್ಕೆ ಬಂತು.”

“ನಿಮ್ ಅವತಾರ ನೋಡಿ ಯಾರ್ ಬರ್ತಾರೆ? ನೀವು ಹೊರಗಡೆ ಹೋದ್ರೆ ಚಂದ ಮಾತಾಡ್ತಾರೆ ನಿಮ್ ಡ್ರೆಸ್ ನೋಡಿ. ರೋಮಿಗೆ ಬಂದ್ರೆ ಹೆಂಡ್ತೀನೂ ನಿಲ್ಲುದಿಲ್ಲ.”

“ಸುಮ್ನಿರ ಗೊತ್ತುಂಟು. ಸಾಯುದ್ರೊಳ್ಗೆ ಒಂದ್ ಮದ್ವೆ ಆಗ್ತೇನ, ನೋಡ್ತಿರು.”

“ನಿಮ್ಮ ಉದ್ದೇಶ ಅದೊಂದೇ ಅಲ್ವ?”

“ ನಿನಗೆ ಆ ಮಗ ಈ ಮಗ ಅಂತ ಬಯ್ಯುದ್ರೊಳಗೆ ಒಳಗೆ ಹೋಗಿ ಮಲಗು ಮಗನೆ”

“ನೀವು ಬೈದ್ರೆ ಬೈಸ್ಕೊಂಡು ಹೋಗ್ತೇನೆ ಅಂತವಾ?”

ಘೋರ ಯುದ್ಧ ನಡೆದು ಕತ್ತಲೆಯಾಯಿತು.

ಬೆಳಗಾಗುವುದರಲ್ಲಿ ರೂಮೆಲ್ಲ ಅಲ್ಲೋಲ ಕಲ್ಲೋಲ. ಫಕೇರಪ್ಪ ಒಂದು ಮೂಲೆಯಲ್ಲಿ ಅರೆವಸ್ತ್ರಾವತಾರದಲ್ಲಿ ಬಿದ್ದಿದ್ದರೆ ಐತಾಳನ ಅವತಾರ ಅದಕ್ಕಿಂತಲೂ ಕಮ್ಮಿಯೇ. ಹಾಸಗೆಯ ಪಕ್ಕದಲ್ಲೊಂದು ಬ್ಲೆಂಡರ್ಸ್ ಪ್ರೈಡ್ ಬಾಟಲಿ, ಪಕ್ಕದಲ್ಲೊಂದು ಪ್ಲಾಸ್ಟಿಕ್ ಗ್ಲಾಸು. ಒಂದಷ್ಟು ಅರ್ಧ ಚಲ್ಲಿದ ಖಾರಾ ಬೂಂದಿ, ಶೇಂಗಾ ಪೆಕೆಟ್ಟು. ನೆಲಕ್ಕೆ ಚೆಲ್ಲಿದ ಪಪ್ಪಾಯ ಹೋಳುಗಳು, ನೆಪಮಾತ್ರಕ್ಕೆ ಅಲ್ಲಿಯೇ ಕುಳಿತಿದ್ದ ಬಿಳಿಯ ಮೈಮೇಲೆ ಹೂವಿನ ಚಿತ್ತಾರದ ಪ್ಲೇಟುಗಳು. ಕಾಲ ಬಳಿ ಬಿದ್ದರುವ ಬಿಳಿಯ ಬನಿಯನ್ನು, ಫ್ಯಾನಿಗೆ ನೇತಾಡುತ್ತಿರುವ ಖಾಸಾ ವಸ್ತ್ರ; ಯುದ್ಧದ ಭೀಕರತೆಯನ್ನು ಸಾರುತ್ತಿದ್ದವು.

ಇವೆಲ್ಲವುಗಳ ಮಧ್ಯ ಮತ್ತಿನ ನೆತ್ತಿಗೆ ಸುತ್ತಿಗೆಯಿಂದ ಬಡಿದಂತೇ ಕಾಲಿಂಗ್ ಬೆಲ್. ಹತ್ತು ಸಲ ನೆತ್ತಿಯ ಮೇಲೆ ಕುಟ್ಟಿದ ಮೇಲೆ ಹೋದ ಜೀವ ಬಾಯಿಗೆ ಬಂದಂತಾಗಿ ಎದ್ದುನಿಂತ ಐತಾಳನಿಗೆ ಅಂತರಿಕ್ಷದಲ್ಲಿ ಬಾಯಾರಿಕೆಗೆ ನೀರು ಸಿಕ್ಕದ ಪರಿಸ್ಥಿತಿ. ನಿಲ್ಲದ ಕಾಲಿಂಗ್ ಬೆಲ್ಲಿನ ಬಡಿದಾಟ. “ಚೊಣ್ಣ ಏರಿಸ್ಕಳೋ ಐತಾಳಾ....” ಎಂದು ಮಗ್ಗುಲು ಮರಿದ ಫಕೀರಪ್ಪ. ಸರ್ರನೆ ಪಕ್ಕದ ಟುವಾಲು ಸುತ್ತಿ ಬಾಗಿಲು ತೆಗೆದ ಐತಾಳನಿಗೆ ಎದುರಿಗೆ ಕಂಡದ್ದು, ಪಕ್ಕದ ಮನೆಯ ಸುಬ್ರಾಯ ಮಾವನೊಂದಿಗೆ ಹುಬ್ಬೇರಿಸಿ ನಿಂತಿದ್ದ ಅಪ್ಪಯ್ಯ. ಯುದ್ಧಾರ್ಧದಲಿ ಮಾಯವಾಗಿದ್ದ ಗ್ರಹಚಾರದ ಕರೆಂಟೂ ಸಟ್ಟನೆ ಬಂದೆರಗಿ, ಫ್ಯಾನು ತಿರುಗಿ, ಖಾಸಾ ವಸ್ತ್ರ ಸುಬ್ರಾಯ ಮಾವನ ಮುಖಕ್ಕೆರಗಿ...........

ಐತಾಳ ಮುವತ್ತೆಂಟನೆಯ ವರ್ಷವನ್ನೂ ಬ್ರಹ್ಮಚರ್ಯದಲ್ಲೇ ಸವೆಸಿದ.......

No comments:

Post a Comment