Monday, October 13, 2014

ತಣ್ಣನೆ ಚಂದ್ರೋದಯ!

ಕೆಂಪು ಬಿಳಿ ಚೌಕಟ್ಟಿನ ಸೀರೆಯುಟ್ಟು ಇಳಿ ಮಧ್ಯಾಹ್ನದಲಿ ಬಾಗಿಲಲಿ ನಿಂತಿದ್ದವಳ ಕಣ್ಣಿನಲಿ ಹನಿ ನೀರೊಡೆಯುವ ಸಮಯದಲಿ, ಹರಿದ ಚಪ್ಪಲಿ ಮಾಸಿದ ಆಕಾಶನೀಲಿ ಅಂಗಿ, ಧೂಳು ಧೂಳು ಪ್ಯಾಂಟಿನ ಮಹಾಫಕೀರ ಎದುರು ಬಂದು ನಿಂತೆನಲ್ಲ! ಮೈಮುರಿದು ಸೂರ್ಯನ ತಿಳಿಬಿಸಿಲಿಗೆ ಅರಳಿ ನಿಂತ ಮಲ್ಲಿಗೆಯ ಎಸಳಿನ ಮೇಲೆ ರಾತ್ರಿಯಿಂದಲೇ ಕಾದು ಕುಳಿತಿದ್ದ ಮಳೆಯ ಹನಿಯೊಂದು ಮೋಡದ ಮರೆಯಿಂದ ಬಿದ್ದಂತಾಗಿರಬಹುದು. ತಪ್ಪು ನಂದೇ? ತಪ್ಪಿಲ್ಲ ನಿಂದೂ! ನಿರಂತರ ಮಳೆಯ ನಡುವೆ ಇಣುಕಿದ ಕಳ್ಳ ಬಿಸಿಲಿಗೆ ಮುಖವೊಡ್ಡಿ ನಕ್ಕಂತೇ ನನ್ನ ಸ್ವಾಗತಿಸಿದೆಯಲ್ಲ!  ನೀನುಟ್ಟ ಕೆಂಪು ಸೀರೆಯ ಬಿಳಿ ನೆರಿಗೆ ಅಲ್ಲಾಡಿತು ತುಂಟ ಗಾಳಿಗೆ ಹೆದರಿ. ನನ್ನ ಹೆಂಡತಿಯ, ನಿನ್ನ ಗಂಡನ ಮೋಹ ಕಾಮಗಳ ಪ್ರವಾಹಕ್ಕೆ ಹೆದರಿ ತಣ್ಣಗಾಗಿ ಹೋಗಿದ್ದ ಪ್ರೀತಿಯೂ ಇಂದು ಕಳ್ಳಗಾಳಿಯೊಂದಿಗೆ ಸ್ವರ ಸೇರಿಸಿ ಹಾಡು ಹಾಡಿತು. ತಣ್ಣನೆಯ ಚಂದ್ರೋದಯ!
ಮುಲಾಮು ಹಚ್ಚಿದರೂ ಬೆಂಗಳೂರಿನ ಧೂಳಿಗೆ ಒಡೆದ ಹಿಮ್ಮಡಿ ಸರಿಯಾಗಲಿಲ್ಲ. ಅದರ ನೋವು ನಿನ್ನನ್ನು ಬಾಧಿಸಿದಂತಿಲ್ಲ ನಿನ್ನ ನಗುವನ್ನು ಕಂಡರೆ. ಬಹಳ ವರುಷಗಳ ನಂತರದ ಭೇಟಿಯಲ್ಲವೇ!? ಕಷಾಯಪುಡಿ ಹಾಕಿದ ತೆಳುವಾದ ಹಾಲು. ಕರಿದ ಅವಲಕ್ಕಿಗೆ ಬೇವಿನ ಸೊಪ್ಪಿನ ಒಗ್ಗರಣೆ. ಇದೆಲ್ಲ ಹೊಟ್ಟೆಗೆ ಇಳಿಯಬೇಕಲ್ಲ; ಗಂಟಲಿಗೆ ನಿನ್ನ ಮಾತಿನ ಸಲಾಕೆ. ಗೋಡೆಯ ಮೇಲಿನ ಹಲ್ಲಿಯ ಚಿತ್ರ. ಶೋ-ಕಪಾಟಿನಲ್ಲಿರುವ ಒಂಟಿ ಉರುಟು ಗಡಿಯಾರ. ಎಲ್ಲ ಮನೆಯಲ್ಲೂ ಒಂದೇ ದೃಶ್ಯ; ಅಲ್ಲೊಂದು ಪ್ಲಾಸ್ಟಿಕ್ ಕುರ್ಚಿ, ಅದರ ಕೈಗೊಂದು ಅರ್ಧ ಒಣಗಿದ ಟುವಾಲು. ಅಡುಗೆ ಕೋಣೆಯಲ್ಲಿ ಅರ್ಧ ಸೋರುವ ನಲ್ಲಿ. ಬಾತ್ರೂಮಿನಲ್ಲಿ ನೇತಾಡುವ ಸ್ವತಂತ್ರ ವಸ್ತ್ರಗಳು. ಇದನ್ನೆಲ್ಲ ನೋಡಿ ನಕ್ಕು ಹೇಳಿ ಹೋಗಲು ಬರಲಿಲ್ಲ ನಾನು.
ಯಾಕೆ ಬಂದೆ?! ಆಡಲು ಮಾತಿಲ್ಲ. ಕೇಳಿದರೆ ಹೇಳಬಲ್ಲೆ.
ನೀನು ಹೇಳಬೇಡ. ಪ್ರೀತಿಯಿಂದ ಕರೆಯಬೇಡ ಮೊದಲಿನಂತೇ. ಮತ್ತೆ ಮೂಡುವುದು ಪ್ರೀತಿ. ಅದೇ ಭಯವೇ!? ಎಂದು ಕೇಳಬೇಡ. ಪ್ರೀತಿಯೇನು ಸೂರ್ಯನೇ ಕಂತಿ ಉದಯಿಸಲಿಕ್ಕೆ ಪದೇಪದೇ? ನಗಬೇಡ. ಮಾತಿನಲ್ಲಿ ಎಷ್ಟಂದರೂ ಮನಸಿನಲ್ಲಿ ಒಂದು ಚೂರಾದರೂ ಭಯವಿರದೇ? ಪೂರ್ವಾಶ್ರಮದಲ್ಲಿ ನಾನೂ ಪ್ರೇಮಿಯೇ. ನಾನೂ ಕನಸುಗಳನ್ನು ಸುಖಿಸುತ್ತಿದ್ದೆ. ಹಗಲುಗನಸಿನ ಸಿಂಹಾಸನ; ಅದೆಂಥ ಸ್ವರ್ಗ! ಅಂದೇ ಆಡದ ಮಾತು ಇಂದು ಬರಬಹುದೆಂಬ ಖಾತ್ರಿಯಿಲ್ಲ ನನಗೆ. ನೀನೇ ಶುರು ಮಾಡು, ಕ್ಷಣಕಾಲ ಕಿವಿದೆರೆದು ಕೂರುವೆ ನಿನ್ನ ನೋಡುತ್ತ....
ಮೂಡುಗಾಳಿಗೆ ಸೂರ್ಯನ ಬೆಳಕು ಹಾರಿತು ನೆರಳಿಗೆ. ಎಲೆಯ ಮರೆಯಲಿ ಜೇಡ ಬಲೆಯ ಬೀಸಿತು ಹುಳುವಿಗೆ. ಕಲ್ಲುಗಳ ಮೇಲೆ ಧುಮುಕುತ್ತ ಧುಮುಕುತ್ತ ನೀರು ಕೆಳಗಿಳಿಯುವಾಗ ಹತ್ತು ಹನಿ ಮುಖಕ್ಕೂ ಸೋಕಿತು. ಇದೇ ಪ್ರೀತಿ ಎನ್ನುವೆನು ನಾನು. ಮತ್ತೆ ಅದನ್ನು ನೆನೆದು ಕಣ್ಣೀರೊಡೆಯುವುದು ನಿನಗೆ. ಮಧ್ಯರಾತ್ರಿಯಲಿ ಎದ್ದು ಕುಳಿತು ನಕ್ಷತ್ರ ನೋಡುವ ಎಂದಾಗ ನನಗೆ ಘನಘೋರ ನಿದ್ರೆಯ ನಡುವೆ ಕಣ್ಣು ತೆರೆಯಲಾಗಲಿಲ್ಲ. ದಾರಿಗುಂಟ ನಾನು ಮಾತಾಡುತ್ತ ನಡೆದರೆ ‘ಇದು ಏಕಾಂತವಲ್ಲ; ಹಾಗೆಲ್ಲ ಈಗ ಮಾತನಾಡಲಾರೆ’ ಎಂದೆ! ಕಲ್ಲು ಬಂಡೆಯ ಮೇಲೆ ನಾವಿಬ್ಬರೇ. ಏಕಾಂತದಲ್ಲಿ ಒಂದು ಮುತ್ತು ಕೊಟ್ಟೇಬಿಡುವ ಎಂದುಕೊಂಡೆ. ಅಲ್ಲಿ ಮಾತು ಬೇಕೆ? ಮಾತನೆಲ್ಲಾದರೂ ಆಡಬಹುದು. ನನಗೊಂದು ಕನಸು ಬಿತ್ತು ಎಂದು ಸುಳ್ಳು ಹೇಳಲು ಬಂದರೆ ಕನಸನ್ನು ಸುಳ್ಳುಮಾಡುವ ಸಂಜೆಗೆ ಕರೆದೆಯಲ್ಲ! ನಾ ಬರೆಯಲಿ‍ಕ್ಕೆ ಬರದ ಅಕ್ಷರಗಳ ಮೇಲೆ ನಡೆಸಿದ ಪ್ರಯೋಗಂತಿತ್ತು ಇರುಳು. ನಟ್ಟಿರುಳು ನಿದಿರೆಗೆ ಸವಾಲು ಹಾಕಿತ್ತು. ತಂಪು ಗಾಳಿಯು ಮೈಗೆ ಸೋಕಿ ಮುಗಿಲಲ್ಲಿ ತೇಲಾಡಿದಂತಿತ್ತು ಆ ಕ್ಷಣ. ಇಂದು ನೆನೆದರೆ ನಗು ಬರುವುದು ನನಗೆ; ಮತ್ತೊಮ್ಮೆ ಸಿಗಬಾರದೇ ಆ ಕ್ಷಣ? ಎನ್ನಿಸುವುದು.
ನಿನಗೇಕೆ ಕಣ್ಣಲ್ಲಿ ನೀರು ಬಂತು?!
ಎದುರಾಬದರಾ ಕೂತು ಯೌವನದ ಕಥೆಯ ಹೇಳಿಕೊಂಡು ನಗಲಿಕ್ಕೆ ನಾವೇನು ಮುದುಕರೇ? ಯೌವನದ ಕ್ಷಣಗಳು ಮರುಕಳಿಸಿದರೆ ಅಪರಾಧವಾಗಬಹುದು ಆದರೆ. ನನಗಿಲ್ಲಿ ನೀನು ಕರೆದ ಆ ಕ್ಷಣಗಳ ನೆನಪಾದರೆ ಮಳೆಗಾಲದ ನಡುವಲ್ಲಿ ಜ್ವರ ಮತ್ತೆ ಮತ್ತೆ ಬಂದಂತಾಗುವುದು. ನಾನೆಲ್ಲಿದ್ದೇನೆ ಈಗ? ನೀನೆಲ್ಲಿದ್ದೀಯ ಈಗ? ಉತ್ತರ ಬೇಡದ ಪ್ರಶ್ನೆಗಳು ಹಲವು. ಮುತ್ತು ಕೊಟ್ಟಮೇಲೆ ಯಾಕೆ ಕೊಟ್ಟೆ ಎಂದರೆ ಸುಮ್ಮನೇ ನಗದೇ ಇನ್ನೇನು ಮಾಡಲಿ ನಾನು? ಸುಮ್ಮನೆ ನೆಲವ ನೋಡಿದರೆ ನಿನ್ನ ನಗು ಕಾಣುವುದಿಲ್ಲ. ಮತ್ತೆ ಕಲ್ಪಿಸಬೇಕು ಆ ನಗುವ. ಬೇಡ ಮತ್ತೆ ಹಳೆಯ ದಿನಗಳ ಮರುಕಳಿಕೆ.

ನಾನೇಕೆ ಬಂದೆ ಈಗ ನಿನ್ನ ಬಳಿ? ಇರಲಿಬಿಡು ಪ್ರಶ್ನೆ ಅದರ ಪಾಡಿಗೆ, ಮತ್ತೆ. ಊಟಕ್ಕೆ ಕರೆಯಬೇಡ ನನ್ನ, ಹತ್ತು ಹೆಜ್ಜೆ ಹಾಕಿದ ಮೇಲೆ ಸೂರ್ಯ ನೆತ್ತಿಯ ಮೇಲೆ ಕುಟುಕಿದಂತಾಗಬಹುದು. ಕನಸಿನಿಂದ ವಾಸ್ತವಕ್ಕೆ ಬಂದೆನೆಂದುಕೊಳ್ಳುವೆ. ನನ್ನ ನಿನ್ನ ಮಾತುಗಳು ತಿರುಗಿ ನಡೆಯಲಿ ಬಂದಲ್ಲಿಗೇ. ಸುಮ್ಮನೊಂದು ಮಳೆಯು ಸುರಿದು ಕೊಚ್ಚಿ ಹೋಗಲಿ ಹಳೆಯ ನೆನಪು; ಕಾಲ ಕೆಳಗೆ ನುಸುಳಿ ಮರಳ ಸೆಳೆವ ಕಡಲಿನಲೆಯಂತೇ.....

2 comments:

 1. ಸೂಪರ್ಲೇ ಅಣ್ಣಯ್ಯಾ !!! ಭಾವಪ್ರವಾಹದಲ್ಲಿ, ಶಬ್ದಪ್ರಯೋಗದಲ್ಲಿ ಕೊಚ್ಚಿಹೋದಿ ನಾನು.
  >>ಷಾಯಪುಡಿ ಹಾಕಿದ ತೆಳುವಾದ ಹಾಲು. ಕರಿದ ಅವಲಕ್ಕಿಗೆ ಬೇವಿನ ಸೊಪ್ಪಿನ ಒಗ್ಗರಣೆ. ಇದೆಲ್ಲ ಹೊಟ್ಟೆಗೆ ಇಳಿಯಬೇಕಲ್ಲ; ಗಂಟಲಿಗೆ ನಿನ್ನ ಮಾತಿನ ಸಲಾಕೆ.<<
  >>ನೀನು ಹೇಳಬೇಡ. ಪ್ರೀತಿಯಿಂದ ಕರೆಯಬೇಡ ಮೊದಲಿನಂತೇ. ಮತ್ತೆ ಮೂಡುವುದು ಪ್ರೀತಿ. ಅದೇ ಭಯವೇ!? ಎಂದು ಕೇಳಬೇಡ. ಪ್ರೀತಿಯೇನು ಸೂರ್ಯನೇ ಕಂತಿ ಉದಯಿಸಲಿಕ್ಕೆ ಪದೇಪದೇ? <<
  ಮಸ್ತಲೇ..
  ಮದ್ಯಾಹ್ನ ಆಗಕ್ಕಿತ್ತಲ್ದಾ "ಮದ್ಯಾನ್ನ" ಅಲ್ಲ ಅಂದ್ಕತ್ತಿ. ಮುದ್ರಾರಾಕ್ಷಸನ ಪ್ರಭಾವ ಅಂತ್ಕತ್ತಿ..

  ReplyDelete
  Replies
  1. ಪ್ರಶಸ್ತಿ ಸಿಕ್ದಂಗಾತು!
   ಮಧ್ಯಾಹ್ನ.... :-)

   Delete