Tuesday, November 12, 2013

ಹೆಂಡತಿ ಹಾಕಿದ ಫೋಟೋ... ಗಂಡ ವೊತ್ತಿದ ಲೈಕೂ....

ನ್ಯೂಲೀ ಮೆರೀಡ್ ಕಪಲ್. ಮಾವ ಕೊಡಿಸಿದ ಹೊಂಡಾ ಬೈಕು. ಮಡದಿಯ ಸೆರಗಿನ ಕೆಂಪು ದಾರ. ಸಣ್ಣ ಗಾಳಿಗೂ ಹಾರುವ ಉದ್ದ ಮುಂಗುರುಳು. ಒಂದು ಕೈಯಲ್ಲಿ ಅಮರಾನ್ ಬ್ಯಾಟರಿ, ಇನ್ನೊಂದು ಕೈಯಲ್ಲಿ ಕಾರ್ಬನ್ ಮೊಬೈಲು. ನೆತ್ತಿಯ ಮೇಲರ್ಧ ತಾಸು ಬೀಳಲಿ ಬಿಸಿಲು. ಕನಸಿನ ಸಾಮ್ರಾಜ್ಯ ಕಟ್ಟುವುದಿಲ್ಲ. ಅಲ್ಲಿ ಮಳೆಗಾಲ ಬೇಡ. ಹೂದೋಟದಲಿ ಅರೆಕ್ಷಣ ಬಾಯ್ದೆರೆದು ನಿಂತು ಸಂಜಾಯಿತು. ರಂಗು ರಂಗಿನ ಕನಸು ಕಂಡವ, ಬೆಳಿಗ್ಗೆ ಎದ್ದ, ಹಲ್ಲುಜ್ಜಿ ಸ್ನಾನ ಮಾಡಿ ಆಫೀಸಿಗೆ ಹೋದ. ಒಂದು ಗುಟುಕು ಎಣ್ಣೆ ಹೊಡೆದು ಭರಪೂರ ನಿದ್ದೆ ಮಾಡಿದವನೂ ಬೆಳಿಗ್ಗೆ ಎದ್ದ, ಹಲ್ಲುಜ್ಜಿ ಸ್ನಾನ ಮಾಡಿ ಕೆಲಸಕ್ಕೆ ಹೋದ. ಅದೇ ಸೂರ್ಯ, ಅದೇ ಬಿಸಿಲು. ಬಿಸಿಲಿಗೆ ಅಡ್ಡ ಬರುವ ಅದೇ ಮೋಡ.

ಓಡೋಡಿಕೊಂಡು ಹಿಡಿದ ಬಸ್ಸಿನಲಿ ನಿಂತೇ ಬಂದವನು ಮನೆಯಲ್ಲಿ ಸೋಫಾದ ಮೇಲೆ ಕುಳಿತು ಬಿಟ್ಟ ದೊಡ್ಡ ನಿಟ್ಟುಸಿರು ಸಿಗರೇಟಿನ ಹೊಗೆಯಾಗಿ ಗಗನವ ಸೇರಿತು. ನಿನ್ನೆ ರಾತ್ರಿ ಕನಸು ಕಂಡು ನಿರಾಳವಾದ ಕಣ್ಣು ಬೆಳಿಗ್ಗೆ ಕಾಣುವುದು ಕರಾಳ ಜಗತ್ತಿನ ತೀರದ ದಾಹವ ನೀಗಿಸಲು ಹವಣಿಸುವ ಬೀದಿ ನಾಟಕವ. ನಿನ್ನೆ ಕೊಟ್ಟ ಕೈಯಿಂದು ಕತ್ತು ಹಿಸುಕುವುದು. ರಕ್ತವ ಸಹಿಸಲು ಆಗದ ಕೈಯೊಂದು ಬೇರೆಯವರ ಕರಿಯ ಎದೆಯ ಬಿಳಿಯ ಶರಟಿಗೆ ಒರೆಸಿ ಸಮಾಧಾನದಿಂದ ನಗೆಯಾಡುವುದು.
ಈ ನಡುವೆ ನೀನೆಲ್ಲಿ ಕಂಡೆ ನನಗೆ? ಎಲ್ಲರೂ ಹೇಳುವಂತೇ ಹೇಳುವುದಾದರೆ, ತುಂಬ ದೂರ ನಿಂತು ನನ್ನ ನೋಡಿಯೂ ನೋಡದಂತೇ, ನಕ್ಕರೂ ನಗದಂತೇ  ಹೋದವಳು ನೀನೇ ಅಲ್ಲವೇ? ಕನಸು ಹೆಕ್ಕಿಕೊಟ್ಟ ನೂರಾರು ಆಸೆಗಳ ಅಡ್ಡಪಲ್ಲಕ್ಕಿ ಉತ್ಸವ. ಮುಸ್ಸಂಜೆಯಲಿ ನೆನಪು ಬಿತ್ತಿದ ಬೀಜ ಮೊಳಕೆಯೊಡೆಯಲು ಮಧ್ಯಾನ್ನದಲಿ ನೀರೆತ್ತಬೇಕು. ಮಳೆಗಾಲದಲೂ ಒರತೆಯಿಲ್ಲ. ನಾನೀಗ ಸೈಕಲ್ಲು ಹೊಡೆದು ಸುಸ್ತಾಗಿ ಕುಳಿತಿದ್ದೇನೆ. ನೀನೆಷ್ಟು ದೂರ ಕರೆದರೂ ಬಂದೇ ಬಿಡುವೆನೆಂಬ ಧೈರ್ಯ ನನಗಿಲ್ಲ ಈಗ. ಹಲ್ಲಿದ್ದರೂ, ಹಲ್ಲು ಸರಿಯಿದ್ದರೂ, ಕಡಲೆಯಿದ್ದರೂ ಜಗಿಯಲಾರೆ ಈಗ; ಹಲ್ಲು ಮುರಿದೀತೆಂಬ ಭಯವಷ್ಟೇ! ವಿಪರ್ಯಾಸ!!

ಸುಕೋಮಲೆ, ಕೈಕೈಯ ಹಿಡಿದು ಹೊರಟಳು ಸಮಯ ಕಳೆಯಲಿಕ್ಕೆ. ಒಂದು ಕೈಯಲ್ಲಿ ಕೆಮೆರಾ ಇನ್ನೊಂದು ಕೈಯಲ್ಲಿ ಗಂಡ. ನಮನಮೂನೆಯ ಭಂಗಿ, ನಮನಮೂನೆಯ ಚಿತ್ರ, ನಮನಮೂನೆಯ ಫೋಟೋ. ಗಾಳಿಯಲಿ ಎಲೆ ಹಾರಿದಂತೇ, ಧೂಳಿನಲಿ ಮರೆಯಾದ ಮರವ ತೋರಿಸಿ ಸೂರ್ಯಾಸ್ತದ ಸಮಯವೆಂಬಂತೇ, ಮುಳುಗಲು ಹೊರಟ ಸೂರ್ಯ ಇವಳಂದವ ಕಂಡು  ಕ್ಷಣಕಾಲ ಕಣ್ತುಂಬಿಕೊಂಡೇಬಿಡುವ ಎಂದು ಪುಟ್ಟ ಮರದ ಮುದಿ ಹಣ್ಣೆಲೆಯ ಮೇಲೆ ಕುಳಿತಂತೇ, ಪೊದೆಯ ಕತ್ತರಿಸಿ ಮಾಡಿದ ಮಂಗನಾಕೃತಿಯ ಬುಡದಲ್ಲಿ ಭರತನಾಟ್ಯದ ಭಂಗಿಯಂತೇ, ಗಂಡನ ಹುಳುಕು ಹಲ್ಲಿನ ನಡುವಿಂದ ಕಾರಂಜಿ ಚಿಮ್ಮಿದಂತೇ.... ನಮನಮೂನೆ... ಆಹಾ...

ಲಾಲ್‍ಬಾಗಿನ ಬೀದಿಯಲ್ಲಿ ಅಂಗಿ ಹರಿದುಕೊಂಡು ಕೂತೊಂದು ಮಗು ತಾಯಿಗಾಗಿ ಹಂಬಲಿಸುತ್ತಿಲ್ಲ; ದುಡ್ಡಿಗಾಗಿ ಕೈಚಾಚುತ್ತಿದೆ. ಕೆಮೆರಾ ನೋಡಿ ಮುಗುಳುನಗೆಯ ಬೀರುತ್ತಿದೆ; 'ನಂಗೊಂದು ಲೈಕು ಕೊಡಿ... ಪ್ಲೀಜ್..'. ಇಲ್ಲಿನ ಹೂವುಗಳೆಲ್ಲ ಇಬ್ಬನಿಯಲಿ ಮಿಂದು ಶುಭ್ರಗೊಂಡು ದೇವರ ಪೂಜೆಗೆ ಅಣಿಯಾದಂತಿಲ್ಲ. ಆಗತಾನೇ ತಾಪಿ ನದಿಯಲ್ಲಿ ಈಜಾಡಿ ಮೈಕೊಡವಿ ನಿಂತ ಸೂರತ್‍ ಬೀದಿಯ ಯೂನಿವರ್ಸಿಟಿ ರೋಡಿನ ಅಭಿಸಾರಿಕೆಯಂತಿದೆ. 'ನಾನು ಮಾಡಿದ ಒಳ್ಳೆಯ ಕೆಲಸ'ದಲ್ಲಿ ನಾನೂ ಬರೆದಿದ್ದೆ ಎಲ್ಲರೂ ಬರೆದಂತೇ 'ಬೆಳಗಾಮುಂಚೆ ಎದ್ದು ದೇವರಿಗೆ ಹೂ ಕೊಯ್ದೆನು' ಎಂದು. ಈಗಿನ ಮಕ್ಕಳು ಬರೆಯುವುದೇ ಇಲ್ಲ. ಬರೆಯಲು ಹೇಳುವವರೂ ಇಲ್ಲ. ಬರೆಯುವಂತೆಯೂ ಇಲ್ಲ. ದೇವರ ಪೂಜೆ 'ಮೂಢನಂಬಿಕೆ'ಯೆಂದು ಫರ್ಮಾನು ಬಂದಿದೆ!! ಗಿಡದಿಂದ ಹೂವ ಕೊಯ್ದು ಗಿಡಕ್ಕೆ ನೋವುಂಟುಮಾಡಿದರೆ ಅಪರಾಧ!! ಆಗಿನ ಕಾಲದ ಒಳ್ಳೆಯ ಕೆಲಸ ಈಗಿನ ಕಾಲದ ಅಪರಾಧ. ಆಗಿನ ಒಳ್ಳೆಯವನು ಈಗಿನ ಅಪರಾಧಿ!! ತಂಬೂರಿಯೊಂದಿಗೆ ತಾಳವಿಲ್ಲ. ಜಿಟಿ ಜಿಟಿ ಮಳೆ ಮನವ ತೋಯಿಸುವುದಿಲ್ಲ; ಅಂಗಿಯ ಕಪ್ಪು ಕಲೆಯಾಗುವುದು. ಬಿಟ್ಟೆನೆಂದರೂ ಬಿಡುವುದಿಲ್ಲ ಇದು. 'ಅಗೋ ನಿಂಗೇ ಹೇಳಿದ್ದು, ಕಾಲ ಬುಡ ನೋಡಿಕೊಂದು ನಡೆ ಅಂತಾ' ಎಂದು ಚಿಕ್ಕಂದಿನಲ್ಲಿ ಅಜ್ಜ ಬಯ್ಯುತ್ತಿದ್ದ ನೆನಪಾಯಿತು. ಕಾಲ ಬುಡವ ನೋಡಿಕೊಂಡು ನಡೆದರೆ ಗಾಡಿ ಬಂದು ಎದೆಗೆ ಗುದ್ದಿ ಸ್ವರ್ಗಕ್ಕೆ ದಾರಿ ತೋರುವುದು ಈಗ. 

ನಡೀ ಮನೆಗೆ. ಬೇಳೆ ಸಾರು, ನಾಕು ಕಾಳನ್ನ. ರಾತ್ರಿಯ ಕೂಳಿಗೆ ದಂಡ. ಟೀವಿಯುಂಟು, ಕಂಪ್ಯೂಟರುಂಟು, ಇಂಟರ್‍ನೆಟ್ಟುಂಟು, ಹಾಕು ಹೊಡೆದ ಫೋಟೋ, ಲೈಕು ವೊತ್ತುವೆ ನಾನು...... 
ವಿಶೇಷವೇನಿದೆ?? 
ರಾತ್ರಿಗೂ ಹಗಲಿಗೂ ಒಂದೇ ದಾರಿ!

No comments:

Post a Comment