Friday, June 7, 2013

ಎರಡು ಹಳಿಯ ರೈಲು

ಗುಡುಗು-ಮಿಂಚು. 
ಮಳೆಯಾಗಬಾರದೇ ಕ್ಷಣ ಹೊತ್ತು ಎಂದವರಿಗೆಲ್ಲ ಉತ್ತರ ಕೊಟ್ಟಿದ್ದು ಮಳೆಯೊಂದಿಗೆ ಗಾಳಿ! ಈ ಬಿಸಿಲಲ್ಲಿ ತಿರುಗಾಟವೂ ಕಷ್ಟ ಎಂದವರಿಗೆಲ್ಲ ಕೂರು ಮಗನೇ ಸೂರಿನ ಕೆಳಗೆ ಎಂದು ಎಂದು ಬಿಡದೇ ಸುರಿಯುತ್ತಿದೆ. ಗಾಳಿಯಲ್ಲಿ ಮಳೆಯ ಹನಿ ನಲಿಯಿತ್ತಿದೆ. ರಸ್ತೆಯ ಮೇಲೆ ಜೋಡಿ ನರ್ತನ!
ನನಗೀಗ ಬರೆಯಲಿಕ್ಕೆ ಮನಸಿಲ್ಲ. ನನ್ನ ತಲೆಯಲ್ಲೀಗ ಪಿಳ್ಳೆಯೊಂದು ಓಡಾಡುತ್ತಿದೆ. ಅದರ ಹೊಟ್ಟೆಯೊಳಗೊಂದು ಸಂಜೆಯ ಹಾಡಿದೆಯಂತೆ. ನನಗೀಗ ಕಣ್ಣು ತೆರೆದಲ್ಲೆಲ್ಲ ಅಮಲಿನ ಮುಲಾಮು ಹಚ್ಚಿದಂತಾಗಿ ನಿದಿರೆಯ ಜಾಪು ಮೂಡಿದೆ. ತನ್ನ ಸೌಂದರ್ಯದ ಮೇಲೆ ತನಗೇ ನಂಬಿಕೆಯಿಲ್ಲದೇ ಕೆನ್ನೆ-ತುಟಿಗಳಿಗೆ ಗುಲಾಬಿ ಬಣ್ಣ ಬಳಿದುಕೊಂಡು ಮುಸ್ಸಂಜೆಯ ಪ್ರದರ್ಶನಕ್ಕೆ ಕಾದು ಕುಳಿತಿರುವ ನಾಟ್ಯಶಾಲೆಯ ಮಾಸ್ತರಾಣಿಯಂತೇ…. ಮೋಡದ ಹಿಂದಿರುವ ಸೂರ್ಯ!

ಇಲ್ಲಿ ಕತೆಯ ಹೇಳುವುದು ಹಳಬರಲ್ಲ. ಹಳೆಯ ಕತೆ ಕೇಳಲಿಕ್ಕೆ ಸಮಯವಿಲ್ಲ. ಹೇಳಿದ್ದೇ ಕತೆಯ ಹೇಳಬೇಡಿ ದಯವಿಟ್ಟು. ನಗು ಬರುವುದು, ದುಃಖವಾಗುವುದು, ಬೇಸರವೂ ಆಗುವುದು; ಕಳೆದು ಹೋಯಿತಲ್ಲ ದಿನಗಳು… ಎಂದು. ತಪ್ಪು ಮಾಡಿದ್ದೇನಾ? ಎಂದು ತಲೆ ತಗ್ಗಿಸಿ ನಿಲ್ಲುವುದು ಮನ. ಹಲದೂರ ತೆರಳಿದ ಮೇಲೆ ಕೆಲ ನೆನಪುಗಳು. ಅಲ್ಲಿ ಚಂದಿರನ ನೆರಳಿತ್ತೇ? ಉರಿ ಬಿಸಿಲಲ್ಲಿ ಸಮುದ್ರ ದಂಡೆಯ ಮೇಲೆ ಜತೆನಡೆದವಳ ಪಾದದ ಗುರುತಿತ್ತೇ?! ಬೇಡ ಹಳೆಯ ನೆನಪುಗಳ ಗೋಜಲು. ಮುಸ್ಸಂಜೆಯಲಿ ಮಂದ ಬೆಳಕಿಗೆ ಮುತ್ತಿಕೊಂಡ ನೊರಜಲುಗಳನ್ನು ಓಡಿಸಲು ಹಾಕಿದ ಅಡಕೆ ಸಿಪ್ಪೆಯ ಗಾಢ ಹೊಗೆಗೆ ಕಣ್ಣು ತುಂಬಿ ಮೂಗಿನಲ್ಲಿ ನೀರಿಳಿದು ಹೊಗೆಯನ್ನೇ ಹೆದರಿಸೋಡಿಸುವಂಥ ಕೆಮ್ಮೊಂದು ಬರಬೇಕು.

ಬಹುದೂರ ನಡೆಯಲಿಲ್ಲ ಕೈಹಿಡಿದು ಮಾತಿಲ್ಲದೇ. ಕಿವಿ ಕಿತ್ತುಹೋಗುವಂಥ ಮೌನವಿರಲಿಲ್ಲ ದಾರಿಗುಂಟ. ಸಂಜೆಯಾಗಿರಲಿಲ್ಲ. ತೆಂಗಿನ ಮರದ ಬುಡದಲ್ಲಿ ಕಾಯಿ ಬಿದ್ದ ಸದ್ದೂ ಕೇಳಲಿಲ್ಲ. ವಾರದ ಹಿಂದಷ್ಟೇ ರಥಬೀದಿಯಲ್ಲೆಲ್ಲಾ ಎಳೆದಾಡಿ ವಾಪಸು ತಂದು ನಿಲ್ಲಿಸಿಟ್ಟ ತೇರಿನ ಪುಟ್ಟಪುಟ್ಟ ಬಾವುಟವನ್ನೆಲ್ಲಾ ಪಟಪಟನೆ ಹಿಡಿದಲ್ಲಾಡಿಸುವ ಬಿಸಿಲಿನಲ್ಲಿ ಸುಟ್ಟ ಗಾಳಿ. ವರುಷಗಳ ಲೆಕ್ಕವಿಲ್ಲದೇ ಗಾಲಿಗಳಿಗೆ ಹಚ್ಚಿಕೊಂಡು ಬಂದಿರುವ ಗ್ರೀಸಿನ ಬ್ರಹ್ಮಾಂಡ ಪರಿಮಳ. ಗೋಕರ್ಣದ ಬೀದಿಯಲ್ಲಿ……….. ಉರಿಉರಿ ಬಿಸಿಲಲ್ಲಿ….. ಮತ್ತೆ ಮತ್ತೆ ಕೂಡಿ ಮತ್ತೆ ದೂರವಾಗುವ ನೆರಳು…. ಹಗಲಿನಲ್ಲಿ ಎಲ್ಲವೂ ಒಂದೇ ತರಹ, ಇರುಳಿನಲ್ಲಿ ಹಲವು ರೂಪ. ಕಡಲ ತಡಿಯಲಿ ಒಂದು ಗಾನ. ಬೆಟ್ಟದ ತಪ್ಪಲಲ್ಲಿ ಒಂದು ಮೌನ. ಮರದ ನೆರಳಲ್ಲಿ ಗಾಳಿಯ ಕೂಗು. ಗಾಳಿಯ ಮರೆಯಲ್ಲಿ ಮರೆಯದ ನಗು!

ನಿಂತ ನೀರಿನಲ್ಲಿ ಮುಖ ತೊಳೆದು ದಿಗಂತದತ್ತ ನೋಡಿದಳು ಚಲುವೆ. ಪ್ರಶಾಂತ ನಗುವಿನಲಿ ಚಂದ್ರೋದಯವಾಯಿತು. ಮರೆತಿದ್ದ ನೆನಪುಗಳು ತಂಗಾಳಿಯಂತೆ ಮನಸಲಿ ತೇಲಿ ಮಾಯವಾಯಿತು, ಕಾಡಿನಲಿ ತಪ್ಪಿದ ದಾರಿಯೇ ಸರಿಯೆಂದು ನಡೆದೇ ನಡೆಯುವ ಬೆವರು ತುಂಬಿದ ಕಳೇಬರದ ಕಳೆ ಹೊಂದಿದ ಚಕಿತ ಮುಖ! ಆ ದಾರಿಯಲಿ ಅವಳಿಲ್ಲ. ಈ ದಾರಿಯಲಿ ಒಲವಿಲ್ಲ. ಬರಿದೇ ನಡೆಯುವ ಸಾಹಸಕೆ ಕೊನೆಯಿಲ್ಲ. ಕನಸು ಮುಗಿಯುವುದಿಲ್ಲ. ಒಂಟಿಕಾಲ ಶಿಕ್ಷೆ ಮರೆಯುವುದಿಲ್ಲ. ಮೂರು ಗೆರೆಯ ನಡುವೆ ಬರೆದ ಅಕ್ಷರ ಕೊನೆಗೂ ದುಂಡಗಾಗಲಿಲ್ಲ.

ಕಪ್ಪು ಹಲಗೆಯ ಮೇಲೆ ಬಿಳಿಯ ಚಿತ್ತಾರ. ಪ್ರೇಮಿಗಳಿಗೂ ಇಲ್ಲಿ ಪ್ರೀತಿಯ ಕನ್ನಡಕವುಂಟು. ಕಣ್ತೆರೆದು ಗಾಳಿಗೆ ಮುಖವೊಡ್ಡಿ ನಿಂತರೆ ಮನಸ್ಸು ತೇಲುವುದಿಲ್ಲ. ಧೂಳು ಕೂರುವುದು ಕಣ್ಣಲ್ಲಿ. ಪಾರ್ಕಿನ ಬೆಂಚಿನ ಮೇಲೆ ದಪ್ಪ ಕನ್ನಡಕದ ಹಿಂದೆ ಕಣ್ಣುಗುಡ್ಡೆಯ ತೇಲಾಡಿಸುತ್ತ ಕುಳಿತ ನಿಜಾಮನಿಗೆ ತಾನೆಲ್ಲಿದ್ದೇನೆ ಎಂದು ಅರಿವಾಗುವುದರೊಳಗೆ ಜಿಟಿ ಜಿಟಿ ಮಳೆ. ಕತ್ತಲಾಗುವುದರೊಳಗಲ್ಲ, ಕನಸು ಶುರುವಾಗುವುದರೊಳಗೆ ಮನೆಯ ಸೇರಿಕೋ. ಹಳ್ಳದ ನರು ರಸ್ತೆಗೆ ಬರುವುದಂತೆ ಚಂದ್ರ ಮೂಡುವ ಸಮಯದಲ್ಲಿ. ಅದ್ಯಾವ ಚಂದ್ರೋದಯವಾಯಿತೋ! ಪಾಪ, ಹುಡುಗಿಗೆ ನಿದ್ರೆ ಕಣ್ತುಂಬಿ ಬಂದು ಕುಳಿತಲ್ಲಿಯೇ ಬಿದ್ದು ಮೂಗಿಡೆದು ರಕ್ತ ಬಂದಿತು, ಹಲ್ಲು ಮುರಿಯಿತು, ಹಲ್ಮುಕ್ಕಿಗೆ ಸಿಮೆಂಟು ಜೋಡಿಸಿದರಂತೆ ಮದುವೆಯ ಸಮಯದಲ್ಲಿ!

ಪರೀಕ್ಷೆ ಬರೆದವರು ಪಾಸಾಗಲೇಬೇಕೆಂದಿದೆಯೇ?!

ಎಮ್ಮೆ ಕಟ್ಟಿಕೊಂಡವರಿಗೆ ಹಾಲು ಕರೆಯಲು ಬರಲೇಬೆಕೆಂದಿದೆಯೇ?!

ಮುಂಗುರುಳ ಉರುಳಲ್ಲಿ ಕೊರಳು ಬಿಗಿದು ಹೋಗಿ ಅರಿಷಡ್ವರ್ಗ ಮೀರಿ ಸನ್ಯಾಸಿಯಾಗುತ್ತೇನೆಂದು ಹೊರಟು ತೋರು ಬೆರಳು ಮಡಚಿ ಕುಳಿತವ ಮದುವೆಯಾದ. ಎಂಟು ವರ್ಷದ ಹಿಂದೆ ಮದುವೆಯಾಗಿ ಸುಖಸಂಸಾರಿ ಎನಿಸಿಕೊಂಡವ ಮರದ ಪಾದುಕೆ ಮೆಟ್ಟಿ ಭವಸಾಗರವ ದಾಟಲು ದೋಣಿ ಹತ್ತಿದ! ಕನಸುಗಳೆಲ್ಲ ಮುಗಿದ ಮೇಲೆ… ಎಂದು ಸಮುದ್ರ ದಂಡೆಯಲ್ಲಿ ಕುಳಿತು ಹಾಡು ಹಾಡಿದವ ಚಪ್ಪಾಳೆ ತಟ್ಟಲು ಕೈಗಳಿಗಿಲ್ಲಿ ಪುರುಸೊತ್ತಿಲ್ಲ ಎಂಬುದು ಅರಿವಾಗಿ ಸುಮ್ಮನೇ ನೀರು ಕುಡಿದು ಮನೆಗೆ ಬಂದ. ಎಲ್ಲೋ ಹಾರಾಡುತ್ತಿದ್ದ ಬಿಳಿಹಕ್ಕಿಯ ಹಿಡಿದು ತಂದು ಕೈಯಲ್ಲಿ ಮುದ್ದೆ ಕಟ್ಟಿ ಹಿಡಿದು ಫ್ರೀಬರ್ಡ್ ಎಂದು ಮತ್ತೆ ಹಾರಾಡಲು ಬಿಟ್ಟು ಚಪ್ಪಾಳೆ ಗಿಟ್ಟಿಸಿಕೊಂಡ ಇನ್ನೊಬ್ಬ! ಯಾವಾಗಾದರೊಂದು ಹಿತವಾಗಿ ಬೀಸುವ ಗಾಳಿಗೆ ಹಾರಾಡುವ ಕೂದಲನ್ನೆ ನೋಡುತ್ತ ಕುಳಿತು ರಾತ್ರಿಯಾಗಿ ನಿದ್ರೆಯ ಮರೆತ.
ಬಿರು ಬಿಸಿಲಲ್ಲಿ ಸೆಖೆಯ ಉರಿ ತಡೆಯಲಾಗದೇ ಕಡಲ ತಡಿಯಲ್ಲಿ ನಾಯೊಂದು ಮೂತಿಗೆ ಮೆತ್ತಿಕೊಂಡ ಹೊಂಯ್ಗೆ; ಉಪ್ಪಿಟ್ಟು!!

ತುಂಬಿಸಿಟ್ಟಿದ್ದ ಪಾಯಸವ ಗುಟುಕಿನಲ್ಲಿ ಮುಗಿಸಬಿಡುವೆ ಎಂದು ಹುಮ್ಮಸ್ಸಿನಲ್ಲಿ ತಟ್ಟೆಯನ್ನು ಬಾಯ್ಗಿಟ್ಟವನಿಗೆ ಸಿಕ್ಕಿದ್ದು ಮಾರುದ್ದದ ಕರಿಯ ಕೂದಲು; ಅಮೃತಬಳ್ಳಿಯ ಕಷಾಯ!

ಹಳೆಯ ನೆನಪುಗಳು. ಮುಸ್ಸಂಜೆಯ ಪ್ರಸಂಗಗಳು. ಬೆಟ್ಟದ ಮೇಲೆ ಕೆಂಪು ಸೂರ್ಯನೊಂದಿಗೆ ನಾವು. ನಮ್ಮ ಕೈಯ ನಡುವಲ್ಲಿ ಸುಳಿಯದ ಗಾಳಿ. ಹೋ… ಎಂದು ಕೂಗಿದರೆ ಓ… ಎಂದು ಕೂಗುವ ಬಂಡೆ. ಕೊರಳಿಗೊಂದು ಪುಟ್ಟ ಹಾರ. ಹಣೆಯ ಮೇಲೆ ಮಳೆಯ ಹನಿ. ಅಚಾನಕ್ಕಾಗಿ ಗುಡುಗು-ಮಿಂಚು, ತಂಪು ತಂಪು. ತಿಳಿ ಗುಲಾಬಿ ಬಣ್ಣದ ಆಕಾಶ.

ದಯವಿಟ್ಟು ಕೊರೆಯಬೇಡಿ. ಗಂಟಲಿನಲ್ಲಿ ಲೋಕವನ್ನೆಲ್ಲ ಉಳಿಸಲು ಕುಡಿದ ವಿಷವಿಲ್ಲ. ಮೊನ್ನೆ ಈಶ್ರು ಗೌಡ ಕೊಯ್ದಿಟ್ಟ ಹದಕ್ಕೆ ಬೆಳೆದಿದ್ದ ಹಲಸಿನ ಹಣ್ಣುಂಟು. ನಗಿಸಬೇಡಿ; ಮಳೆಗಾಲದಲ್ಲಿ ಹಣ್ಣು ಚೆಪ್ಪೆಯಾಗಿ ನೀರ ರುಚಿ ಬರುವುದು, ದೊಡ್ಡ ಆಕಳಿಕೆಯೊಂದಿಗೆ ಮಧ್ಯಾನ್ನದ ಸಣ್ಣ ನಿದಿರೆಯನ್ನು ಮುಗಿಸಿ ಜಿಡ್ಡು ಸಂಜೆಯ ಸ್ವಾಗತಿಸಬೇಕು.

ಮತ್ತೆ ಊಟ, ನಿದಿರೆ, ಬೆಳಗು!!

2 comments:

  1. ಸೂಪರ್ರ್ ಭಟ್ರೆ ಎಂದಿನಂತೆ.. ಇದ್ದಕ್ಕಿದ್ದಂಗೆ ಎಲ್ಲಿ ಕಾಣೆಯಾಗಿ ಹೋಗ್ತ್ರಿ ನೀವು ? !! :-)

    ReplyDelete
  2. ಬಾವನೆಗಳ ಎಳೆದೆಳೆದು ಬರೆದಿದ್ದಿರ ಚೆಂದ ಇದೆ, ಶುರುವಿನ ಹಾಗೂ ಲೇಖನದ ಕೊನೆಯ ಹಂತಿ ಯಾಕೊ ಹಳಿ ತಪ್ಪಿದೆ ಅನ್ನಿಸಿತ್ತು ಸರಿ ಮುಂದಿನ ನಿಮ್ಮ ಚೆಂದದ ಬರವಣಿಗೆಯ ನಿರೀಕ್ಷೆಯಲ್ಲಿ ಇರುತ್ತೇನೆ......ನಮಸ್ತೆ

    ReplyDelete