Sunday, March 3, 2013

ಸೂರ್ಯ ಡಿಮ್ಮಾದ..


ಬಹಳ ದಿನಗಳ ನಂತರ ಒಂದು ಕೆಂಪು ಸಂಜೆ. ಬೀದಿ ದೀಪಗಳ ಗರ್ಜನೆಯಿಲ್ಲ. ವಾಹನಗಳ ಹಾಹಾಕಾರವಿಲ್ಲ. ಕಣ್ಣು ಬಿಟ್ಟು ಬರಿಯ ಆಗಸದ ಕಡೆಗೆ ನೋಡಿದರೆ ಬೆಳ್ಳಬೆಳ್ಳಗಿನ ಮಳೆತರದ ಮೋಡ. ಕೊನೆ ಹೊತ್ತುಕೊಂಡು ತೂಗುವ ಅಡಕೆಮರ. ಪುಟ್ಟಪುಟ್ಟ ಹುಲ್ಲುಗಳಿಂದ ಮೈಯನ್ನೆಲ್ಲ ಹಸುರು ಮಾಡಿಕೊಂಡ ಕೆಂಪುಮಣ್ಣಿನ ಪಾಗಾರ. ಆಗೊಂದು ಈಗೊಂದು ಟುರ್ರುಗುಡುತ್ತ ಬಂದು ರಸ್ತೆಯಲಿ ನಿಂತಿರುವ ಸಣ್ಣ ಹೊಂಡದ ಮಳೆಯ ನೀರನ್ನು ಹಾರಿಸಿ ಹೋಗುವ ಸ್ಕೂಟರು. ಮಳೆ ನಿಂತ ಸಂಜೆಯಲಿ ರಸ್ತೆಯ ಬದಿಗೆ ನಿಂತ ಕಲ್ಲು ರಾಶಿಯ ಮೇಲೆ ಕೂತರೆ ಸಣ್ಣ ನೆನಪು, ಕಳೆದು ಹೋದ ಪ್ರೀತಿಯದ್ದು! ಮಧ್ಯ ರಾತ್ರಿಯಲಿ ನಿಡಿದಾದ ನಿದ್ರೆ. ದಿನದ ಮಧ್ಯದಲಿ ನಿಗಿನಿಗಿ ಕೆಲಸ. 
ನನಗೀಗ ಕೊಂಚ ವಿರಾಮ... ಸಂಜೆಯಾಗಿದೆ, ಮಳೆ ಬರಬೇಕು ರಾತ್ರಿಯೆಲ್ಲ!! 
ಕೈಯಲ್ಲಿ ಹಿಡಿದ ದಂಟು ಮುರಿದು ಕತ್ತು ಬಗ್ಗಿಸಿದ ಕೆಂಪು ಗುಲಾಬಿಯ ಕಂಡು ನಗುತ್ತಿದ್ದ ದಿನಗಳಲ್ಲಿ ಸಾಯದೇ ಉಳಿದ ರೆಕ್ಕೆಯುದುರಿದ ಹಾತೆಯ ಗತಿ! 
ನಿನ್ನೊಂದಿಗೆ ಕಳೆದ ಸವಿಕ್ಷಣಗಳ ಬರೆದಿಟ್ಟುಕೊಳ್ಳಲಿಕ್ಕೆ ಒಂದು ಹೊಸ ಪಟ್ಟಿಯ ಕೊಂಡುಕೊಂಡೆ. ಪಟ್ಟಿ ಹೊಸತಾದರೇನು! ಅದರ ಮೇಲೆ ಬರೆದ ಇಸವಿಯಿನ್ನೂ 2003. 'ಹತ್ತು ವರುಷದ ಹಿಂದೆ ಮುತ್ತೂರ ತೇರು!' ದೂರದಲಿ ನಿಂತು ನಗಬೇಡ ನೀನು. ನಾನು ಮಳ್ಳ, ನನಗೂ ಗೊತ್ತು. ಪ್ರೀತಿ ಪ್ರೇಮಗಳ ಗೊಡವೆಯೇ ಬೇಡವೆಂದು ಪಕ್ಕದ ಮನೆಯ ಕೆಂಪು ಸೀರೆಯ ಅಜ್ಜಿ ದಿನವೂ ಸಂಜೆ ಸುತ್ತುತ್ತಿದ್ದ  ಆಲದ ಮರದ ಕೆಳಗೆ ಕಲ್ಲಾಗಿ ಹೋದವಳು ನೀನು. ದಿನವೂ ಮಡಿಯುಟ್ಟು ಭಸ್ಮ ಹಚ್ಚಿಕೊಂಡು ಕೊಡ ನೀರನ್ನು ಕಲ್ಲ ಮೇಲೆ ಸುರಿಯುತ್ತಿರುವೆ ನಾನು! ನಿನ್ನ ನೋಡಿದಾಗಿನ ಮೋಹವೀಗ ಭಕ್ತಿಯಾಗಿ ಹೋಯಿತೇ! ವಿಸ್ಮಯ.

ಬಹಳ ದಿನಗಳ ನಂತರ ಒಂದು ನೆನಪೆದ್ದಿದೆ ಎದೆಯೊಳಗಿಂದ..... ಮದ್ದಿಲ್ಲದ ರೋಗವ ಹೊತ್ತುಕೊಂಡಿರುವ ದಿನರಾತ್ರಿಯ ಹಂಗಿಲ್ಲದ ಬೇವಾರ್ಸಿ ಕಾಲಕ್ಕೆ ರಾತ್ರಿಯಾಗಿದೆ. ನೀನು ಗೆದ್ದೆ ಎಂದವಳು ಪೂರ್ತಿ ಸೋಲಿಸಿ ಹೋದಳು. ಹೋದಲ್ಲಿ ಬಂದಲ್ಲಿ 'ನೀನು ಗೆದ್ದೆ' ಎಂದು ನಗುವ ದನಿ. ಆ ದನಿಯ ಕೇಳಿ ಕೇಳಿ ಮತ್ತೆ ಸೋಲುವ ನಾನು. ನಾನು ಸೋತೆನೇ? ಮರುಳಿ ನೀನು! ನಿನ್ನ ದನಿಯ ಕೇಳುವ ನನ್ನ ಕಿವಿ, ನಿನ್ನ ಕನಸು ಕಾಣುವ ರೆಪ್ಪೆ ಮುಚ್ಚಿಕೊಂಡ ಕಣ್ಣು,  ನಿನ್ನ ನೆನಪ ಹೊತ್ತ ನಾನು... ಎಲ್ಲ ನಿನ್ನ ಕಡೆಗೇ!! ಗೆದ್ದವಳು ನೀನು; ಗೆದ್ದವಳ ಬಯಸುತ್ತಿರುವ ನನ್ನಲ್ಲಿ ಸೋಲೆಂಬುದು ಹರಿದು ಹೋದ ನೀರು.
ರೈಲು ಹಳಿಗಳ ಮೇಲೆ ಒಂಟಿಯಾಗಿ ಕುಳಿತು ಧೇನಿಸಿದ ಸಂಜೆಯಲಿ ಬಿಳಿಬಿಳಿಯಾಗಿ ತಿಂಗಳ ಬೆಳಕಿನಲಿ ಹಾದು ಹೋದವಳು; ಹಣೆಯ ಮೇಲೆ ಹೊಳೆಯುವ ತಾರೆ. ಬಿದಿಗೆ ಚಂದಿರನ ಎಳೆಎಳೆಯಾಗಿ ಕೈಗೆ ಸುತ್ತಿಕೊಂಡಂತಿರುವ ಹೊಳೆವ ಬಳೆಗಳು, ಅದರ ಸದ್ದು ಅದಕ್ಕೂ ಕೇಳದು! ಧರಿಸಿದ ಬಟ್ಟೆಯ ಸೋಕಿದ ಗಾಳಿ ಬಳಿಸುಳಿದು ಅರೆಕ್ಷಣ ಕತ್ತಲಿನಲಿ ಮರೆತೇ ಹೋಗುವ ಬೆಳಿಕಿನಂತೇ ಈ ಜಗತ್ತು ಮರವೆಯಾಗುತ್ತಿತ್ತು....
ಮರವೆಯಾಯಿತೆಂದರೂ ಮರವೆಯಾಗದು ಸೈಕಲ್ಲು ಹೊಡೆದ ರೋಡು. ಮುಗಿಯಿತೆಂದುಕೊಂಡಂತೇ ಮತ್ತೆ ಮತ್ತೆ ಬಂದೇ ಬರುವ ಹುಣ್ಣಿಮೆಯ ಹಾಡು! ಸವಿ ಕಲ್ಪನೆಗಳು ಬೇಡ, ಸಾಕದರ ಮೋಹಲೀಲೆ!! 

ಅಮ್ಮ ಫೇರೆಂಡ್ ಲವ್ಲಿ ಹಚ್ಚದೇ ನನ್ನ ಹೊಟ್ಟೆ ತುಂಬುವುದಿಲ್ಲ. ನನ್ನ ಹೊಟ್ಟೆ ತುಂಬಿಸದಿದ್ದರೆ ಫೇರೆಂಡ್ ಲವ್ಲಿ ತರಲಿಕ್ಕೆ ಜನರಿಲ್ಲ. ಪುಟ್ಟ ಮಗುವೊಂದು  ಆಗಸವನ್ನು ನೋಡಿ ನಕ್ಕಿತು. ಪ್ರೀತಿ ಪ್ರೇಮಗಳ ಅನಿರೀಕ್ಷಿತ ಸುಳಿಯಲ್ಲಿ ಅನಾಗರಿಕವಾಗಿ ಸಿಲುಕಿ ನಲುಗಿಹೋದ ಜೀವಗಳ ಅನಪೇಕ್ಷಿತ ನೆನಪು. ತುಪ್ಪ ಕಾಯಿಸಿ ಜಿಡ್ಡುಗಟ್ಟಿ ಹೋದ ನಿನ್ನೆಯ ಪಾತ್ರೆಯನ್ನು ತೊಳೆಯಲು ನೀರಿಲ್ಲ; ಇಂದು ಬಂದವರಿಗೆ ಪಾಯಸ ಮಾಡಬೇಕಂತೆ.! 

ಕಾರಿನಲ್ಲಿ ಓಡಾಡುವವರ ಜುಮ್ಮನೆ ಜೀವನ, ಕಾಡಿನಲ್ಲಿ ಓಡಾಡುವವರ ಬರಿಗಾಲ ಯವ್ವನ. ನಗು ಬಂತು. ಸೂರತ್ತಿನ ಅತಿ ಎತ್ತರದ ಫ್ಲೈಓವರಿನ ಮೇಲೆ ಲೈಟು ಕಂಬವ ಹಿಡಿದು ನಿಂತವ ಏನನ್ನೋ ನೆನೆದು ನಕ್ಕೆ. ನೆನೆದದ್ದು ಏನು? ಕಂಡದ್ದು ಏನು!? ಸೂರ್ಯ ಮುಳುಗುವ ಸಮಯದಲ್ಲಿ ಸಬ್ ಜೈಲಿನ ಹಿಂದುಗಡೆ, ಅಥ್ವಾ ಲೈನ್ಸಿನ ಬದಿಯಲ್ಲಿ, ಯೂನಿವರ್ಸಿಟೀ ರೋಡಿನಲ್ಲಿ ಫೇರೆಂಡ್ ಲವ್ಲಿ ಮೆತ್ತಿಕೊಂಡು ಲಿಪ್ ಸ್ಟಿಕ್ಕು ಹಚ್ಚಿಕೊಂಡು ಸರತಿ ಸಾಲಲ್ಲಿ ಕಂಡುಬರುವ ಆ ಹೆಣ್ಣುಗಳಿಗೆ ಸಂಸಾರವಿಲ್ಲವೇ!! ದಾರಿಯುದ್ದಕೂ ಹರಿಯುವ ಆ ವಾಹನಗಳ ದಂಡು; ಎಷ್ಟೊಂದು ಜನರು! ಎಲ್ಲರೂ ಹೋಗುವುದಾದರೂ ಎಲ್ಲಿಗೆ? ಎಲ್ಲರಿಗೂ ಮನೆಯುಂಟೇ? ಎಲ್ಲರೂ ಅವರವರ ಮನೆಗೇ ಹೋಗುವರೇ? ಮಧ್ಯರಾತ್ರಿಯಲಿ ಒಮ್ಮಲೇ ರಸ್ತೆ ಖಾಲಿಯಾಗುವುದಾದರೂ ಹೇಗೆ?! 

ಅನಿಶ್ಚಿತ ಪ್ರಶ್ನೆಗೆ ಉತ್ತರ ಹುಡುಕಬಾರದಂತೆ...

ನೀವು ಕನಸಿನಲ್ಲಿ ಬಂದವರಂತೇ ಹಾಡಬೇಡಿ, ನನಗೆ ನೋವಾಗುತ್ತದೆ. ಹಳೆಯ ನೆನಪುಗಳು ಎದೆಯ ಮೆಟ್ಟಿ ನಿಂತು ನೀಲಾಂಜನವ ನಂದಿಸುತ್ತದೆ. ಕರಿ ರಾತ್ರಿಯಲೂ ನನಗೆ ನೆನಪಿನ ಕಾಟದ ಅರಿವುಂಟು. ಬೇಸರವಾಗುತ್ತದೆ ದೂರವಾದವರ ನೆನೆದು. ಬೇಸರವಾಗುತ್ತದೆ ದೂರ ಹೋದವರ ನೆನೆದು. ಹಾಡಬೇಡಿ ಎಂದರೆ ನಿಮಗೆ ಬೇಸರ. ಹಾಡು ಕೇಳಿದರೆ ನನಗೆ ಬೇಸರ. ಅವಳು ಕಿವಿಗಿಟ್ಟ ಪ್ರೀತಿಯ ನವಿಲುಗರಿ ಯಾವುದೋ ಪುಸ್ತಕದ ಹದಿನೆಂಟನೆಯ ಪುಟದಲ್ಲಿ ಬೆಚ್ಚಗೆ ಕುಳಿತಿದೆ ಇಂದೂ. ಹದಿನೆಂಟು, ಅವಳಿಗೊಂದು ಹೆಪಿ ಬರ್ತಡೇಯ ದಿನ. ದಿನವೂ ಒಂದೊಂದು ಹೆಪ್ಪಿ ಬರ್ತಡೇ ಎಂದು ಅವಳ ಮನೆಯ ಬಾಗಿಲು ತಟ್ಟಿ ಹೇಳಿ ಬರುವ ಎನಿಸುತ್ತಿತ್ತು; ದಿನ ಬೆಳಗಾದರೆ ಪೇಪರು ಹಾಕುವವನ ದಿನಚರಿಯಂತೇ! ಹುಚ್ಚು ಎಂದಾಳು... ಹುಚ್ಚು ಎಂದವಳ ಹಿಂದೆ ಹುಚ್ಚನಂತೇ ಅಲೆದು ಕೊನೆಗೆ ಉದರಿ ಬಿದ್ದ ಹಣ್ಣೆಲೆಯ ಮೇಲೆ ಲಾರಿಯ ಟಾಯರು ಹಾರಿಸಿದ ಬೇಸಗೆಯ ಧೂಳು. 
ಕಣ್ಣಿಲ್ಲದ ತಿರುಕನಿಗೆ ನಾಯಿ ತೋರಿಸಿತಂತೆ ದಾರಿಯ....
ರಾತ್ರಿಯ  ಎಲ್ಲ ಕೊಳೆಯನ್ನು ಸುಟ್ಟೇ ಬಿಡುವೆ ಎಂದು ದಿನಬೆಳಗಾದರೆ ಅದೇ ಮುಖವನ್ನು ಹೊತ್ತು ಬರುವ ಸೂರ್ಯ, ಕಂತುವಾಗ ಸೋತೇ.. ಎಂದು ಸುಮ್ಮನಾಗುವ. ಒಂಟಿ ಬಯಲಲ್ಲಿ ಚಂದ್ರನಿಗೆ ಇದ್ದೂ ಇಲ್ಲದ ಹೋರಾಟ!!!

3 comments:

  1. superb bhatre..
    ಯಾವ್ಯಾವ್ದು ಇಷ್ಟ ಆತು ಹೇಳಿ ಹೇಳಕ್ಕೆ ಹೋದ್ರೆ ನಿಮ್ಮ ಇಡೀ ಲೇಖನನೇ ಇಲ್ಲಿ ಪೇಸ್ಟ್ ಮಾಡಕ್ಕಾಗ್ತು.
    ಭಯಂಕರ ಇಷ್ಟ ಆತು ನಿಮ್ಮ ಲಯ..

    ReplyDelete
  2. ತುಂಬಾ ಇಷ್ಟವಾಗೋ ಭಾವ .... ಸೊಗಸಾಗಿ ಮೂಡಿಸಿದ್ದೀರಿ .... ಬರಿತಾ ಇರಿ ... ನಮಸ್ತೆ

    ReplyDelete