Tuesday, January 1, 2013

ಮೈ ನೇಮ್ ಈಸ್ ರೇಣುಕಾ..



ಹಳೆಯ ವರುಷದ ಒಂದು ಹೊಸ ಡೈರಿಯ ತೆಗೆದೆ. ಖಾಲಿ ಖಾಲಿ ಪುಟದ ಮೇಲೆ ನಕ್ಕು ಹೋದವರು, ನಿಂತು ಹೋದವರು, ಬಂದು ಹೋದವರು, ಇದ್ದು ಹೋದವರೆಲ್ಲರ ಗುರುತು ಸಿಕ್ಕಿತು. ಉಳಿದುಹೋದವರು ಮಾತ್ರ ಜೊತೆಯಲಿರುವವರು ಎಂದು ನಕ್ಕೆ. ಸುಮ್ಮನೇ ಒಂದು ಚಳಿಯ ರಾತ್ರಿಯಲಿ ದೊಡ್ಡ ಉಸಿರೊಂದು ಖಾಲಿ ರಸ್ತೆಯ ಮೇಲೆ ಸಾಗುತ್ತಿರುವ ರಿಕ್ಷಾದಂತೇ ಸದ್ದು ಮಾಡಿತು.
ಹಳತು ಹೋಯಿತು ಹೊಸದು ಬಂತು ಎನ್ನುವ ಪ್ರಶ್ನೆಯೇ ಇಲ್ಲ. ಅದೊಂದು ಬೆರಗಿನ ಸಂಗತಿಯೂ ಅಲ್ಲ. ಹಳತು ಜಾಗ ಬಿಟ್ಟರೆ ಮಾತ್ರವೇ ಹೊಸತು ಬರುವುದು ಎನ್ನುವುದೂ ಸುಳ್ಳೇ ವಾದ. ಹಳೆಯ ಜನರಿನ್ನೂ ಇದ್ದರೂ ಹೊಸ ಜೀವಗಳ ಜನನವಾಗುವುದಿಲ್ಲವೇ?! ಇದೊಂದೇ ಉದಾಹರಣೆ ಸಾಕು. ಎಲ್ಲ ಹಳೆಯದರ ನಡುವೆ ಹೊಸತೊಂದು ಬಂದು ಕೂರುವುದು. ಹಳತರ ಪ್ರಭಾವ ಅದರ ಮೇಲಾಗಿ ಹೊಸತೂ ಬೇಗನೆ ಹಳತಾಗುವುದು. ಇದೇ ಜೀವನ ಎಂದು ಬುದ್ಧಿಜೀವಿಗಳ ವಾದ. ಸಣ್ಣವ ನಾನು; ಹ್ಞೂಂ ಎಂದೆ!

ಡಿಸೆಂಬರಿನ ಕೊನೆಯ ದಿನ. ಅರೆನಗ್ನ ನೃತ್ಯದಲ್ಲಿ ತಲ್ಲೀನವಾಗಿ ಚಳಿ ಇನಿಯಳಿಲ್ಲದ ಇನಿಯನ ಹಂಗಿಸುತಿಹುದು! ಹಳೆಪಳೆಯ ಹಾಡುಗಳು ರಾತ್ರಿಯಲಿ ಬಂದೀತೇ ಉಪಯೋಗಕ್ಕೆ? ಅದೇನಿದ್ದರೂ ಮುಸ್ಸಂಜೆಗೆ! ಮನಸ್ಸು ಮಳೆಗಾಲದ ಹಾದಿಯ ಹಿಡಿದು ಕೊಂಚ ಹಿಂದೋಡಿತು. ಅರಾವಳಿ ಬೆಟ್ಟವ ಸೀಳಿಕೊಂಡು ಮುನ್ನುಗ್ಗುತ್ತಿದ್ದ ರೈಲು. ಕಿಟಕಿಯ ಸಂದಿಯಿಂದ ಅರ್ಧಮೂತಿಯ ಹೊರಹಾಕಿ ಆಗಾಗ ಕಾಣಿಸಿಕೊಳ್ಳುತ್ತಿದ್ದ  ಸೂರ್ಯನ ಸುಮ್ಮನೇ ನೋಡುತ್ತಿದ್ದ ನಾನು. ತೊಡೆಯ ಮೇಲೊಂದು ಬೆರಳು ತಟ್ಟಿತು. ಕಾಗದವ ಒಗೆದು ಕೈ ಮುಂದೆ ಮಾಡಿ ನಿಂತಳು ಹೆಂಗಸು..... ರೇಣುಕಾ......
My name is Renuka, I have two children. My brother lost two hands in an accident. I have one sister. I am living with my mother. Kindly help us by `5, 10, 20, 50, 100. God may give all happiness to you.
Thank You.

ಭಾರತೀಯ ಕುಟುಂಬ! ಸಾಮಾನ್ಯವಾಗಿ ಭಿಕ್ಷುಕರ ಮುಖನೋಡಿ ದುಡ್ಡು ಕೊಡುವವ ನಾನು ಕಿಸೆಯಲ್ಲಿ ಕೈ ಹಾಕಿದಾಗ ಸಿಕ್ಕಿದ ಹತ್ತರ ನೋಟೊಂದನ್ನು ಕೊಟ್ಟುಬಿಟ್ಟೆ. ಭಾರತೀಯ ರಿಸರ್ವ ಬ್ಯಾಂಕು ಮುದ್ರಿಸುವ ಯಾವ ನೋಟನ್ನೂ ಕೊಡಬಹುದು ಎಂದು ಬರೆದದ್ದರಿಂದ ನೊಟಿಗಾಗಿ ಹುಡುಕುವ ಅವಶ್ಯಕತೆಯಿಲ್ಲ. ನೂರಕ್ಕಿಂತ ಜಾಸ್ತಿಯದ್ದನ್ನು ಕೊಟ್ಟರೆ ಅಭ್ಯಂತರವಿಲ್ಲ, ಐದಕ್ಕಿಂತ ಕಡಿಮೆಯದ್ದು ಕೊಡಬೇಡಿ ಎಂದು ಮೊದಲೇ ಮುದ್ರಿಸಿಯಾಗಿತ್ತು!

ಇದು ಹೊಸ ಕತೆಯಲ್ಲ. ಇಂತಹ ಚೀಟಿಗಳು ಕೆಎಸ್ಸಾರ್ಟೀಸಿ ಬಸ್ಸುಗಳಲ್ಲಿಯೂ ಒಂದರ ಹಿಂದೊಂದರಂತೇ ಸಿಗುತ್ತವೆ. ದಾನ ಮಾಡುತ್ತಿರಲಿಲ್ಲ ಮೊದಲು; ಬೇರೆಯವರ ದುಡ್ಡನ್ನು ಬೇರೊಬ್ಬರಿಗೆ ಕೊಡಲಿಕ್ಕೆ ನಾನೇ ಆಗಬೇಕೇ?!
ಇದೇನೂ ಹೊಸ ವಿಷಯವಲ್ಲ. ಜನವರಿಯಲ್ಲಿ ಬರೆದ ಎರಡು ಸಾಲನ್ನು ನೋಡಿ ಡಿಸೆಂಬರಿನಲ್ಲಿ ನಕ್ಕಂತಿದೆಯಷ್ಟೇ. ಅದು ಹೊಸ ಸಾಲಲ್ಲ. ಹಳೆಯ ಮರದ ಎಲೆಯ ಮೇಲೆ ಹಾರನ್ನು ಮಾಡುತ್ತ ಹೋದ ಹೊಸ ಗಾಡಿ ಹಾರಿಸಿದ ಧೂಳು ಅಷ್ಟೇ. ಧೂಳನ್ನು ತೊಳೆಯಲು ಅದೇ ಮಳೆ. ನಂತರ ಒಂದು ಗಾಳಿ. ಗಾಳಿ ಬೀಸಿದೊಡನೆ ನೆನಪಾಗುತ್ತದೆ, ' ಹಿಂದಿನ ರಾತ್ರಿಯೂ ಇಂಥದೇ ಒಂದು ಗಾಳಿ ಬೀಸಿತ್ತಲ್ಲ!' ಎಂದು.

ಹೊಸ ಮರದಡಿಯಲ್ಲಿ ಕೂತು ಸೆರಗಿನಿಂದ ಗಾಳಿ ಬೀಸಿಕೊಳ್ಳುವ ಸುಂದರಿಯ ನೋಡಿಯೇ ಗಾಡಿ ನಿಲ್ಲಿಸಿದ ಡ್ರೈವರನ ಸ್ಟೇರಿಂಗು ಹಿಡಿದ ಕೈ ಬೆವರಾಯಿತಂತೆ. ಸುಂದರಿಯ ಮಾತನಾಡಿಸಿದ. ಮಾತಾಡಲೊಲ್ಲೆನೆಂದಳು. ಕೋಪ ನೆತ್ತಿಗೇರಿತು ಅವನಿಗೆ. ಜಿಡ್ಡುಗಟ್ಟಿದ ಅಂಗೈಗೆ ಸವರಿದ ಕೊಬ್ಬರಿಯೆಣ್ಣೆಯಾದಳು ಸುಂದರಿ. ತಾಯ್ತಂಗಿಯರು ಮೂಕ ಸಾಕ್ಷಿ, ತಮ್ಮ ಅಂಗ ವಿಕಲನಾದ! ಪಶುಗಳ ಜೀವನವೇ ಹೀಗಿರುವಾಗ ಮೃಗಗಳಿಗೇನು ಕೊರತೆಯೇ!!

ಕೊಟ್ಟಿಗೆಯಿಲ್ಲದ ದನಕ್ಕೆ ಕಾಡಾದರೂ ಹುಲಿಯ ಗವಿಯಾದರೂ ವಿಶೇಷವಿಲ್ಲ. ಹತ್ತು ರೂಪಾಯಿಯನ್ನು ಅವಳ ಕೈಯೊಳಗಿಟ್ಟು ಪ್ಯಾಂಟಿನ ಕಿಸೆಯೊಳಗೆ ಕೈ ತುರುಕಿಕೊಂಡು ಬಂದುಬಿಡುವ ನಮಗೆ 'ಛೇ, ಹೀಗಾಗಬಾರದಿತ್ತು' ಎಂಬ ಮರುಕವೊಂದೇ ಬಿಟ್ಟರೆ ಬೇರೆ ಯಾವ ಮಹಾನ್ ಸಾಧನೆಯೂ ಆಗುವುದಿಲ್ಲ. ಇಂಥವರಿಗೋಸ್ಕರ ಯಾವ ರಿಸರ್ವೇಶನ್ನೂ ಇಲ್ಲ. ಯಾವ ಪ್ರತಿಭಟನೆಯೂ ಶಾಂತಿ ಯಾತ್ರೆಯೂ ನಡೆಯುವುದಿಲ್ಲ. ಬದಲಾಗಿ, ಬೇಡಿದ ದುಡ್ಡನ್ನೇ ಕೀಳುವ ಟೀಸಿ ಸಧ್ಯ ಇಷ್ಟಕ್ಕೇ ಬಿಟ್ಟನಲ್ಲ ಎಂಬ ಕಾರಣಕ್ಕೆ ದೇವರಾಗಿಬಿಡುತ್ತಾನೆ.

ನೀರಿಂದ ಮೇಲೆ ಹಾರಿ ಮತ್ತೆ ಮುಳುಗಿ ಕೂರುವ ಕಪ್ಪೆಯ ಹಾಗೇ ಬದುಕು.
ಒಂದು ಕಡೆಯಲ್ಲಿ ದೇಹ, ಇನ್ನೊಂದು ಕಡೆಯಲ್ಲಿ ಜೀವ, ನಡುವೆ ಕಬ್ಬನ್ನು ರಸದಿಂದ ಬೇರ್ಪಡಿಸಿ ಹಿಪ್ಪೆ ಮಾಡಿಬಿಡುವ ಕಿರಾತಕ ಗಾಣ!

ಇವೆಲ್ಲದರ ನಡುವೆಯೊಂದು ಹೊಸ ವರುಷ ಬಂದಿದೆ. ಇದರ ಹೆಸರು 2013. ಹಳೆಯ ಕ್ಯಾಲೆಂಡರನ್ನು ಧೂಳು ಸಹಿತ ತೆಗೆದು ಬದಿಗಿಟ್ಟಾಯಿತು. ಹೊಸತು ಹಳೆಯ ಮೊಳೆಯ ಬೆರಳನ್ನೇ ಹಿಡಿದು ಗೋಡೆಯೇರಿ ಕುಳಿತಿದೆ. ಅದು ಹೊಸದು, ಸ್ವಲ್ಪ ಹುರುಪು. ದಿನ ಕಳೆಯಲಿ ನಾಕಾರು, ತಿಳಿಯುತ್ತದೆ ನಿನಗೂ... ಎಂದು ಮುಸಿ ಮುಸಿ ನಕ್ಕದ್ದು 2012.

ಜನ ಹಳೆಯದಾದರೂ ಕೆಟ್ಟ ಹಳತುಗಳು ಮತ್ತೆ ಬಾರದಿರಲಿ. ಒಳ್ಳೆಯದು ಎಷ್ಟು ಹಳತಾದರೂ ಮರಳಿ ಮರಳಿ ಮರುಕಳಿಸಲಿ. ಸುರಿಯಲಿ ಮಳೆ, ಹಾರಲಿ ಧೂಳು, ನಲಿಯಲಿ ಹಸಿರು, ಪುಟಿಯಲಿ ಎಲ್ಲ ತುಟಿಯಲಿ...... ಫಕ್ಕನೊಮ್ಮೆ ನಗು...

No comments:

Post a Comment