ಥೋ....
ಸಿಟಿ ಮಧ್ಯದ ಸರ್ಕಲ್ಲಿನಲ್ಲಿ ನಿಂತಿರುತ್ತಿದ್ದ ಕೆಂಪು ಲಿಪ್ ಸ್ಟಿಕ್ಕಿನ ಹೆಂಗಸು ಕಣ್ಣೆದುರಿಗೆ ಹೀಗೆಯೇ ಹಾದು ಹೋದ ಸಂದರ್ಭದಲ್ಲಿ ಅವನಿಗೆ ಕಚ್ಚಿದ ನುಶಿಗೆ ಏಡ್ಸ್ ಬಂದು ತೀರಿತು. ಮುಸ್ಸಂಜೆಯಲಿ ರಸ್ತೆಯ ಬದಿಗೆ ಚಹ ಮೋರುತ್ತ ನಿಂತ ಆಸಾಮಿಯ ಕಿವಿಯಲ್ಲಿ ಕೊಚ್ಚೆ ಹೀರುತ್ತಿದ್ದ ನೊಣವೊಂದು ಗೊಂಯ್ ಎಂದ ಪರಿಣಾಮ; ಜ್ಞಾನೋದಯ! ಕುಡಿಯದೇ ಬಿಟ್ಟುಹೋದ ಚಹವನ್ನು ಅಂಗಡಿಯವ ಯಾರಿಗೂ ಕಾಣದಂತೇ ಟೇಬಲ್ಲಿನ ಕೆಳಗೆ ಹಿಡಿದು ಥರ್ಮಸಿನಲ್ಲಿ ತುಂಬಿ ಪಕ್ಕದವನೊಂದಿಗೆ ಹರಟಲು ನಿಂತ. ರಾತ್ರಿ ಹನ್ನೆರಡು ಗಂಟೆಗೂ ದೀಪವಾರಿಸದ ದೊಡ್ಡವರ ನೋಡುತ್ತ ಬೆಳೆದ ಮಕ್ಕಳು ಮುಖ ಗಂಟು ಹಾಕಿಕೊಂಡು ಏಳುವುದೇ ಹನ್ನೊಂದು ಗಂಟೆಗೆ. ಎದ್ದು ಮಾಡುವುದಾದರೂ ಏನು? ನೀರು ಕಾಣದ ಹೊಲಸು ನಾಲಗೆಗೆ ಚಹಾ ಚಪ್ಪರಿಸುವುದೊಂದೇ ಕೆಲಸ. ಎಫ್ಎಮ್ಮಿನಲ್ಲಿ ಬರುತ್ತಿದ್ದ ದರಿದ್ರ ಹಾಡೊಂದನ್ನು ಬಂದು ಮಾಡಿ ಟೀವಿ ಹಾಕಿದರೆ ನಾಕಾರು ಅಜ್ಜಂದಿರು ಸುತ್ತಲೂ ಕುಳಿತು, ನಮ್ಮ ಕಾಲದಲಿ ಹಾಗಿತ್ತು, ಒಂದು ಕಾಸಿನಲಿ ಹೊಟ್ಟೆ ತುಂಬುತ್ತಿತ್ತು, ಎಂದು ತಿಲ್ಲಾನ ಹಾಡುತ್ತಿದ್ದರು.
ಯಾರೋ ಎಲ್ಲೋ ನೆನಪಾಗಿ, ಮಧ್ಯರಾತ್ರಿಯಲಿ ದಪ್ಪ ಅಂಗಿ, ಮೊಳಕಾಲು ಉದ್ದದ ಚಡ್ಡಿ ಹಾಕಿ ಹೊರಗೆ ಹೊರಟವನ `ಎಲ್ಲಿಗೆ?' ಎಂದು ಕೇಳದೇ ತಾನೂ ಬರಲೇ ಎಂದು ಹೆಂಡತಿ ಎಂದಾಗ ತನಗೆ ನೆನಪಾದದ್ದು ಏನು ಎಂಬುದೇ ಮರೆತುಹೋಗಿ ಹೆಂಡತಿಯೊಂದಿಗೆ ಮುಚ್ಚಿಕೊಂಡು ವಾಕಿಂಗು ಮುಗಿಸಿ ಬಂದ. ದೂರದಲ್ಲಿ ರೈಲು ಹರಿದುಹೋದ ಸದ್ದು. ನಾನು ಅವನು ಕೈ ಕೈಯ ಹಿಡಿದು ದೂರ ದೂರಕೆ ನಡೆದು ಜೀವಮಾನದಲ್ಲಿಯೇ ಒಂದಾಗದ ರೈಲು ಹಳಿಗಳ ಸೇರಿಸಲಿಲ್ಲವೇ? ಅದು ಅವಳ ಕತೆ. ತಾನು ಇವಳನ್ನು ಮೊದಲು ಭೇಟಿಯಾದಾಗಲೂ ಯಾವ ರೋಮಾಂಚನವೂ ಇರಲಿಲ್ಲವಲ್ಲ! ಈಗೆಲ್ಲಿಂದ ಬಂದೀತು? ಹಾಳು ಮದುವೆ!! ಎಂದುಕೊಂಡು ಇವಳ ಕಂಡು ನಗುನಗುತ್ತ ವಾಕಿಂಗು ಮುಗಿಸಿದ. ಇವಳ ಮನಸಲ್ಲಿ ಮಾತ್ರ ಆ ನಗುವ ಕಂಡು ಅದ್ಯಾವ್ಯಾವ ನರಗಳಲ್ಲಿ ಏನೇನು ಹರಿದಾಡಿತೋ? ಹೊದಕಲು ಸರಿಸಿ ಕಣ್ಣು ಒಡೆಯುವುದರೊಳಗೆ ಬಿಮ್ಮನೆ ನೆತ್ತಿ ಬಿರಿಯೆ ಬಿಸಿಲು.
ಇದೆಂಥ ಕರ್ಮವೋ! ಸೈಕಲ್ಲು ಇತ್ತು. ಬೈಕು ತಗೊಂಡ. ಕಾರೂ ಆಯ್ತು. ಮುಂದೆ? ಅಜ್ಜನ ಕೋಲಿದು ನನ್ನಯ ಕುದುರೆ. ದೇವರು ಚಾಲಾಕಿ. ಬಿಟ್ಟರೆ ವಿಮಾನು ತೆಗೆದುಕೊಂಡೇ ತನ್ನ ಬಳಿ ಬರ್ತಾನೆ ಅಂತ ಕೋಲೂರಲಿಕ್ಕೂ ಆಗದಷ್ಟು ಶಕ್ತಿಯ ಉಳಿಸಿ ಈಗ ಸಾಯಿ ಮಗನೇ ಅಂದ. ಸತ್ತು ನೋಡಿಯೇ ಬಿಡುವ ಎಂದ ಅಜ್ಜ ವಾಪಸು ಬರಲಿಲ್ಲ.
ಏನೂ ಕೆಲಸ ಮಾಡದೇ ಇದ್ದರೆ ಆರಾಮ. ಆದರೆ ಯಾರೋ ಹಿಂದಿ ಭಾಷೆಯಲ್ಲಿ ಹೇಳಿದ್ದಾರೆ, ಆರಾಮ ಹರಾಮ ಹಯ್. ಈ ಹಯ್ ಎನ್ನು ಶಬ್ದವನ್ನು ಗದ್ದೆ ಹೂಡುವ ತುಳಸಪ್ಪನೂ ಬಳಸುತ್ತಿದ್ದ. ಏನೇ ಇರಲಿ. ಪೆನ್ಸಿಲ್ಲು ಮೊಂಡಾಯ್ತು. ನಲ್ಲಿಯಲ್ಲಿ ನೀರು ಸೋರುವ ಶಬ್ದ. ರಸ್ತೆಯಲ್ಲಿ ಕುಂಯ್.......... ಎಂದು ಉದ್ದ ಹಾರನ್ನು ಮಾಡುತ್ತ ಹೋದ ಒಂಟಿ ಕಾರು.
ಇಲ್ಲಿ ಬರೆದದ್ದು ಏನು ಅಂತ ನನಗೆ ಗೊತ್ತಿಲ್ಲ. ಇಲ್ಲಿಗಿದರ ಸಮಾರೋಪವು.
ಥೋ....... ಎಂದವರಿಗೆ ಧನ್ಯವಾದವು!
nice...
ReplyDeletetho... :-) :-)
ReplyDeleteToo Good... "Tho"
ReplyDelete